Murali Vijay and Dk
ಇಬ್ಬರು ಕ್ರಿಕೆಟಿಗರು ಒಂದೇ ರಾಜ್ಯ….ಹೌದು, ತಮಿಳುನಾಡಿನಿಂದ ಏಕಕಾಲಕ್ಕೆ ಟೀಮ್ ಇಂಡಿಯಾದ ಕದತಟ್ಟಿದ ಇಬ್ಬರು ಕ್ರಿಕೆಟಿಗರೆಂದರೆ ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್. ಡಿಕೆಗೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಆಗಿ 2004 ರಲ್ಲೇ ಸ್ಥಾನ ಸಿಕ್ಕರೂ ಅದು ಖಾಯಂ ಆಗಿರಲಿಲ್ಲ. ಇತ್ತ ಮುರಳಿ ವಿಜಯ್ ಅದಾಗಲೇ ತಮಿಳುನಾಡು ರಣಜಿ ತಂಡದಲ್ಲಿ ಹೊಸ ಹವಾ ಸೃಷ್ಟಿಸಿದ್ದರು. ತಮಿಳುನಾಡು ತಂಡದ ಪ್ರಮುಖ ಆಟಗಾರರು ಎಂದೇ ಗುರುತಿಸಿಕೊಂಡಿದ್ದ ಇಬ್ಬರೂ ಅತ್ಯುತ್ತಮ ಫ್ರೆಂಡ್ಸ್ ಆಗಿದ್ದರು ಎಂಬುದು ಮತ್ತೊಂದು ವಿಶೇಷ. ದಿನೇಶ್ ಕಾರ್ತಿಕ್ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ 2004 ರಲ್ಲೇ ಕಾಣಿಸಿಕೊಂಡಿದ್ದರು. ಆದರೆ ಹಾಗೊಮ್ಮೆ ಈಗೊಮ್ಮೆ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡಿಕೆಯ ಪ್ರದರ್ಶನ ಕೂಡ ಉತ್ತಮವಾಗಿರಲಿಲ್ಲ.
ಆದರೆ ಮತ್ತೊಂದೆಡೆ 2008 ರಲ್ಲಿ ಟೀಮ್ ಇಂಡಿಯಾಗೆ ಆರಂಭಿಕನಾಗಿ ಎಂಟ್ರಿ ಕೊಟ್ಟಿದ್ದ ಮುರಳಿ ವಿಜಯ್ ಆ ಬಳಿಕ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಮರು ವರ್ಷವೇ ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದ ಸಿಎಸ್ಕೆ ತಂಡದಲ್ಲೂ ಅವಕಾಶ ಪಡೆದಿದ್ದರು. ಇತ್ತ ಸಿಎಸ್ಕೆ ತಂಡದ ನಾಯಕತ್ವವನ್ನು ನಿರೀಕ್ಷಿಸಿದ್ದ ಡಿಕೆಗೆ ನಿರಾಸೆ ಕಾದಿತ್ತು. ಏಕೆಂದರೆ ತಮಿಳುನಾಡು ತಂಡದ ನಾಯಕನಾಗಿ ಮಿಂಚುತ್ತಿದ್ದ ಡಿಕೆ ತವರಿನ ಐಪಿಎಲ್ ತಂಡದ ನಾಯಕನ ಸ್ಥಾನ ಸಿಗಲಿದೆ ಎಂದು ಭಾವಿಸಿದ್ದರು. ಆದರೆ ದಿನೇಶ್ ಕಾರ್ತಿಕ್ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದು ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ಎಂಬುದು ಅನೇಕರಿಗೆ ಗೊತ್ತಿಲ್ಲ.
ಇನ್ನೊಂದೆಡೆ ಐಪಿಎಲ್ ಮೂಲಕ ಮುರಳಿ ವಿಜಯ್ ತಮಿಳುನಾಡಿನಾದ್ಯಂತ ಹೊಸ ಸೆನ್ಸೇಷನ್ ಸೃಷ್ಟಿಸಿದ್ದರು. ಧೋನಿಯ ಬಂಟನಾಗಿ ತಂಡದಲ್ಲಿ ಗುರುತಿಸಿಕೊಂಡಿದ್ದ ವಿಜಯ್ ಸಿಎಸ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ನಿರೀಕ್ಷೆಯಂತೆ ಮುರಳಿ ವಿಜಯ್ ಟೀಮ್ ಇಂಡಿಯಾದಲ್ಲೂ ಖಾಯಂ ಸದಸ್ಯರಾಗಿ ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ತಮಿಳುನಾಡು ತಂಡದ ನಾಯಕನಾಗಿದ್ದರೂ, ಒಂದಷ್ಟು ಪಂದ್ಯಗಳನ್ನು ಭಾರತಕ್ಕೆ ಆಡಿದರೂ ದಿನೇಶ್ ಕಾರ್ತಿಕ್ ಕ್ರಿಕೆಟ್ ಕೆರಿಯರ್ ಏರಿಳಿತದಲ್ಲೇ ಇತ್ತು.
