IPL: ಅಂದಿನ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರೊಬ್ಬರು ನಾನು ಶೂನ್ಯಕ್ಕೆ ಔಟಾದೇ ಎಂಬ ಕಾರಣಕ್ಕೆ ನನಗೆ ಕಪಾಳಮೋಕ್ಷ ಮಾಡಿದ್ದರು
ಐಪಿಎಲ್ (Indian Premier League) ಆರಂಭವಾದ ವರ್ಷದಿಂದ ಪ್ರತಿಭಾವಂತ ಕ್ರಿಕೆಟಿಗರಿಗೆ ಭಾಗ್ಯದ ಬಾಗಿಲೇ ತೆರೆದಿದೆ. ಈ ಲೀಗ್ನಲ್ಲಿ ಮಿಂಚುವ ಆಟಗಾರರ ಮೇಲೆ ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಲಾಗುತ್ತದೆ. 2008ರ ಐಪಿಎಲ್ ಆರಂಭದಿಂದಲೂ ಈ ಪ್ರಕ್ರಿಯೆ ನಡೆಯುತ್ತಿದ್ದು, ಕೆಲವು ಆಟಗಾರರನ್ನು ದೊಡ್ಡ ಮೊತ್ತದ ಹಣ ನೀಡಿ ಖರೀದಿಸಲಾಗಿದೆ. ನಿಸ್ಸಂಶಯವಾಗಿ, ಅಂತಹ ಆಟಗಾರ ಮೇಲೆ ತಂಡಗಳ ನಿರೀಕ್ಷೆಗಳು ಕೂಡ ಹೆಚ್ಚಿರುತ್ತವೆ. ಆಟಗಾರನು ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಅಥವಾ ಮುಂದಿನ ಸೀಸನ್ಲ್ಲಿ ಆತನನ್ನು ತಂಡದಿಂದ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಎರಡು ಕ್ರಮಗಳನ್ನು ಬಿಟ್ಟು ಆಟಗಾರ ಕಳಪೆ ಪ್ರದರ್ಶನ ನೀಡಿದಕ್ಕಾಗಿ ಆತನಿಗೆ ಕಪಾಳ ಮೋಕ್ಷ ಮಾಡುವುದು ಎಷ್ಟರ ಮಟ್ಟಿಗೆ ಸರಿ. ನೀವು ಆಶ್ಚರ್ಯಪಟ್ಟರು ಇದನ್ನು ನಂಬಲೇಬೇಕಾಗಿದೆ. ಯಾಕೆಂದರೆ ಇಂತಹದೊಂದು ಆರೋಪ ಈಗ ಐಪಿಎಲ್ ಮೇಲೆ ಕೇಳಿಬಂದಿದೆ.
ನ್ಯೂಜಿಲೆಂಡ್ ತಂಡದ ಮಾಜಿ ಬ್ಯಾಟ್ಸ್ಮನ್ ರಾಸ್ ಟೇಲರ್ ಇಂತಹ ಆಘಾತಕಾರಿ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ. ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದ ಟೇಲರ್ ಇದೀಗ ಐಪಿಎಲ್ ಬಗ್ಗೆ ಸಂಚಲನ ಮೂಡಿಸುವ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ರಾಜಸ್ಥಾನ ರಾಯಲ್ಸ್ ತಂಡದ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
RR ಮಾಲೀಕರು ಕಪಾಳಮೋಕ್ಷ ಮಾಡಿದರು
ಟೇಲರ್ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್ ಅಂಡ್ ವೈಟ್’ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಅಂದಿನ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರೊಬ್ಬರು ನಾನು ಶೂನ್ಯಕ್ಕೆ ಔಟಾದೇ ಎಂಬ ಕಾರಣಕ್ಕೆ ನನಗೆ ಕಪಾಳಮೋಕ್ಷ ಮಾಡಿದ್ದರು ಎಂದು ಬರೆದುಕೊಂಡಿದ್ದಾರೆ. ಟೇಲರ್ ಅವರ ಆತ್ಮಚರಿತ್ರೆಯ ಈ ಭಾಗವನ್ನು ನ್ಯೂಜಿಲೆಂಡ್ ವೆಬ್ಸೈಟ್ Stuff.co.nz ನಲ್ಲಿ ಪ್ರಕಟಿಸಲಾಗಿದೆ.
ಈ ಘಟನೆ ಬಗ್ಗೆ ವಿಸ್ತೃತವಾಗಿ ಹೇಳಿರುವ ಟೇಲರ್, ಮೊಹಾಲಿಯಲ್ಲಿ ರಾಜಸ್ಥಾನ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಪಂಜಾಬ್ ತಂಡ ನಮಗೆ 195 ರನ್ಗಳ ಗುರಿ ನೀಡಿತ್ತು. ಆದರೆ ನಾನು ಹೆಚ್ಚಿನ ರನ್ ಗಳಿಸದೆ ಕೇವಲ ಶೂನ್ಯಕ್ಕೆ ಎಲ್ಬಿಡಬ್ಲ್ಯೂ ಔಟಾಗಿ ಪೆವಿಲಿಯನ್ಗೆ ವಾಪಾಸ್ಸಾದೆ. ಆಗ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರಲ್ಲಿ ಒಬ್ಬರು ನನ್ನ ಬಳಿಗೆ ಬಂದು, ರಾಸ್, ನೀನು ಸೊನ್ನೆಗೆ ಔಟಾಗಲೆಂದು ನಾವು ನಿನಗೆ ಮಿಲಿಯನ್ ಡಾಲರ್ ಹಣ ನೀಡಿಲ್ಲ ಎಂದು ಹೇಳಿ, ಬಳಿಕ ನನ್ನ ಕೆನ್ನೆಗೆ ಮೂರು-ನಾಲ್ಕು ಬಾರಿ ಹೊಡೆದರು.
ಈ ಘಟನೆಯಿಂದ ನಾನು (ಟೇಲರ್) ಒಂದು ಕ್ಷಣ ಆಘಾತಕ್ಕೊಳಗಾಗಿದ್ದೆ. ಆದರೆ ಕೆನ್ನೆಗೆ ಬಿದ್ದ ಏಟುಗಳು ಅಷ್ಟು ಜೋರಾಗಿ ಇರದಿದ್ದರೂ ವೃತ್ತಿಪರ ಕ್ರೀಡೆಗಳಲ್ಲಿ ಅಂತಹ ಘಟನೆಯನ್ನು ನಿರೀಕ್ಷಿಸಲಾಗುವುದಿಲ್ಲ.
ನನಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿ ನಗುತಾ ನನ್ನ ಕೆನ್ನೆಗೆ ಬಾರಿಸಿದರು. ಆದರೆ ಘಟನೆ ನಡೆಯುತ್ತಿದ್ದ ವೇಳೆ ಆತ ನನಗೆ ತಮಾಷೆಯಾಗಿ ಹೊಡೆಯುತ್ತಿದ್ದಾನೆ ಎಂದು ನನಗೆ ಸಂಪೂರ್ಣವಾಗಿ ಅನಿಸಲಿಲ್ಲ. ಆ ಸಂದರ್ಭಗಳಲ್ಲಿ, ನಾನು ಅದರ ಬಗ್ಗೆ ಗಲಾಟೆ ಮಾಡಲು ಬಯಸಲಿಲ್ಲ. ಆದರೆ ಬೇರೆ ಯಾವುದೇ ವೃತ್ತಿಪರ ಕ್ರೀಡಾ ಪರಿಸರದಲ್ಲಿ ಇದು ಸಂಭವಿಸುವುದನ್ನು ನಾನು ಊಹಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.