ಚೆನ್ನೈ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಪಡೆಯನ್ನು 9 ವಿಕೆಟ್‌ಗಳಿಂದ ಉರುಳಿಸುವ ಮೂಲಕ ಪಂಜಾಬ್‌ ಕಿಂಗ್ಸ್‌ ಗೆಲುವಿನ ಟ್ರ್ಯಾಕ್‌ ಏರುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ಸಣ್ಣ ಮೊತ್ತದ ಸೆಣಸಾಟದಲ್ಲಿ ಪಂಜಾಬ್‌ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ 5 ಪಂದ್ಯಗಳಲ್ಲಿ ಎರಡನೇ ಜಯ ಸಾಧಿಸಿತು. ಮುಂಬೈ 5 ಪಂದ್ಯಗಳಲ್ಲಿ ಮೂರನೇ ಸೋಲುಂಡಿತು.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈಗೆ ಗಳಿಸಲು ಸಾಧ್ಯವಾದದ್ದು 6ಕ್ಕೆ 131 ರನ್‌ ಮಾತ್ರ. ಪಂಜಾಬ್‌ 17.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 132 ರನ್‌ ಬಾರಿಸಿತು.

ಚೇಸಿಂಗ್‌ ಹಾದಿಯಲ್ಲಿ ನಾಯಕ ರಾಹುಲ್‌- ಅಗರ್ವಾಲ್‌ 7.2 ಓವರ್‌ಗಳಿಂದ 53 ರನ್‌ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಅಗರ್ವಾಲ್‌ (25) ಔಟಾದ ಬಳಿಕ ರಾಹುಲ್‌-ಗೇಲ್‌ ಸೇರಿಕೊಂಡು ಯಾವುದೇ ಒತ್ತಡವಿಲ್ಲದೆ ಆಡಿ ತಂಡದ ವಿಜಯೋತ್ಸವ ಆಚರಿಸಿದರು. ಆಗ ರಾಹುಲ್‌ 60 ರನ್‌ (52 ಎಸೆತ, 3 ಫೋರ್‌, 3 ಸಿಕ್ಸರ್‌) ಮತ್ತು ಗೇಲ್‌ 43 ರನ್‌ (35 ಎಸೆತ, 5 ಬೌಂಡರಿ, 2 ಸಿಕ್ಸರ್‌) ಮಾಡಿ ಅಜೇಯರಾಗಿದ್ದರು.

ಎರಡೂ ತಂಡಗಳ ನಾಯಕರು ಅರ್ಧ ಶತಕ ಬಾರಿಸಿದ್ದು ಈ ಪಂದ್ಯದ ವಿಶೇಷ. ರಾಹುಲ್‌ ಮುಂಬೈ ವಿರುದ್ಧ ಕಳೆದ 6 ಇನ್ನಿಂಗ್ಸ್‌ಗಳಲ್ಲಿ ಬಾರಿಸಿದ 5ನೇ 50 ಪ್ಲಸ್‌ ಮೊತ್ತ ಇದಾಗಿದೆ.

ಮುಂಬೈ ಸಾಮಾನ್ಯ ಮೊತ್ತ
ಮುಂಬೈ ಪರ ರೋಹಿತ್‌ ಶರ್ಮ 18ನೇ ಓವರ್‌ ತನಕ ಬೇರೂರಿ ನಿಂತು ಬಹುಮೂಲ್ಯ 63 ರನ್‌ ಕೊಡುಗೆ ಸಲ್ಲಿಸಿದರು. 52 ಎಸೆತಗಳ ಈ ಆಟದಲ್ಲಿ 5 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು. ಅವರಿಗೆ ಸೂರ್ಯಕುಮಾರ್‌ ಯಾದವ್‌ ಉತ್ತಮ ಬೆಂಬಲ ನೀಡಿದರು.