ಇದಾಗ್ಯೂ ಮುರಳಿ ವಿಜಯ್ ತಮಿಳುನಾಡು ಪರ ದಿನೇಶ್ ಕಾರ್ತಿಕ್ ನಾಯಕತ್ವದ ಅಡಿಯಲ್ಲಿ ಆಡುತ್ತಿದ್ದರು ಎಂಬುದು ವಿಶೇಷ. ಆದರೆ ಅದಾಗಲೇ ಸ್ಟಾರ್ ವಾಲ್ಯೂ ಹೊಂದಿದ್ದ ಮುರಳಿ ವಿಜಯ್ ತಂಡದಲ್ಲಿ ಹೊಸ ಹವಾ ಸೃಷ್ಟಿಸಿದ್ದರು. ವಿಶೇಷ ಎಂದರೆ ಮುರಳಿ ವಿಜಯ್ ಅವರ ಗೆಳತಿ ನಿಖಿತಾ ದಿನೇಶ್ ಕಾರ್ತಿಕ್ ಅವರ ಫ್ರೆಂಡ್ ಕೂಡ ಆಗಿದ್ದರು. ಈ ಫ್ರೆಂಡ್ಶಿಪ್ ಪ್ರೇಮಕ್ಕೆ ತಿರುಗಿ 2007 ರಲ್ಲಿ ಡಿಕೆ-ನಿಖಿತಾ ವಿವಾಹವಾಗಿದ್ದರು.
ಇತ್ತ ಭಾರತ ತಂಡದ 2ನೇ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದರು. ಈ ವೇಳೆ ತಮಿಳುನಾಡು ತಂಡವನ್ನು ಮುರಳಿ ವಿಜಯ್ ಮುನ್ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಪತ್ನಿ ಜೊತೆ ಮುರಳಿ ವಿಜಯ್ ಅವರ ಅಫೇರ್ ಕೂಡ ಶುರುವಾಗಿತ್ತು. ಈ ವಿಷಯ ಇಡೀ ತಮಿಳುನಾಡು ತಂಡಕ್ಕೆ ಗೊತ್ತಿದ್ದರೂ, ಗೆಳೆಯನನ್ನು ನಂಬಿದ್ದ ಡಿಕೆಗೆ ಮಾತ್ರ ಗೊತ್ತಿರಲಿಲ್ಲ. ಅಲ್ಲದೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಮತ್ತಷ್ಟು ತಡವಾಗಿತ್ತು. ಆ ಬಳಿಕ ಡಿಕೆ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿದ್ದಂತೆ, 2012 ರಲ್ಲಿ ಮುರಳಿ ವಿಜಯ್ ನಿಖಿತಾ ಅವರನ್ನು ವಿವಾಹವಾದರು.
ವಿಶೇಷ ಎಂದರೆ ನಿಖಿತಾ-ವಿಜಯ್ ಅಫೇರ್ ನಡೆಯುತ್ತಿದ್ದ ಸಂದರ್ಭದಲ್ಲಿ ಮುರಳಿ ವಿಜಯ್ ಸಿಎಸ್ಕೆ ತಂಡದ ಮತ್ತು ಐಪಿಎಲ್ನ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದರು. ಆದರೆ ದಿನೇಶ್ ಕಾರ್ತಿಕ್ ಅತ್ತ ಟೀಮ್ ಇಂಡಿಯಾದಲ್ಲೂ ಇತ್ತ ಐಪಿಎಲ್ನಲ್ಲೂ ಪ್ಲೇಯಿಂಗ್ 11 ನ ಖಾಯಂ ಸದಸ್ಯರಾಗಲು ಒದ್ದಾಡುತ್ತಿದ್ದರು.
