Team India
ಶುಕ್ರವಾರದಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಅತ್ತ ಮುಂಬೈನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದು ಪಂದ್ಯದ ಪ್ಲೇಯಿಂಗ್-11 ಮೇಲೆ ಪರಿಣಾಮ ಬೀರಬಹುದು. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli), ಕಳೆದ 3 ದಿನಗಳಿಂದ ಮುಂಬೈನಲ್ಲಿ ಮಳೆಯಾಗುತ್ತಿದೆ. ಇದರಿಂದ ಯಾವುದೇ ತಂಡಕ್ಕೆ ಮೈದಾನದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಪಿಚ್‌ನ ವಿಷಯಕ್ಕೆ ಬಂದರೆ, ಅದೂ ಎರಡು ದಿನಗಳಿಂದ ಕವರ್‌ಗಳಿಂದ ಮುಚ್ಚಲ್ಪಟ್ಟಿದೆ. ಅಂದರೆ, ಪಿಚ್‌ನಲ್ಲಿ ತೇವಾಂಶವಿದ್ದು ಹೀಗಾಗಿ ವೇಗದ ಬೌಲರ್‌ಗಳು ಇದರ ಲಾಭ ಪಡೆಯಬಹುದು.
ಇನ್ನೊಂದೆಡೆ ಕೊಹ್ಲಿಯ ಆಗಮನದಿಂದಾಗಿ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿದ ಒಬ್ಬ ಆಟಗಾರ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಅದು ಯಾರಾಗಲಿದ್ದಾರೆ ಎಂಬ ಕುತೂಹಲ ಕೂಡ ಎಲ್ಲರಲ್ಲಿದೆ. ಮತ್ತೊಂದೆಡೆ ಮಳೆಯ ಕಾರಣ ಪ್ಲೇಯಿಂಗ್ 11 ಅನ್ನು ಶುಕ್ರವಾರ ಬೆಳಿಗ್ಗೆ ನಿರ್ಧರಿಸಲಾಗುತ್ತದೆ ಎಂದು ಕೊಹ್ಲಿ ತಿಳಿಸಿದ್ದಾರೆ.
ಪ್ಲೇಯಿಂಗ್ 11ನಿಂದ ಯಾರು ಹೊರಗುಳಿಯಲ್ಲಿದ್ದಾರೆ?
ಮುಂಬೈ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಮರಳುತ್ತಿದ್ದು, ಕಾನ್ಪುರ ಟೆಸ್ಟ್‌ನಲ್ಲಿ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡದ ಮುನ್ನಡೆಸಿದ್ದರು. ಇನ್ನು ಕೊಹ್ಲಿ ಸ್ಥಾನದಲ್ಲಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇಯಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಆದರೆ ಮತ್ತೊಂದೆಡೆ ಅಜಿಂಕ್ಯ ರಹಾನೆ ಅವರ ಫಾರ್ಮ್ ಈಗ ಚರ್ಚೆಗೆ ಕಾರಣವಾಗಿದೆ. ಜೊತೆಗೆಚೇತೇಶ್ವರ ಪೂಜಾರ ಮತ್ತು ಮಯಾಂಕ್ ಅಗರ್ವಾಲ್ ಕೂಡ ಸತತ ವಿಫಲರಾಗಿದ್ದಾರೆ. ಅದರಲ್ಲೂ ಕಳೆದ 12 ತಿಂಗಳುಗಳಲ್ಲಿ ರಹಾನೆ ಮತ್ತು ಪೂಜಾರ ಪ್ರದರ್ಶನಗಳು ಮಂಕಾಗಿದೆ. ಕಾನ್ಪುರ ಟೆಸ್ಟ್‌ನಲ್ಲೂ ಇಬ್ಬರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಆದರೆ ರಹಾನೆ ತಂಡದ ಉಪನಾಯಕನಾಗಿದ್ದು, ಕೋಚ್ ರಾಹುಲ್ ದ್ರಾವಿಡ್ ಪೂಜಾರ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಅಂತಿಮವಾಗಿ ಯಾರನ್ನು ಕೈಬಿಡಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಒಟ್ಟಿನಲ್ಲಿ ಮುಂಬೈ ಟೆಸ್ಟ್ ಇದೀಗ ವಿರಾಟ್ ಕೊಹ್ಲಿ ಆಗಮನದಿಂದಾಗಿ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಕೊಹ್ಲಿಯ ಎಂಟ್ರಿಯಿಂದ ಯಾರು ಹೊರಬೀಳಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಮಯಾಂಕ್, ರಹಾನೆ ಅಥವಾ ಪೂಜಾರ ಮೂವರಲ್ಲಿ ಒಬ್ಬರ ತಲೆದಂಡವಾಗಲಿದೆ. ಅದರಂತೆ ಅಂತಿಮವಾಗಿ ರಾಹುಲ್ ದ್ರಾವಿಡ್ ಯಾರಿಗೆ ಚಾನ್ಸ್ ನೀಡಲಿದ್ದಾರೆ ಕಾದು ನೋಡಬೇಕಿದೆ.
ಭಾರತ ತಂಡ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಾಹ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್ , ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್
ನ್ಯೂಜಿಲೆಂಡ್ ತಂಡ: ಟಾಮ್ ಲಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್‌ವಿಲ್ಲೆ, ಎಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ಗಿಲೆನ್ ವ್ಯಾಗ್ನರ್ ಫಿಲಿಪ್ಸ್, ಡೇರಿಲ್ ಮಿಚೆಲ್