IND vs ZIM: ಏಕದಿನ ಸರಣಿಯಲ್ಲಿ ಭಾರತಕ್ಕೆ ಸವಾಲೊಡ್ಡುವ ಜಿಂಬಾಬ್ವೆ ತಂಡದ ಐವರು ಕ್ರಿಕೆಟಿಗರಿವರು | IND vs ZIM 5 Zimbabwe players are a threat to India


IND vs ZIM: T20 ಸರಣಿಯಲ್ಲಿ ಬಾಂಗ್ಲಾ ತಂಡವನ್ನು 2-1 ಅಂತರದಿಂದ ಮಣಿಸಿದ ಜಿಂಬಾಬ್ವೆ ಬಳಿಕ ODI ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು.

3 ಏಕದಿನ ಪಂದ್ಯಗಳ ಸರಣಿಗಾಗಿ ಟೀಂ ಇಂಡಿಯಾ (Team India) ಜಿಂಬಾಬ್ವೆಗೆ ತೆರಳಿದೆ. ಈ ಪ್ರವಾಸವನ್ನು ಭಾರತಕ್ಕೆ ಸುಲಭವೆಂದು ಪರಿಗಣಿಸಲಾಗಿದೆ. ಆದರೆ ಟೀಂ ಇಂಡಿಯಾ ಗೆಲುವಿಗೆ ತೊಡಕಾಗಬಲ್ಲ ಜಿಂಬಾಬ್ವೆಯ ಈ 5 ಆಟಗಾರರ ಬಗ್ಗೆ ರಾಹುಲ್ (KL Rahul) ಬಳಗ ಹೆಚ್ಚಿನ ಗಮನಹರಿಸಬೇಕಿದೆ. ಇತ್ತೀಚೆಗೆ ಈ ಆಟಗಾರರು ತಮಗಿಂತ ಬಲಿಷ್ಠವಾಗಿ ಕಾಣುವ ಬಾಂಗ್ಲಾದೇಶ ತಂಡವನ್ನೂ ಹೀನಾಯವಾಗಿ ಮಣಿಸಿದ್ದಾರೆ. T20 ಸರಣಿಯಲ್ಲಿ ಬಾಂಗ್ಲಾ ತಂಡವನ್ನು 2-1 ಅಂತರದಿಂದ ಮಣಿಸಿದ ಜಿಂಬಾಬ್ವೆ ಬಳಿಕ ODI ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ಹೀಗಾಗಿ ಭಾರತ ಎಚ್ಚರವಹಿಸಬೇಕಾದ ಈ 5 ಜಿಂಬಾಬ್ವೆ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.

ಸಿಕಂದರ್ ರಾಜಾ

ಸಿಕಂದರ್ ರಾಜಾ ಭಾರತಕ್ಕೆ ದೊಡ್ಡ ಗಂಡಾಂತರವಾಗಬಹುದು. ಏಕೆಂದರೆ ಬಾಂಗ್ಲಾದೇಶ ವಿರುದ್ಧದ ಟಿ20 ಹಾಗೂ ODI ಎರಡರಲ್ಲೂ ಅವರು ಬಿರುಸಿನ ಬ್ಯಾಟಿಂಗ್ ಮಾಡಿದ್ದರು. ಟಿ20ಯಲ್ಲಿ ರಾಜಾ ಸತತ 2 ಅರ್ಧಶತಕ ಹಾಗೂ 2 ವಿಕೆಟ್ ಪಡೆದಿದ್ದರು. ಹಾಗೆಯೇ ODI ಸರಣಿಯಲ್ಲಿ, ರಾಜಾ ಸತತ ಎರಡು ಶತಕಗಳನ್ನು ಗಳಿಸಿದ್ದರು. ಇದಲ್ಲದೇ ಚೆಂಡಿನಲ್ಲೂ ಅದ್ಭುತ ಪ್ರದರ್ಶನ ನೀಡಿ ಒಟ್ಟು 5 ವಿಕೆಟ್ ಪಡೆದಿದ್ದರು. ರಾಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಅವರನ್ನು ಲಘುವಾಗಿ ಪರಿಗಣಿಸುವ ತಪ್ಪನ್ನು ಮಾಡುವಂತಿಲ್ಲ.