ಆದರೆ ಯಾವಾಗ ದಿನೇಶ್ ಕಾರ್ತಿಕ್ ಕೊನೆಯ ಬಾಲ್ನಲ್ಲಿ ಸಿಕ್ಸ್ ಸಿಡಿಸಿ ಭಾರತಕ್ಕೆ ಜಯ ತಂದುಕೊಟ್ಟರೋ ಅಂದಿನ ಹೊಸ ಯುಗ ಶುರುವಾಗಿತ್ತು. 2018 ರಲ್ಲಿ ನಡೆದ ನಿಧ್ಹಾಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ್ ವಿರುದ್ದ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಡಿಕೆ ಮನೆಮಾತಾಗಿದ್ದರು. ಆ ಬಳಿಕ ಹೊಸ ಆರಂಭ ಪಡೆದ ದಿನೇಶ್ ಕಾರ್ತಿಕ್ ಮತ್ತೆ ಹಿಂತಿರುಗಿ ನೋಡಿಲ್ಲ. ಅಂದರೆ ಎಲ್ಲಿ ಮುರಳಿ ವಿಜಯ್ ಅವರ ಕೆರಿಯರ್ ಅಂತ್ಯವಾಗಲು ಆರಂಭಿಸಿತೋ ಆ ಸಂದರ್ಭದಲ್ಲಿ ಡಿಕೆಯ ಯುಗ ಶುರುವಾಗಿತ್ತು. ಕೆಕೆಆರ್ ತಂಡದ ನಾಯಕತ್ವ, ತಮಿಳುನಾಡು ತಂಡದ ಯಶಸ್ವಿ ನಾಯಕನ ಪಟ್ಟ…ಟೀಮ್ ಇಂಡಿಯಾದಲ್ಲಿ ಅವಕಾಶ…ಹೀಗೆ ದಿನೇಶ್ ಕಾರ್ತಿಕ್ ಹೊಸ ಟ್ರ್ಯಾಕ್ನಲ್ಲಿ ಓಡಲಾರಂಭಿಸಿದರು.
ಇದೀಗ 36 ವರ್ಷದ ಡಿಕೆ ಐಪಿಎಲ್ನಲ್ಲಿ 200 ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ. ಆದರೆ ಮತ್ತೊಂದೆಡೆ ಆರಂಭದಲ್ಲಿ ಅಬ್ಬರಿಸಿದ್ದ ಮುರಳಿ ವಿಜಯ್ ಅವರ ಐಪಿಎಲ್ ಕೆರಿಯರ್ 106 ಪಂದ್ಯಗಳಿಗೆ ಸೀಮಿತವಾಯಿತು. ಅಲ್ಲದೆ 2 ವರ್ಷಗಳ ಹಿಂದೆಯೇ ಕ್ರಿಕೆಟ್ ಕೆರಿಯರ್ ಅಂತ್ಯವಾಯಿತು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಡಿಕೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ.
ಪ್ರಸ್ತುತ ಸೀಸನ್‌ನಲ್ಲಿ ಆರ್‌ಸಿಬಿ ಪರ 7 ಪಂದ್ಯಗಳನ್ನ ಆಡಿರುವ ದಿನೇಶ್ ಕಾರ್ತಿಕ್ 200 ಕ್ಕಿಂತ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಡಿಕೆ ಬ್ಯಾಟ್ನಿಂದ ಮೂಡಿಬಂದಿದ್ದು ಬರೋಬ್ಬರಿ 18 ಬೌಂಡರಿ ಹಾಗೂ 15 ಸಿಕ್ಸರ್. ಇದರಲ್ಲೇ ದಿನೇಶ್ ಕಾರ್ತಿಕ್ ಅಬ್ಬರವನ್ನು ಊಹಿಸಿಕೊಳ್ಳಬಹುದು. ಇನ್ನು 7 ಪಂದ್ಯಗಳಿಂದ ಒಟ್ಟು 200 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ 7 ಪಂದ್ಯಗಳಲ್ಲಿ ಐದು ಬಾರಿ ಅಜೇಯರಾಗಿ ಉಳಿದಿದ್ದಾರೆ. ಈ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದರೆ ಟಿ20 ವಿಶ್ವಕಪ್ ತಂಡದಲ್ಲಿ ಮತ್ತೆ ಡಿಕೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.