ದೇಶದಲ್ಲಿ ಕೊರೊನಾ ಎಂಬ ಹೆಮ್ಮಾರಿ ದಿನೇ ದಿನೆ ಅಟ್ಟಹಾಸ ಮೆರೆಯುತ್ತಿದೆ. ಈಗಾಗಲೇ ದೇಶ ಅರ್ಧ ಲಾಕ್​ಡೌನ್​ ಆಗಿದೆ. ಇತ್ತ ಕಿಲ್ಲರ್​ ಕೊರೊನಾಗೆ ಸೆಡ್ಡು ಹೊಡೆದ ವಿಶ್ವ ಶ್ರೀಮಂತ ಕ್ರಿಕೆಟ್​ ಸಂಸ್ಥೆ  ಶ್ರೀಮಂತ ಕ್ರಿಕೆಟ್​ ಲೀಗನ್ನ ಯಶಸ್ವಿಯಾಗಿ ಮುನ್ನಡೆಸುತ್ತಾ ಸಾಗ್ತಿದೆ. ಆದ್ರೆ ಮಹಾಮಾರಿ ಒಂದಿಲ್ಲೊಂದು ರೂಪದಲ್ಲಿ ಐಪಿಎಲ್​ ಫ್ರಾಂಚೈಸಿಗಳಿಗೆ ತಲೆಬಿಸಿ ಹೆಚ್ಚಿಸ್ತಿದೆ.

ಕೊರೊನಾ 2ನೇ ಅಲೆ ಐಪಿಎಲ್​ ಫ್ರಾಂಚಿಸಿಗಳಿಗೆ ಟೆನ್ಷನ್​

ಈಗಾಗಲೇ ಕೊರೊನಾ ಮಹಾಮಾರಿಯ ಹೊಡೆತಕ್ಕೆ ಫ್ರಾಂಚೈಸಿಗಳ ಬ್ರ್ಯಾಂಡ್​ ವಾಲ್ಯೂ ಕುಸಿದು ಬಿಂದಿದೆ. ಈ ನಡುವೆ ಕೊರೊನಾ 2ನೇ ಅಲೆ ದೇಶದಲ್ಲಿ ವಿಜೃಭಿಸುತ್ತಿದೆ. ಇದೇ ಕಾರಣ ಭಯಭೀತಗೊಂಡಿರುವ ಕೆಲ ವಿದೇಶಿ ಆಟಗಾರರು ಈಗಾಗಲೇ ಸ್ವದೇಶಕ್ಕೆ ಹಿಂತಿರುಗುತ್ತಿದ್ದಾರೆ. ಇಷ್ಟೇ ಅಲ್ಲ ಇನ್ನೂ ಕೆಲ ವಿದೇಶಿ ಆಟಗಾರರು ಐಪಿಎಲ್​ ತೊರೆಯಲು ನಿರ್ಣಯಿಸಿದ್ದಾರೆ ಎನ್ನಲಾಗ್ತಿದೆ. ಇದು ಐಪಿಎಲ್​ ಫ್ರಾಂಚೈಸಿಗಳ ಟೆನ್ಷನ್​ಗೆ ಕಾರಣವಾಗಿದೆ.

ಕುಟುಂಬಕ್ಕೆ ಕೊರೊನಾ, ಹೊರ ನಡೆದ ಆರ್​.ಅಶ್ವಿನ್​

ಈಗಾಗಲೇ ಇಂಜುರಿ ಕಾರಣ ಶ್ರೇಯಸ್​​ ಅಯ್ಯರ್​ ಸೇವೆ ಕಳೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​, ಕೊರೊನಾ ಸೋಂಕಿನ ಕಾರಣ ಅಕ್ಷರ್​​ ಪಟೇಲ್​ ಸೇವೆ ಕಳೆದುಕೊಂಡಿತ್ತು. ಅಕ್ಷರ್​ ಪಟೇಲ್​ ಕಮ್​​ಬ್ಯಾಕ್​​ ಬೆನ್ನಲ್ಲೇ ಆರ್​​,ಅಶ್ವಿನ್​​​ ಕುಟುಂಬ ಕೊರೊನಾಕ್ಕೆ ತುತ್ತಾಗಿದೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬಸ್ಥರ ಜೊತೆಗಿರಲು ಅಶ್ವಿನ್​ ನಿರ್ಧರಿಸಿದ್ದು ಐಪಿಎಲ್​​​ ತೊರೆದಿದ್ದಾರೆ. ಇದು ಡೆಲ್ಲಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಆದ್ರೆ ಶೀಘ್ರ ಗುಣಮುಖರಾದರೇ ತಂಡಕ್ಕೆ ಹಿಂತಿರುವುದಾಗಿ ತಿಳಿಸಿದ್ದಾರೆ.

ರಾಯಲ್ಸ್​ಗೆ ಶಾಕ್​ ಕೊಟ್ಟ ಆಸಿಸ್​ನ ಆಂಡ್ರೋ ಟೈ.

ಟೂರ್ನಿ ಆರಂಭಕ್ಕೂ ಮುನ್ನದಿಂದ ಒಂದಿಲ್ಲೊಂದು ವಿಘ್ನ ಎದುರಿಸ್ತಿರೋ ರಾಜಸ್ಥಾನ್​​ಗೆ ಮತ್ತೊಂದು ಶಾಕ್​ ಎದುರಾಗಿದೆ. ಇಂಜುರಿ ಕಾರಣ ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​, ಬೆನ್​ ಸ್ಟೋಕ್ಸ್​​ ಸೇವೆ ಕಳೆದುಕೊಂಡಿತ್ತು. ಇತ್ತಿಚೆಗಷ್ಟೇ ಇಂಗ್ಲೆಂಡ್​ ಆಲ್​​ರೌಂಡರ್​​ ಲಿವಿಂಗ್​ ಸ್ಟೋನ್​, ಬಯೋ ಬಬಲ್​ನ ಕಾರಣ ಹೇಳಿ ಐಪಿಎಲ್​ನಿಂದ ಹೊರ ನಡೆದಿದ್ದರು. ಈ ಬೆನ್ನಲ್ಲೇ ಈಗ ಆಸಿಸ್​​ನ ಆಂಡ್ರೋ ಟೈ, ರಾಜಸ್ಥಾನಕ್ಕೆ ಶಾಕ್​ ನೀಡಿದ್ದಾರೆ. ವೈಯಕ್ತಿಕ ಕಾರಣ ನೀಡಿರುವ ಆಂಡ್ರೋ ಟೈ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಇದು ಸತತ ಸೋಲಿನಿಂದ ಕಂಗೆಟ್ಟ ರಾಜಸ್ಥಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜಸ್ಥಾನಕ್ಕಿಲ್ಲ ವಿದೇಶಿ ಬೆಂಚ್​ ಆಟಗಾರರ ಬಲ..!

ರಾಜಸ್ಥಾನ ರಾಯಲ್ಸ್​ಗೆ ವಿದೇಶಿ ಸ್ಟಾರ್​ ಆಟಗಾರರೇ ಬಲ ಎನ್ನಲಾಗ್ತಿತ್ತು. ಆದ್ರೀಗ ಅರ್ಧದಷ್ಟು ವಿದೇಶಿ ಆಟಗಾರರ ಸೇವೆ ಕಳೆದುಕೊಂಡಿರುವ ಪಿಂಕ್​ ಆರ್ಮಿಗೆ ವಿದೇಶಿಗರ ಬೆಂಚ್​​ ಬಲವೇ ಇಲ್ಲದಂತಾಗಿದೆ. ಹೀಗಾಗಿ ಸದ್ಯ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಕಾಣಿಸಿಕೊಳ್ಳುತ್ತಿರುವ ಜೋಸ್​ ಬಟ್ಲರ್​, ಡೇವಿಡ್​ ಮಿಲ್ಲರ್​, ಕ್ರಿಸ್​​ ಮೋರಿಸ್​​, ಮುಸ್ತಾಫಿಜುರ್​ ರಹಮಾನ್​ರೊಂದಿಗೆ ಮಾತ್ರವೇ ರಾಜಸ್ಥಾನ ಕಣಕ್ಕಿಳಿಯಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆದ್ರೆ ಇನ್ನಷ್ಟೇ ಸೌತ್​ ಆಫ್ರಿಕಾದ ವಾನ್​ ಡರ್​ ಡುಸೆನ್​, ಆರ್​​​ಆರ್​ ಕ್ಯಾಂಪ್ ಸೇರಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಸೋಲಿನ ಬೆನ್ನಲ್ಲೇ ಆರ್​ಸಿಬಿಗೂ ಆಸಿಸ್​ ಆಟಗಾರರ ಶಾಕ್..!

