Indian Film Personality Of The Year: ಚಿರಂಜೀವಿ ಸಾಧನೆಗೆ ನರೇಂದ್ರ ಮೋದಿ ಅಭಿನಂದನೆ – Narendra Modi congratulates Megastar Chiranjeevi for Indian Film Personality Of The Year award


Megastar Chiranjeevi | PM Narendra Modi: 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಮೆಗಾ ಸ್ಟಾರ್​ ಚಿರಂಜೀವಿ ಭಾಜನರಾಗಿದ್ದಾರೆ. ಅವರ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

Indian Film Personality Of The Year: ಚಿರಂಜೀವಿ ಸಾಧನೆಗೆ ನರೇಂದ್ರ ಮೋದಿ ಅಭಿನಂದನೆ

ಮೆಗಾ ಸ್ಟಾರ್ ಚಿರಂಜೀವಿ, ನರೇಂದ್ರ ಮೋದಿ

ತೆಲುಗು ಚಿತ್ರರಂಗದ ಖ್ಯಾತ ನಟ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಅವರಿಗೆ 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿ ಘೋಷಿಸಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ನ.20ರಂದು ಗೋವಾದಲ್ಲಿ 53ನೇ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ ಆರಂಭ ಆಗಿದೆ. ಈ ವೇಳೆ ಕೇಂದ್ರ ವಾರ್ತಾ ಸಚಿವ ಅನುರಾಗ್​ ಠಾಕೂರ್​ ಅವರು ಚಿರಂಜೀವಿಗೆ ಈ ಪ್ರಶಸ್ತಿ ಘೋಷಿಸಿದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೂಡ ಟ್ವೀಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ, ಚಿರಂಜೀವಿ ಅವರ ಸಾಧನೆಯನ್ನು ಅವರು ಕೊಂಡಾಡಿದ್ದಾರೆ. ಸದ್ಯ ಈ ಟ್ವೀಟ್​ (Narendra Modi Tweet) ವೈರಲ್​ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಜಿರಂಜೀವಿ ಅವರದ್ದು ಗಮನಾರ್ಹ ವ್ಯಕ್ತಿತ್ವ. ಅಗಾಧವಾದ ಕೆಲಸ, ವಿಭಿನ್ನವಾದ ಪಾತ್ರಗಳು ಹಾಗೂ ಅದ್ಭುತ ವ್ಯಕ್ತಿತ್ವದ ಕಾರಣದಿಂದಾಗಿ ಹಲವು ಪೀಳಿಗೆಯ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಾರೆ. 2022ನೇ ಸಾಲಿನ ಭಾರತೀಯ ಸಿನಿಮಾ ವ್ಯಕ್ತಿ ಪ್ರಶಸ್ತಿಗೆ ಭಾಜನವಾಗಿರುವ ಚಿರಂಜೀವಿ ಅವರಿಗೆ ಅಭಿನಂದನೆಗಳು’ ಎಂದು ತೆಲುಗು ಮತ್ತು ಇಂಗ್ಲಿಷ್​ನಲ್ಲಿ ಮೋದಿ ಟ್ವೀಟ್​ ಮಾಡಿದ್ದಾರೆ.

ನಾಲ್ಕು ದಶಕಗಳಿಂದಲೂ ಭಾರತೀಯ ಚಿತ್ರರಂಗಕ್ಕೆ ಚಿರಂಜೀವಿ ಅವರು ಕೊಡುಗೆ ನೀಡುತ್ತಾ ಬಂದಿದ್ದಾರೆ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ನಟನಾಗಿ, ನಿರ್ಮಾಪಕನಾಗಿ ಚಿರಂಜೀವಿ ಸಕ್ರಿಯರಾಗಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇಂದಿಗೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಪದ್ಮ ಭೂಷಣ, ನಂದಿ ಪ್ರಶಸ್ತಿ, ಫಿಲ್ಮ್​ ಫೇರ್​ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಈಗಾಗಲೇ ಚಿರಂಜೀವಿ ಅವರ ಮುಡಿಗೇರಿವೆ. ಈಗ 2022ನೇ ಸಾಲಿನ ‘ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಇಂದಿಗೂ ದಣಿವರಿಯದ ಯುವಕನಂತೆ ಚಿರಂಜೀವಿ ಅವರು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ‘ಗಾಡ್​ ಫಾದರ್​’ ಸಿನಿಮಾ ತೆರೆಕಂಡಿತು. ಅದರಲ್ಲಿ ಸಲ್ಮಾನ್​ ಖಾನ್​ ಕೂಡ ನಟಿಸಿದ್ದರು.

ಚಿತ್ರರಂಗದ ಅನೇಕ ಸಂಗತಿಗಳಿಗೆ ಮೋದಿ ಅವರು ಪ್ರತಿಕ್ರಿಯಿಸುತ್ತಾರೆ. ಇತ್ತೀಚೆಗೆ ಮಹೇಶ್​ ಬಾಬು ಅವರ ತಂದೆ ಸೂಪರ್​ ಸ್ಟಾರ್​ ಕೃಷ್ಣ ನಿಧನರಾದಾಗಲೂ ಕೂಡ ಅವರು ಟ್ವಿಟರ್​ ಮೂಲಕ ಸಂತಾಪ ಸೂಚಿಸಿದ್ದರು. ‘ಕೃಷ್ಣ ಅವರು ಲೆಜೆಂಡರಿ ನಟನಾಗಿದ್ದರು. ತಮ್ಮ ವ್ಯಕ್ತಿತ್ವ ಮತ್ತು ನಟನೆ ಮೂಲಕ ಅವರು ಜನರ ಹೃದಯ ಗೆದ್ದಿದ್ದರು. ಅವರ ನಿಧನದಿಂದ ಸಿನಿಮಾ ಜಗತ್ತಿಗೆ ದೊಡ್ಡ ನಷ್ಟ ಆಗಿದೆ. ಈ ಕಷ್ಟದ ಸಂದರ್ಭದಲ್ಲಿ ಮಹೇಶ್​ ಬಾಬು ಮತ್ತು ಅವರ ಕುಟುಂಬದವರಿಗಾಗಿ ನನ್ನ ಪ್ರಾರ್ಥನೆಗಳು. ಓಂ ಶಾಂತಿ’ ಎಂದು ಮೋದಿ ಪೋಸ್ಟ್​ ಮಾಡಿದ್ದರು.

TV9 Kannada


Leave a Reply

Your email address will not be published.