ಮುಂಬೈ ಇಂಡಿಯನ್ಸ್‌ ಚೆನ್ನೈನ ಕಠಿನ ಬ್ಯಾಟಿಂಗ್‌ ಟ್ರ್ಯಾಕ್‌ ಮೇಲೆ ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟಿತ್ತು. ಮೊಸಸ್‌ ಹೆನ್ರಿಕ್ಸ್‌ ಮತ್ತು ದೀಪಕ್‌ ಹೂಡಾ ಬಿಗಿಯಾದ ಬೌಲಿಂಗ್‌ ನಡೆಸಿ ರೋಹಿತ್‌ ಪಡೆಯನ್ನು ಕಟ್ಟಿಹಾಕಿದರು. ಪವರ್‌ ಪ್ಲೇಯಲ್ಲಿ ಒಟ್ಟುಗೂಡಿದ್ದು ಕೇವಲ 21 ರನ್‌. ಇದು ಪ್ರಸಕ್ತ ಐಪಿಎಲ್‌ನ ಮೊದಲ 6 ಓವರ್‌ಗಳಲ್ಲಿ ಒಟ್ಟುಗೂಡಿದ ಕನಿಷ್ಠ ಮೊತ್ತವಾಗಿದೆ. ಹಾಗೆಯೇ ಮುಂಬೈ ತಂಡದ ದ್ವಿತೀಯ ಕನಿಷ್ಠ ಪವರ್‌ ಪ್ಲೇ ಸ್ಕೋರ್‌ ಕೂಡ ಹೌದು.

ಪವರ್‌ ಪ್ಲೇಯಲ್ಲಿ ಸಿಡಿದದ್ದು ಒಂದೇ ಬೌಂಡರಿ. ಜತೆಗೆ ಒಂದು ವಿಕೆಟ್‌ ಕೂಡ ಉರುಳಿತು. ಕ್ವಿಂಟನ್‌ ಡಿ ಕಾಕ್‌ ಕೇವಲ 3 ರನ್‌ ಮಾಡಿ ಹೆನ್ರಿಕ್ಸ್‌ ಮೋಡಿಗೆ ಸಿಲುಕಿದ್ದರು.

ರೋಹಿತ್‌ ಶರ್ಮ-ಇಶಾನ್‌ ಕಿಶನ್‌ ಅವರ ದ್ವಿತೀಯ ವಿಕೆಟ್‌ ಜತೆಯಾಟದಿಂದ ಮುಂಬೈಗೆ ಯಾವುದೇ ಆಭವಾಗಲಿಲ್ಲ. 30 ಎಸೆತಗಳಿಂದ ಕೇವಲ 19 ರನ್‌ ಬಂತು. ಇಶಾನ್‌ ಕಿಶನ್‌ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು (17 ಎಸೆತಗಳಿಂದ 6 ರನ್‌).

3ನೇ ವಿಕೆಟಿಗೆ ರೋಹಿತ್‌-ಸೂರ್ಯಕುಮಾರ್‌ ಜತೆ ಗೂಡಿದ ಬಳಿಕ ಮುಂಬೈ ಇನ್ನಿಂಗ್ಸ್‌ ಚೇತರಿಸತೊಡಗಿತು. ನಿಂತು ಆಡಿ ತಂಡವನ್ನು ಮೇಲೆತ್ತುವ ಪ್ರಯತ್ನದಲ್ಲಿ ಈ ಜೋಡಿ ಉತ್ತಮ ಯಶಸ್ಸು ಸಾಧಿಸಿತು. ಇಬ್ಬರೂ ಸೇರಿ ತೀವ್ರ ಎಚ್ಚರಿಕೆಯಿಂದ ಪಂಜಾಬ್‌ ಬೌಲಿಂಗ್‌ ಆಕ್ರಮಣವನ್ನು ನಿಭಾಯಿಸಿದರು. ಹೆಚ್ಚಿನ ಕುಸಿತಕ್ಕೆ ಅವಕಾಶ ನೀಡಲಿಲ್ಲ. 15 ಓವರ್‌ ಮುಕ್ತಾಯಕ್ಕೆ ಮುಂಬೈ ಎರಡೇ ವಿಕೆಟಿಗೆ 97 ರನ್‌ ಒಟ್ಟುಗೂಡಿಸಿತು.