ರೆಗಿಸ್ ಚಕಬ್ವಾ

ಜಿಂಬಾಬ್ವೆಯ ನಿಯಮಿತ ನಾಯಕ ಕ್ರೇಗ್ ಇರ್ವಿನ್ ಗಾಯಗೊಂಡಿದ್ದು, ಅವರ ಸ್ಥಾನಕ್ಕೆ ಬಲಿಷ್ಠ ಫಾರ್ಮ್‌ನಲ್ಲಿರುವ ರೆಗಿಸ್ ಚಕಬ್ವಾ ಬಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ T20 ಸರಣಿಯಲ್ಲಿ ಅವರ ಬ್ಯಾಟ್ ಅಬ್ಬರಿಸಲಿಲ್ಲ. ಆದರೆ ಅವರು ಎರಡನೇ ODI ನಲ್ಲಿ 102 ರನ್ ಗಳಿಸಿದರು. ಹೀಗಾಗಿ ಬ್ಯಾಟಿಂಗ್​ನಲ್ಲಿ ಅಬ್ಬರಿಸುವುದರೊಂದಿಗೆ ವಿಕೆಟ್ ಕೀಪಿಂಗ್​ನಲ್ಲೂ ಅವರು ಭಾರತಕ್ಕೆ ವಿಲನ್ ಆಗಬಹುದು.

ಕೀಯಾ ಇನ್ನೋಸೆಂಟ್

ಜಿಂಬಾಬ್ವೆ ಓಪನರ್ ಕೀಯಾ ಇನ್ನೋಸೆಂಟ್ ಫಾರ್ಮ್‌ನಲ್ಲಿ ಸ್ಥಿರವಾಗಿಲ್ಲದಿರಬಹುದು, ಆದರೆ ಒಮ್ಮೆ ಫಾರ್ಮ್​ಗೆ ಮರಳಿದರೆ ಭಾರತಕ್ಕೆ ಅಪಾಯವನ್ನುಂಟು ಮಾಡುವ ಸಾಮಥ್ಯ್ರ ಹೊಂದಿದ್ದಾರೆ.ಬಾಂಗ್ಲಾದೇಶದ ವಿರುದ್ಧದ ಮೊದಲ ODI ನಲ್ಲಿ ಅವರು 110 ರನ್ ಗಳಿಸಿದರು, ಇದರಲ್ಲಿ ಕೀಯಾ 11 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದರು. ಬಾಂಗ್ಲಾದೇಶಕ್ಕೂ ಮೊದಲು ಅವರು ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ವಿಕ್ಟರ್ ನೈಗಾಚಿ

ಜಿಂಬಾಬ್ವೆಯ ಬ್ಯಾಟಿಂಗ್ ವಿಭಾಗ ರಜಾ, ರೆಗಿಸ್, ಕಿಯಾ ನಿಭಾಯಿಸಲು ಸಿದ್ಧವಾಗಿದ್ದು, ಬೌಲಿಂಗ್ ವಿಭಾಗದ ಜವಾಬ್ದಾರಿ ವಿಕ್ಟರ್ ನೈಗಾಚಿ ಅವರ ಮೇಲಿದೆ. ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮಥ್ಯ್ರ ಕೂಡ ಇವರಲ್ಲಿದೆ. ಇದರೊಂದಿಗೆ ವಿಕೆಟ್ ಕಬಳಿಸಿ ರನ್ ಗಳಿಗೆ ಕಡಿವಾಣ ಹಾಕುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ 29 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಏಕದಿನ ಸರಣಿಯಲ್ಲಿ ಒಟ್ಟು 2 ವಿಕೆಟ್ ಕಬಳಿಸುವುದರ ಜೊತೆಗೆ ಕಳೆದ ಪಂದ್ಯದಲ್ಲಿ 26 ರನ್ ಗಳಿಸಿದ್ದರು. ಅವರು ಏಕದಿನ ಪಂದ್ಯಗಳಲ್ಲಿ ಕಡಿಮೆ ವಿಕೆಟ್‌ಗಳನ್ನು ಪಡೆದಿರಬಹುದು, ಆದರೆ ಅವರ ರನ್​ರೇಟ್ ಉತ್ತಮವಾಗಿದೆ.

ರಿಯಾನ್ ಬರ್ಲೆ

ರಿಯಾನ್ ಬರ್ಲೆ ಅವರನ್ನೂ ಕಡಿಮೆ ಅಂದಾಜು ಮಾಡುವ ತಪ್ಪನ್ನು ಕೆಎಲ್ ರಾಹುಲ್ ತಂಡ ಮಾಡುವಂತಿಲ್ಲ. ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟಿ20ಯಲ್ಲಿ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಆದರೆ ಬೌಲಿಂಗ್‌ನಲ್ಲಿ ಬರ್ಲೆಗೆ ಬಾಂಗ್ಲಾ ವಿರುದ್ಧ ಚಮತ್ಕಾರ ತೊರಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *