ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಫ್ರಾಂಚೈಸಿ ಹಾಗೂ ಬಿಸಿಸಿಐ ಭರದ ಸಿದ್ಧತೆ ಆರಂಭಿಸಿದೆ. ಮೆಗಾ ಆಕ್ಷನ್ನಲ್ಲಿ ಆಟಗಾರರ ಖರೀದಿಯ ಲೆಕ್ಕಾಚಾರಗಳೂ ಜೋರಾಗಿವೆ. ಆದ್ರೆ, ಈ ಆವೃತ್ತಿಯ ಟೂರ್ನಿಯ ಆಯೋಜನೆ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಭಾರೀ ಚಿಂತೆ ಶುರುವಾಗಿದೆ. ಹೀಗಾಗಿ ಇಂದು ಬಿಸಿಸಿಐ ಸಭೆ ಕರೆಯಲಾಗಿದ್ದು, ಐಪಿಎಲ್ ಫ್ರಾಂಚೈಸ್ ಮಾಲೀಕರೊಂದಿಗೆ ಚರ್ಚಿಸಲಿದ್ದಾರೆ.
ಮುಂದಿನ ತಿಂಗಳ 12 ಮತ್ತು 13ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ನಡೆಯಲಿದ್ದು, ಅದರ ಬಗ್ಗೆಯೂ ಚರ್ಚೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಯಲಿದೆ.
ಇನ್ನೂ ಭಾರತದಲ್ಲಿ ಟೂರ್ನಿಯನ್ನು ಆಯೋಜಿಸುವುದೇ ಬಿಸಿಸಿಐನ ಮೊದಲ ಆದ್ಯತೆಯಾಗಿದ್ದು, ಆದರೆ ಕೋವಿಡ್ ಇನ್ನಷ್ಟು ಹೆಚ್ಚಳವಾದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದರ ಕುರಿತು ಪ್ರಮುಖವಾಗಿ ಮಾತುಕತೆ ನಡೆಯಲಿದೆ.
2020ರ ಆವೃತ್ತಿಯ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಕಳೆದ ವರ್ಷ ಭಾರತದಲ್ಲೇ ಟೂರ್ನಿಯನ್ನ ಆಯೋಜಿಸಲಾಗಿತ್ತಾದರೂ, ಟೂರ್ನಿಯ ಮಧ್ಯದಲ್ಲಿ ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ ಸ್ಥಗಿತಗೊಳಿಸಿ ನಂತರ ಯುಎಇಗೆ ಸ್ಥಳಾಂತರಿಸಲಾಗಿತ್ತು.