ಈ ಜವಾಬ್ದಾರಿಯುತ ಬ್ಯಾಟಿಂಗ್‌ ವೇಳೆ ನಾಯಕ ರೋಹಿತ್‌ ಶರ್ಮ ಅರ್ಧ ಶತಕದೊಂದಿಗೆ ಮುಂದಡಿ ಇರಿಸತೊಡಗಿದರು. 55 ಎಸೆತಗಳಿಂದ 79 ರನ್‌ ಒಟ್ಟುಗೂಡಿತು. ಈ ಜೋಡಿಯನ್ನು ರವಿ ಬಿಷ್ಣೋಯಿ ಬೇರ್ಪಡಿಸಿದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಹೆನ್ರಿಕ್ಸ್‌ ಬಿ ಹೂಡಾ 3
ರೋಹಿತ್‌ ಶರ್ಮ ಸಿ ಅಲೆನ್‌ ಬಿ ಶಮಿ 63
ಇಶಾನ್‌ ಕಿಶನ್‌ ಸಿ ರಾಹುಲ್‌ ಬಿ ಬಿಷ್ಣೋಯಿ 6
ಸೂರ್ಯಕುಮಾರ್‌ ಸಿ ಗೇಲ್‌ ಬಿ ಬಿಷ್ಣೋಯಿ 33
ಕೈರನ್‌ ಪೊಲಾರ್ಡ್‌ ಔಟಾಗದೆ 16
ಹಾರ್ದಿಕ್‌ ಪಾಂಡ್ಯ ಸಿ ಹೂಡಾ ಬಿ ಆರ್ಷದೀಪ್‌ 1
ಕೃಣಾಲ್‌ ಪಾಂಡ್ಯ ಸಿ ಪೂರಣ್‌ ಬಿ ಶಮಿ 3
ಜಯಂತ್‌ ಯಾದವ್‌ ಔಟಾಗದೆ 0
ಇತರ 6
ಒಟ್ಟು(6 ವಿಕೆಟಿಗೆ) 131
ವಿಕೆಟ್‌ ಪತನ: 1-7, 2-26, 3-105, 4 -112, 5-122, 6-130.
ಬೌಲಿಂಗ್‌; ಮೊಸಸ್‌ ಹೆನ್ರಿಕ್ಸ್‌ 3-0-12-0
ದೀಪಕ್‌ ಹೂಡಾ 3-0-15-1
ಮೊಹಮ್ಮದ್‌ ಶಮಿ 4-0-21-2
ರವಿ ಬಿಷ್ಣೋಯಿ 4-0-21-2
ಫ್ಯಾಬಿಯನ್‌ ಅಲೆನ್‌ 3-0-30-0
ಆರ್ಷದೀಪ್‌ ಸಿಂಗ್‌ 3-0-28-1
ಪಂಜಾಬ್‌ ಕಿಂಗ್ಸ್‌
ಕೆ. ಎಲ್‌. ರಾಹುಲ್‌ ಔಟಾಗದೆ 60
ಅಗರ್ವಾಲ್‌ ಸಿ ಸೂರ್ಯಕುಮಾರ್‌ ಬಿ ಚಹರ್‌
ಕ್ರಿಸ್‌ ಗೇಲ್‌ ಔಟಾಗದೆ 43
ಇತರ 4
ಒಟ್ಟು(17.4 ಓವರ್‌ಗಳಲ್ಲಿ ಒಂದು ವಿಕೆಟಿಗೆ) 132
ವಿಕೆಟ್‌ ಪತನ: 1-53
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 2.4-0-30-0
ಕೃಣಾಲ್‌ ಪಾಂಡ್ಯ 3-0-31-0
ಜಸ್‌ಪ್ರೀತ್‌ ಬುಮ್ರಾ 3-0-21-0
ರಾಹುಲ್‌ ಚಹರ್‌ 4-0-19-1
ಜಯಂತ್‌ ಯಾದವ್‌ 4-0-20-0
ಕೈರನ್‌ ಪೊಲಾರ್ಡ್‌ 1-0-11-0

ಕ್ರೀಡೆ – Udayavani – ಉದಯವಾಣಿ
Read More