India vs Sri Lanka
ಫೆಬ್ರವರಿ-ಮಾರ್ಚ್ನಲ್ಲಿ ತವರಿನಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಮೂರು ಟಿ20 ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಇದೀಗ ಬದಲಿಸಲಾಗಿದ್ದು, ಅದರಂತೆ ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಮೊದಲು ನಡೆಯಲಿದೆ. ಆ ಬಳಿಕ ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ. ಈ ಮೊದಲು ಟೆಸ್ಟ್ ಸರಣಿ ಬಳಿಕ ಟಿ20 ಸರಣಿ ನಡೆಸಲು ನಿರ್ಧರಿಸಲಾಗಿತ್ತು. ಇದೀಗ ಫೆಬ್ರವರಿ 24 ರಿಂದ ಟಿ20 ಸರಣಿಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಇನ್ನು ಈ ಸರಣಿಯ ಪ್ರಮುಖ ವಿಷಯವೆಂದರೆ ಡೇ-ನೈಟ್ ಟೆಸ್ಟ್ . ಹೌದು, ಭಾರತ ತಂಡ ಒಂದು ವರ್ಷದ ನಂತರ ಮತ್ತೆ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮಾರ್ಚ್ 12 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.
ಮಂಡಳಿಯ ಕಾರ್ಯದರ್ಶಿ ಜಯ್ ಶಾ ಬಿಡುಗಡೆ ಮಾಡಿರುವ ಹೊಸ ವೇಳಾಪಟ್ಟಿ ಪ್ರಕಾರ , ಟಿ20 ಸರಣಿಯ ಮೊದಲ ಪಂದ್ಯ ಫೆಬ್ರವರಿ 24 ರಂದು ಲಕ್ನೋದಲ್ಲಿ ನಡೆಯಲಿದೆ. ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳು ನಡೆಯಲಿವೆ. ಕೊರೋನಾ ಹಿನ್ನೆಲೆಯಲ್ಲಿ ಸ್ಥಳವನ್ನು ಕಡಿತಗೊಳಿಸಲಾಗಿದೆ. ಹಾಗೆಯೇ ಟೆಸ್ಟ್ನ ಪಂದ್ಯಗಳು ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಮಾರ್ಚ್ 4 ರಿಂದ 8 ರವರೆಗೆ ಮೊಹಾಲಿಯಲ್ಲಿ ನಡೆಯಲಿದೆ. ಹಾಗೆಯೇ ಎರಡನೇ ಡೇ ನೈಟ್ ಟೆಸ್ಟ್ ಮಾರ್ಚ್ 12 ರಿಂದ 16 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಟೀಮ್ ಇಂಡಿಯಾಗೆ ಹೊಸ ಟೆಸ್ಟ್ ನಾಯಕ:
ಶ್ರೀಲಂಕಾ ಸರಣಿಯ ವೇಳೆ ಟೀಮ್ ಇಂಡಿಯಾಗೆ ಹೊಸ ಟೆಸ್ಟ್ ನಾಯಕನನ್ನು ಆಯ್ಕೆ ಮಾಡಲಿದೆ. ಟಿ20 ಮತ್ತು ಏಕದಿನ ನಂತರ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ತಂಡದ ನಾಯಕರನ್ನಾಗಿಯೂ ಮಾಡಬಹುದು. ಅವರನ್ನು ಈಗಾಗಲೇ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಹಿಟ್ಮ್ಯಾನ್ ಅವರನ್ನೇ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ನೇಮಿಸಬಹುದು.
ಶ್ರೀಲಂಕಾ ವಿರುದ್ದದ ಸರಣಿಯ ವೇಳಾಪಟ್ಟಿ ಹೀಗಿದೆ:
1ನೇ ಟಿ20: ಫೆಬ್ರವರಿ 24 (ಲಕ್ನೋ)
ಎರಡನೇ ಟಿ20: ಫೆಬ್ರವರಿ 26 (ಧರ್ಮಶಾಲಾ)
ಮೂರನೇ ಟಿ20: ಫೆಬ್ರವರಿ 27 (ಧರ್ಮಶಾಲಾ)
1ನೇ ಟೆಸ್ಟ್: 4 ರಿಂದ 8 ಮಾರ್ಚ್ (ಮೊಹಾಲಿ)
2ನೇ ಟೆಸ್ಟ್ (ಹಗಲು-ರಾತ್ರಿ): ಮಾರ್ಚ್ 12-16 (ಬೆಂಗಳೂರು)