IPL 2022: ಇಬ್ಬರು ಆಟಗಾರರಿಗೆ ಕೊರೋನಾ: ಮತ್ತೆ ಡೆಲ್ಲಿ​ ಪಂದ್ಯ ಸ್ಥಳಾಂತರ | Ipl 2022 delhi capitals coronavirus cases dc vs rr match venue changed


IPL 2022: ಇಬ್ಬರು ಆಟಗಾರರಿಗೆ ಕೊರೋನಾ: ಮತ್ತೆ ಡೆಲ್ಲಿ​ ಪಂದ್ಯ ಸ್ಥಳಾಂತರ

DC vs RR

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಇಬ್ಬರು ಆಟಗಾರರು ಕೊರೋನಾ ಪಾಸಿಟಿವ್ ಆಗಿದ್ದಾರೆ. ಈ ಹಿಂದೆ ತಂಡದಲ್ಲಿದ್ದ ಮಿಚೆಲ್ ಮಾರ್ಷ್ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಮತ್ತೋರ್ವ ಆಟಗಾರ ಟಿಮ್ ಸೈಫರ್ಟ್​ ಅವರಲ್ಲೂ ಕೊರೋನಾ ಸೋಂಕು ಕಂಡು ಬಂದಿದೆ. ಇದಕ್ಕೂ ಮುನ್ನ ಡೆಲ್ಲಿ ತಂಡದ ನಾಲ್ವರು ಸಿಬ್ಬಂದಿಯಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅಂದರೆ ಒಟ್ಟು 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೊರೋನಾ ಸೋಂಕು ಕಂಡು ಬಂದಿರುವುದು ಇದೀಗ ಬಿಸಿಸಿಐ ಚಿಂತೆಯನ್ನು ಹೆಚ್ಚಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಹಲವಾರು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ , ಇದೀಗ ಬಿಸಿಸಿಐ ಟೂರ್ನಿಯನ್ನು ಮುಂದುವರಿಸಲು ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಪಂದ್ಯಗಳ ಸ್ಥಳವನ್ನು ಸಹ ಬದಲಾಯಿಸಲಾಗುತ್ತಿದೆ. ಡೆಲ್ಲಿ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಗಳ ಸ್ಥಳವನ್ನು ಬದಲಾಯಿಸಿದ ನಂತರ ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮತ್ತೊಂದು ಪಂದ್ಯವನ್ನು ಸಹ ಸ್ಥಳಾಂತರ ಮಾಡಲಾಗಿದೆ. ಶುಕ್ರವಾರ ಏಪ್ರಿಲ್ 22 ರಂದು ಪುಣೆಯಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (DC vs RR) ನಡುವಿನ ಪಂದ್ಯವನ್ನು ಮುಂಬೈನಲ್ಲಿ ಆಡಲಾಗುವುದು ಎಂದು BCCI ತಿಳಿಸಿದೆ.

ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಬಿಸಿಸಿಐ ಡೆಲ್ಲಿ ತಂಡದ ಮುಂದಿನ ಪಂದ್ಯವನ್ನು ಪುಣೆ ಬದಲಿಗೆ ಮುಂಬೈನಲ್ಲಿ ಆಯೋಜಿಸಲು ನಿರ್ಧರಿಸಿದೆ. ಬಿಸಿಸಿಐ ಬುಧವಾರ ಹೇಳಿಕೆ ನೀಡಿದ್ದು, ಲೀಗ್‌ನ 34 ನೇ ಪಂದ್ಯವಾದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಈಗ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಬದಲಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಕೊರೋನವೈರಸ್ ಪ್ರಕರಣಗಳಲ್ಲಿ ಇಳಿಮುಖವಾಗಿದ್ದ ಕಾರಣ ದೇಶದಲ್ಲಿಯೇ ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿತು. ಕಳೆದ ವರ್ಷವೂ ಇದೇ ಸಮಯದಲ್ಲಿ ಭಾರತದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಆದರೆ ನಂತರ ಇದ್ದಕ್ಕಿದ್ದಂತೆ ಕೊರೋನಾ ಎರಡನೇ ಅಲೆ ಶುರುವಾದ ಕಾರಣ, ಆಟಗಾರರಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಟೂರ್ನಿಯನ್ನು ನಿಲ್ಲಿಸಬೇಕಾಯಿತು. ಅಲ್ಲದೆ ಯುಎಇನಲ್ಲಿ ಎರಡನೇ ಹಂತವಾಗಿ ಉಳಿದ ಪಂದ್ಯಗಳನ್ನು ನಡೆಸಲಾಗಿತ್ತು. ಇದೀಗ ಮತ್ತೆ ಕೊರೋನಾತಂಕ ಎದುರಾಗಿದ್ದು, ಹೀಗಾಗಿ ಸಂಪೂರ್ಣ ಸುರಕ್ಷತೆಯೊಂದಿಗೆ ಪಂದ್ಯಾವಳಿಯನ್ನು ನಡೆಸಲು ಬಿಸಿಸಿಐ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

TV9 Kannada


Leave a Reply

Your email address will not be published.