India vs New Zealand T20: ಇಂದು ಭಾರತ-ನ್ಯೂಜಿಲೆಂಡ್ 2ನೇ ಟಿ20: ಗೆದ್ದು ಸರಣಿ ವಶಪಡಿಸಿಕೊಳ್ಳುತ್ತ ರೋಹಿತ್ ಪಡೆ? | India vs New Zealand, 2nd T20I India will be eager to seal the T20I series against New Zealand


India vs New Zealand T20: ಇಂದು ಭಾರತ-ನ್ಯೂಜಿಲೆಂಡ್ 2ನೇ ಟಿ20: ಗೆದ್ದು ಸರಣಿ ವಶಪಡಿಸಿಕೊಳ್ಳುತ್ತ ರೋಹಿತ್ ಪಡೆ?

India vs New Zealand 2nd T20

ನ್ಯೂಜಿಲೆಂಡ್ (New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 5 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ (India) ಇದೀಗ ಎರಡನೇ ಕದನಕ್ಕೆ ಸಜ್ಜಾಗಿದೆ. ಇಂದು ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ (India vs New Zealand) ನಡುವೆ ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಮತ್ತೊಂದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ರೋಹಿತ್ (Rohit Sharma) ಪಡೆ ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಇತ್ತ ಟಿಮ್ ಸೌಧಿ (Tim Southee) ಪಡೆ ಸೇಡಿಗಾಗಿ ಕಾಯುತ್ತಿದೆ. ಅಲ್ಲದೆ ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿನ ವೈಫಲ್ಯವನ್ನು ಮರೆಮಾಚಲು ಟೀಮ್ ಇಂಡಿಯಾಕ್ಕೆ (Team India) ಈ ಸರಣಿ ಬಹುಮುಖ್ಯವಾಗಿದ್ದು, ಕ್ಲೀನ್ ಸ್ವೀಪ್ ಮಾಡುವ ಪ್ಲಾನ್ ರೂಪಿಸಿದ್ದರೂ ಅಚ್ಚರಿ ಪಡಬೇಕಿಲ್ಲ.

ಭಾರತದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಭರ್ಜರಿ ಫಾರ್ಮ್​ನಲ್ಲಿದ್ದು, ತಂಡಕ್ಕೆ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಗೈರುಹಾಜರಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಕೂಡ ಈಗಾಗಲೇ ನ್ಯೂಜಿಲೆಂಡ್​ಗೆ ಬಿಸಿ ಮುಟ್ಟಿಸಿದ್ದಾರೆ. ಕಳೆದ ಪಂದ್ಯದಲ್ಲಿ ಇವರು 42 ಎಸೆತಗಳಲ್ಲಿ 62 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು, ಅನುಭವಿ ಶ್ರೇಯಸ್ ಅಯ್ಯರ್ ಮತ್ತು ಹೊಸ ಪ್ರತಿಭೆ ವೆಂಕಟೇಶ್ ಅಯ್ಯರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಮಧ್ಯಮ ಕ್ರಮಾಂಕ ಬಲಿಷ್ಠವಾಗುವುದು ಖಚಿತ. ರಿಷಭ್ ಪಂತ್ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಬೀಸುತ್ತಿದ್ದಾರೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ್ದರು. ಆದರೆ ಅಶ್ವಿನ್ ಮತ್ತು ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಮೊಹಮ್ಮದ್ ಸಿರಾಜ್ ಕೂಡ ದುಬಾರಿಯಾಗಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.

ಇತ್ತ ನಿಯಮಿತ ನಾಯಕ ಕೇನ್‌ ವಿಲಿಯಮ್ಸನ್‌ ಹಾಗೂ ಕೈಲ್‌ ಜೇಮಿಸನ್‌ ಅವರ ಅನುಪಸ್ಥಿತಿಯಲ್ಲಿ ಮೊದಲನೇ ಪಂದ್ಯ ಸೋತಿರುವ ನ್ಯೂಜಿಲೆಂಡ್ ತಂಡ ಹೊಸ ಗೇಮ್ ಪ್ಲಾನ್​ನೊಂದಿಗೆ ಕಣಕ್ಕಿಳಿಯುವುದು ಖಚಿತ. ಭಾರತಕ್ಕೆ ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್‌ಮನ್ ಅವರದ್ದೇ ಭಯ. ಭರ್ಜರಿ ಫಾರ್ಮ್​ನಲ್ಲಿರುವ ಇವರು ಮೂಲೆಮೂಲೆಗೆ ಚೆಂಡನ್ನು ಅಟ್ಟುತ್ತಿದ್ದಾರೆ. ಡೆರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್‌ ಲಯಕ್ಕೆ ಮರಳಿದರೆ ತಂಡದ ಬ್ಯಾಟಿಂಗ್ ಬಲಿಷ್ಠವಾಗುವುದು ಖಚಿತ.

ಆದರೆ, ಕಿವೀಸ್ ಬೌಲಿಂಗ್‌ ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ. ಟಿಮ್ ಸೌದಿ ಮತ್ತು ಟ್ರೆಂಟ್ ಬೌಲ್ಟ್ ಸ್ವಿಂಗ್ ಜಾದು ನಿರೀಕ್ಷೆಯ ಮಟ್ಟಕ್ಕೆ ತಲುಪಿಲ್ಲ. ಮಿಚೆಲ್ ಸ್ಯಾಂಟನರ್ ಅವರು ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಿಗೆ ಇತರೆ ಬೌಲರ್​ಗಳು ಸಾಥ್ ನೀಡಬೇಕಿದೆಯಷ್ಟೆ.

ಇಂಡೋ- ಕಿವೀಸ್ ಎರಡನೇ ಟಿ20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಟಾಸ್ ಪ್ರಕ್ರಿಯೆ 6:30ಕ್ಕೆ ನಡೆಯಲಿದೆ. ಪಂದ್ಯದ ನೇರಪ್ರವಾಸ ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್​ನಲ್ಲಿ ಕೂಡ ನೇರಪ್ರಸಾರ ಕಾಣಲಿದೆ.

IND vs NZ 2021: ರಾಂಚಿ ಪಿಚ್​ನಲ್ಲಿ ಗೆಲ್ಲೋರ್ಯಾರು? ಈ ಹಿಂದಿನ ಅಂಕಿ ಅಂಶಗಳು ಏನು ಹೇಳುತ್ತೆ?

(India vs New Zealand 2nd T20I India will be eager to seal the T20I series against New Zealand)

TV9 Kannada


Leave a Reply

Your email address will not be published. Required fields are marked *