India vs New Zealand 1st Test: ರೋಚಕ ಘಟ್ಟದಲ್ಲಿ ಕಾನ್ಪುರ ಟೆಸ್ಟ್: ಭಾರತದ ಗೆಲುವಿಗೆ ಬೇಕು ನ್ಯೂಜಿಲೆಂಡ್​ನ 9 ವಿಕೆಟ್ | New Zealand ended the fourth day of the Test at 4 1 India need 9 wickets to win the First Test


India vs New Zealand 1st Test: ರೋಚಕ ಘಟ್ಟದಲ್ಲಿ ಕಾನ್ಪುರ ಟೆಸ್ಟ್: ಭಾರತದ ಗೆಲುವಿಗೆ ಬೇಕು ನ್ಯೂಜಿಲೆಂಡ್​ನ 9 ವಿಕೆಟ್

IND vs NZ 1st Test Day 5

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand 1st Test) ನಡುವಣ ಪ್ರಥಮ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇಂದು ಅಂತಿಮ ಕೊನೇ ದಿನದಾಟ ನಡೆಯಲಿದ್ದು, ನ್ಯೂಜಿಲೆಂಡ್ ಗೆಲುವಿಗೆ 280 ರನ್​ಗಳ ಅವಶ್ಯಕತೆಯಿದ್ದರೆ, ಟೀಮ್ ಇಂಡಿಯಾ (Team India) ಗೆಲುವಿಗಾಗಿ ಕೇನ್ ಪಡೆಯ 9 ವಿಕೆಟ್ ಕೀಳಬೇಕಿದೆ. ಹೀಗಾಗಿ ಇಂದಿನ 5ನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ. ಭಾರತದ ಪ್ರಮುಖ ಅಸ್ತ್ರ ಸ್ಪಿನ್ನರ್​ಗಳೇ ಆಗಿರುವುದರಿಂದ ಕಿವೀಸ್ ಪಡೆ ಅಶ್ವಿನ್ (R Ashwin), ಜಡೇಜಾ (Jadeja) ಮತ್ತು ಅಕ್ಷರ್ ಪಟೇಲ್​ರನ್ನು (Axar Patel) ಎದುರಿಸಲು ಯಾವರೀತಿ ಪ್ಲಾನ್ ಮಾಡಿದೆ ಎಂಬೂದು ಕುತೂಹಲ ಕೆರಳಿಸಿದೆ.

ಭಾರತ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ, ನ್ಯೂಜಿಲೆಂಡ್‌ಗೆ 284 ರನ್ ಗೆಲುವಿನ ಗುರಿ ನೀಡಿತು. ನಾಲ್ಕನೇ ದಿನದ ಆಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿದೆ. ಆರ್.ಅಶ್ವಿನ್ ಅವರು 1 ವಿಕೆಟ್ ಪಡೆದಿದ್ದಾರೆ. ವಿಲ್ ಯಂಗ್ ಅವರು 2 ರನ್ ಗಳಿಸಿ ಔಟಾಗಿದ್ದು, ಸದ್ಯ ಟಾಮ್ ಲ್ಯಾಥಂ ಹಾಗೂ ವಿಲಿಯಂ ಸೊಮರ್ವಿಲ್ಲೆ ಕ್ರೀಸ್‌ನಲ್ಲಿದ್ದಾರೆ.

ಇದಕ್ಕೂ ಮುನ್ನ ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿದ್ದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಒಂದು ಹಂತದಲ್ಲಿ ಕೇವಲ 51 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಆಡುತ್ತಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್, ರವಿಚಂದ್ರನ್ ಅಶ್ವಿನ್ ಹಾಗೂ ವೃದ್ದಿಮಾನ್ ಸಾಹ ಆಸರೆಯಾದರು. ಟೀಮ್ ಇಂಡಿಯಾ ಪರವಾಗಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರು ಅಯ್ಯರ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ಇವರು ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್‌ಗಳ ಕೊಡುಗೆ ನೀಡಿದರು.

ಆರ್ ಅಶ್ವಿನ್ 32 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು. ಶ್ರೇಯಸ್ ಅವರು ಕೂಡ ಜೇಮಿಸನ್ ಎಸೆತಕ್ಕೆ ಔಟಾದ ಬಳಿಕ ವೃದ್ಧಿಮಾನ್ ಸಾಹಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಸಾಹ ಆಕರ್ಷಕ ಆಟದ ಮೂಲಕ ಆಧಾರವಾದರು. ಇವರು ಔಟಾಗದೆ 61 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಕೂಡ ಅಜೇಯ 28 ರನ್‌ಗಳಿಸಿದರು. ಈ ಮೂಲಕ ಭಾರತ 234 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

284 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ನ್ಯೂಜಿಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಲ್ಕು ಓವರ್‌ಗಳಲ್ಲಿ 4 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಇಂದು ಐದನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡವನ್ನು ಶೀಘ್ರವಾಗಿ ಆಲೌಟ್ ಮಾಡಿ ಗೆಲುವು ಸಾಧಿಸಬೇಕೆಂಬ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಇದೆ. ಇತ್ತ ನ್ಯೂಜಿಲೆಂಡ್ ತಂಡ ಗೆಲುವು ಸಾಧ್ಯವಾಗದೇ ಇದ್ದರೂ ಕನಿಷ್ಠ ಪಂದ್ಯವನ್ನು ಡ್ರಾ ಮಾಡುವತ್ತ ಚಿತ್ತ ನೆಟ್ಟಿದೆ.

4ನೇ ದಿನದಾಟದ ಅಂತ್ಯಕ್ಕೆ ಸ್ಕೋರ್:

ಭಾರತ: ಮೊದಲ ಇನ್ನಿಂಗ್ಸ್ ರನ್ 345, ಎರಡನೇ ಇನ್ನಿಂಗ್ಸ್ 234-7 ಡಿಕ್ಲೇರ್ (ಶ್ರೇಯಸ್ ಅಯ್ಯರ್ 65, ವೃದ್ಧಿಮಾನ್ ಸಾಹ 61*, ಟಿಮ್ ಸೌಥಿ 75ಕ್ಕೆ 3, ಕೈಲ್ ಜೇಮಿಸನ್ 40ಕ್ಕೆ 3)

ನ್ಯೂಜಿಲೆಂಡ್: ಮೊದಲ ಇನ್ನಿಂಗ್ಸ್ ರನ್ 296, ಎರಡನೇ ಇನ್ನಿಂಗ್ಸ್ 4-1.

Ravichandran Ashwin: ಪಾಕ್ ವೇಗಿಯ ಶ್ರೇಷ್ಠ ದಾಖಲೆ ಮುರಿದ ಅಶ್ವಿನ್..!

(New Zealand ended the fourth day of the Test at 4-1 India need 9 wickets to win the First Test)

TV9 Kannada


Leave a Reply

Your email address will not be published. Required fields are marked *