ಟೂರ್ನಿಯಲ್ಲಿ ಸತತ ಗೆದ್ದು ಬೀಗಿದ್ದ ರಾಯಲ್​ ಚಾಲೆಂಜರ್ಸ್​ಗೆ ಸೋಲಿನ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಆರ್​​ಸಿಬಿ ತಂಡದ ಆಟಗಾರರಾದ ಆ್ಯಡಂ ಜಂಪಾ, ಕೇನ್ ರಿಚರ್ಡ್​ಸನ್​ ತಮ್ಮ ವೈಯಕ್ತಿಕ ಕಾರಣದಿಂದ ಐಪಿಎಲ್​ ತೊರೆದು ತವರಿಗೆ ಹೊರಡಲು ಸಿದ್ದರಾಗಿದ್ದಾರೆ. ಈ ಬಗ್ಗೆ ಸ್ವತಃ ಆರ್​​ಸಿಬಿ ಮ್ಯಾನೇಜ್​ ಮೆಂಟ್​ ಖಚಿತಪಡಿಸಿದ್ದು ಆಸಿಸ್ ಆಟಗಾರರ ನಿರ್ಧಾರಕ್ಕೆ ಬೆಂಬಲ ಸೂಚಿಸಿದೆ.

 

ಫ್ರಾಂಚೈಸಿಗಳಿಗೆ ಆಸಿಸ್​​ ಪ್ಲೇಯರ್ಸ್​ ನೀಡ್ತಾರಾ ಬಿಗ್​ ಶಾಕ್​..?

ಆಸಿಸ್​ ಆಟಗಾರರನ್ನ ನಂಬಿ ಬಿಡ್ಡಿಂಗ್​​ನಲ್ಲಿ ಕೋಟಿ ಕೋಟಿ ಸುರಿದ್ದಿದ್ದ ಫ್ರಾಂಚೈಸಿಗಳಿಗೆ ಬಿಗ್​ ಶಾಕ್​ ಎದುರಾಗಿದೆ. ಕೊರೊನಾ ಭೀತಿಯಿಂದಾಗಿ ಆಸಿಸ್​ ಆಟಗಾರರು ಟೂರ್ನಿಯನ್ನ ಅರ್ಧಕ್ಕೆ ಮೊಟಕುಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದಾಗಿ ರಾಯಲ್​ ಚಾಲೆಂಜರ್ಸ್​​ ಸೇರಿದಂತೆ ಆಸ್ಟ್ರೇಲಿಯಾ ಆಟಗಾರರನ್ನೇ ಹೆಚ್ಚು ನಂಬಿಕೊಂಡಿರುವ ಫ್ರಾಂಚೈಸಿಗಳಿಗೆ ದೊಡ್ಡ ಹಿನ್ನಡೆಯೇ ಆಗಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಜೋಶ್​​ ಹಜಲ್​​ವುಡ್​​​, ಮಿಚೆಲ್​ ಮಾರ್ಶ್​​, ಜೋಶ್​ ಫಿಲಿಫ್ಸ್​, ಕೊರೊನಾ ಕಾರಣದಿಂದ  ಐಪಿಎಲ್​​ನಿಂದ ದೂರ ಸರಿದಿದ್ದರು. ಈಗ ಟೂರ್ನಿಯ ಮಧ್ಯೆದಲ್ಲಿ ಆಂಡ್ರೋ ಟೈ, ಆ್ಯಡಂ ಜಂಪಾ, ಕೇನ್ ರಿಚರ್ಡ್​ಸನ್​ ಸ್ವದೇಶಕ್ಕೆ ಮರಳಿದ್ದಾರೆ.  ಮತ್ತಷ್ಟು ಆಟಗಾರರು ತವರಿಗೆ ಮರಳ್ತಾರೆ ಎನ್ನಲಾಗ್ತಿದ್ದು ಇದು ಟೂರ್ನಿಯ ಮೇಲೆ ಬಹುದೊಡ್ಡ ಪರಿಣಾಮವನ್ನೇ ಬೀರಲಿದೆ.

ಒಟ್ನಲ್ಲಿ ದೇಶದಲ್ಲಿ ದಿನೇ ದಿನೇ ಅಟ್ಟಹಾಸ ಮರೆಯುತ್ತಿರೋದ್ರ ಜೊತೆಗೆ ವಿದೇಶಿ ಆಟಗಾರರು ಐಪಿಎಲ್​ ಟೂರ್ನಿ ತೊರೆದು ಸ್ವದೇಶಕ್ಕೆ ಹಾರ್ತಿರೋದು ಕಲರ್​ಫುಲ್​ ಟೂರ್ನಿಗೆ ಮಂಕು ಬಡೆದಂತಾಗಿದೆ.

The post IPL​ ಮೇಲೆ ಕೊರೊನಾ ಕರಿಛಾಯೆ; ತಂಡ ತೊರೆದ ಆಟಗಾರರು, ಫ್ರಾಂಚೈಸಿಗಳಿಗೆ ಬಿಗ್​ ಶಾಕ್​ appeared first on News First Kannada.

Source: News First Kannada
Read More