India vs New Zealand
ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ಅಂತಿಮ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕಿವೀಸ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಸನಿಹ ಬಂದರೂ, ಕಾನ್ಪುರ ಪಿಚ್ ಹೆಚ್ಚಿನ ನೆರವು ನೀಡದ ಕಾರಣ ಭಾರತ ತಂಡ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಹೀಗಾಗಿ ಶುಕ್ರವಾರದಿಂದ ನಡೆಯಲಿರುವ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾಕ್ಕೆ (Team India) ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿರುವ ಬಲವಿದ್ದರೆ, ಇತ್ತ ಇದುವರೆಗೆ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆಲ್ಲದ ಕೇನ್ ಪಡೆ (Kane Williamson) ಐತಿಹಾಸಿಕ ಗೆಲುವನ್ನು ಎದುರು ನೋಡುತ್ತಿದೆ. ಇದರ ನಡುವೆ ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಮಾರ್ಗದರ್ಶನದಲ್ಲಿ ವಿರಾಟ್ (Virat Kohli) ತಂಡವನ್ನು ಮುನ್ನಡೆಸಲಿದ್ದಾರೆ.
ಕಾನ್ಪುರ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಶ್ರೇಯಸ್ ಅಯ್ಯರ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೆಯದ್ದರಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದರಿಂದಾಗಿ ಅವರು ತಮ್ಮ ತವರು ಅಂಗಳದಲ್ಲಿ ಆಡುವ ಅವಕಾಶ ಪಡೆಯುವುದು ಖಚಿತ. ಆದರೆ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದ ಸತತ ವೈಫಲ್ಯ ಅನುಭವಿಸುತ್ತಿರುವ ಮಯಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಅವರಲ್ಲಿ ಒಬ್ಬರು ಸ್ಥಾನ ಬಿಟ್ಟುಕೊಡಬೇಕಾಗಬಹುದು.
ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ ಅವರಿಗೆ ವಿಶ್ರಾಂತಿ ನೀಡಿ ಕೆಎಸ್ ಭರತ್ಗೆ ಅವಕಾಶ ನೀಡುವ ಚಾನ್ಸ್ ಇದೆ. ಆಗ ಅಗರ್ವಾಲ್ ಕೈಬಿಟ್ಟು ಶುಭ್ಮನ್ ಗಿಲ್ ಜೊತೆ ಭರತ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲು ಬರಲಿದ್ದಾರೆ. 5ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಆಡಿದರೆ, ಆರನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಲಿದ್ದಾರೆ. ಇನ್ನು ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಸ್ಥಾನ ಖಚಿತವಾಗಿದೆ. ವೇಗಿಗಳಾಗಿ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಇದ್ದಾರೆ. ಈ ಪೈಕಿ ಇಶಾಂತ್ ಬದಲು ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಇಶಾಂತ್ ಅಷ್ಟೊಂದು ಕಮಾಲ್ ಮಾಡಲಿಲ್ಲ.
ಇತ್ತ ಕಾನ್ಪುರದ ದಿಟ್ಟ ನಿರ್ವಹಣೆ ನಡುವೆಯೂ ಪ್ರವಾಸಿ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಾಂಖೆಡೆ ಪಿಚ್ ವೇಗಿಗಳಿಗೂ ನೆರವಾಗುವ ನಿರೀಕ್ಷೆ ಇರುವುದರಿಂದ 3ನೇ ವೇಗಿಯಾಗಿ ನೀಲ್ ವ್ಯಾಗ್ನರ್ ಕಣಕ್ಕಿಳಿಯಬಹುದು. ಅವರಿಗೆ ಸ್ಪಿನ್ನರ್ ವಿಲಿಯಮ್ ಸಮರ್‌ವಿಲ್ ಸ್ಥಾನ ಬಿಟ್ಟುಕೊಡಬೇಕಾದೀತು.
ಪಿಚ್ ಹೇಗಿದೆ?:
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಆದರೆ ಪಿಚ್ ಹಸಿರಾಗಿರಲಿದೆ ಎಂದು ಕೆಲ ವರದಿಗಳು ತಿಳಿಸಿವೆ. ಮೊದಲ ದಿನದಿಂದಲೇ ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್ ಸಿದ್ಧಗೊಳಿಸಿದ್ದೇವೆ. ಆತಿಥೇಯ ತಂಡದ ಬಲಕ್ಕೆ ತಕ್ಕ ಪಿಚ್ ನಿರ್ಮಿಸಿದ್ದೇವೆ ಎಂದು ಆತಿಥೇಯ ಮುಂಬೈ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈ ಬಾರಿ ಕಿವೀಸ್‌ಗೆ ಹೆಚ್ಚಿನ ಸ್ಪಿನ್ ಸವಾಲು ಎದುರಾಗುವ ನಿರೀಕ್ಷೆ ಇದೆ.
ಮುಂಬೈ ಹವಾಮಾನ ವರದಿ:
ಮುಂಬೈನಲ್ಲಿ ಗುರುವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಶುಕ್ರವಾರದ ಪಂದ್ಯದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಯಾಕೆಂದರೆ ಒದ್ದೆಯಾದ ಪಿಚ್‌ನ ಹೊರಾಂಗಣ ಪಂದ್ಯಕ್ಕೆ ಪರಿಣಾಮವುಂಟು ಮಾಡಬಹುದು. ಅಲ್ಲದೆ ಹವಾಮಾನ ತಜ್ಞರ ಮಾಹಿತಿ ಪ್ರಕಾರ ಶುಕ್ರವಾರ ಕೂಡ ಮಳೆಯುಆಗುವ ಸಾಧ್ಯತೆಯಿದ್ದು ಮೊದಲ ದಿನದ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹೀಗಾಘಿ ಮೊದಲ ದಿನ ಸಂಪೂರ್ಣ ಪ್ರಮಾಣದಲ್ಲಿ ಆಟ ನಡೆಯುವ ಸಾಧ್ಯತೆ ಕಡಿಮೆಯಿದೆ. ಆದರೆ ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು ಉತ್ತಮ ಪ್ರಮಾಣದ ಬಿಸಿಲಿನೊಂದಿಗೆ ಪಂದ್ಯ ಸಾಗುವ ನಿರೀಕ್ಷೆಯಿದೆ. 25-30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.
(India vs New Zealand second Test begins Friday at the Wankhede Stadium and skipper Virat Kohli runs into multiple challenges)