IPL 2022: ಈ ಬಾರಿಯ ಐಪಿಎಲ್​ನಲ್ಲಿ KKR ತಂಡ ಎಡವಿದ್ದೆಲ್ಲಿ? | KKR in IPL 2022: What’s going wrong for Kolkata Knight Riders?


KKR in IPL 2022: ಕೆಕೆಆರ್ ಪರ ಆರಂಭದಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ನಡೆಸಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು.

IPL 2022: ಪ್ರತಿ ಸೀಸನ್ ಐಪಿಎಲ್​ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ವೇಳೆ ಸನ್​ರೈಸರ್ಸ್ ಹೈದರಾಬಾದ್ (SRH) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳ ಹೆಸರು ಹೆಚ್ಚು ಚರ್ಚೆಯಲ್ಲಿರುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಎರಡೂ ತಂಡಗಳು ಐಪಿಎಲ್​ನ ದ್ವಿತಿಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿರುವುದು. ಅಷ್ಟೇ ಅಲ್ಲದೆ ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೆಕೆಆರ್​ ನೆಟ್ ರನ್​ ರೇಟ್​ಗಳ ಮೂಲಕ ಸದಾ ಪ್ಲೇಆಫ್​ ಪ್ರವೇಶಿಸುವಲ್ಲಿ ನಿಸ್ಸೀಮರು ಎಂದರೆ ತಪ್ಪಾಗಲಾರದು. ಆದರೆ ಈ ಬಾರಿ ಈ ಪ್ಲೇಆಫ್​ ಪ್ರವೇಶಿಸುವ ಸಣ್ಣ ಅವಕಾಶವೂ ದೊರೆತಿಲ್ಲ. ಇದಕ್ಕೆ ಒಂದು ಕಾರಣ ಹೊಸ ತಂಡ ಎನ್ನಬಹುದು. ಆದರೆ ಇಲ್ಲಿ ಹೊಸ ತಂಡಗಳೇ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಪ್ಲೇಆಫ್​ಗೆ ಎಂಟ್ರಿ ಕೊಟ್ಟಿರುವುದನ್ನು ಕೂಡ ಉಲ್ಲೇಖಾರ್ಹ. ಹಾಗಿದ್ರೆ ಕೆಕೆಆರ್ ಎಡವಿದೆಲ್ಲಿ ನೋಡೋಣ…

ಕೊಲ್ಕತ್ತಾ ನೈಟ್ ರೈಡರ್ಸ್​ (KKR):
ಈ ಬಾರಿ ಐಪಿಎಲ್​ನಲ್ಲಿ ಬಲಿಷ್ಠ ತಂಡಗಳಲ್ಲಿ ಕೆಕೆಆರ್ ಕೂಡ ಗುರುತಿಸಿಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಕೆಕೆಆರ್ ಉಳಿಸಿಕೊಂಡಿದ್ದ ಸ್ಟಾರ್ ಆಟಗಾರರು. ಅಂದರೆ ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿಯನ್ನು ಈ ಬಾರಿ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡಿತ್ತು. ಈ ನಾಲ್ಕರು ಕಳೆದ ಸೀಸನ್​ನಲ್ಲಿ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿದ್ದರು. ಆದರೆ ಈ ಬಾರಿ ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿ ಪೂರ್ತಿ ಪಂದ್ಯಗಳನ್ನು ಆಡಿರಲಿಲ್ಲ ಎಂಬುದು ವಿಶೇಷ. ಅಂದರೆ ರಿಟೈನ್ ಮಾಡಿಕೊಂಡಿದ್ದ ಇಬ್ಬರು ಆಟಗಾರರು ಕಳಪೆ ಪ್ರದರ್ಶನದ ಮೂಲಕ ಕೈಕೊಟ್ಟಿದ್ದರು. ಇದುವೇ ತಂಡದ ಹಿನ್ನೆಡೆಗೆ ಮುಖ್ಯ ಕಾರಣವಾಯಿತು.

ಅಬ್ಬರಿಸದ ಬ್ಯಾಟ್ಸ್​ಮನ್​ಗಳು: ಈ ಬಾರಿ ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ ಒಬ್ಬರೇ ಒಬ್ಬರು ಬ್ಯಾಟ್ಸ್​ಮನ್​ಗಳು ಕಾಣ ಸಿಗುವುದಿಲ್ಲ. ಏಕೆಂದರೆ ಯಾವುದೇ ಬ್ಯಾಟ್ಸ್​ಮನ್​ ಸ್ಥಿರ ಪ್ರದರ್ಶನ ನೀಡಿಲ್ಲ. ಅದರಲ್ಲೂ ಕೊಂಚ ಉತ್ತಮವಾಗಿ ಆಡಿದ್ದು ನಾಯಕ ಶ್ರೇಯಸ್ ಅಯ್ಯರ್. ಏಕೆಂದರೆ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್​ನ ವೈಯುಕ್ತಿಕ ಸ್ಕೋರ್ 400 ರನ್ ದಾಟಿಲ್ಲ. 14 ಪಂದ್ಯಗಳನ್ನು ಆಡಿದ್ದ ಅಯ್ಯರ್ 401 ರನ್​ಗಳಿಸಿದರೆ, ನಿತೀಶ್ ರಾಣಾ 361 ರನ್ ಕಲೆಹಾಕಿದ್ದರು. ಇದರ ಹೊರತಾಗಿ ಯಾವುದೇ ಬ್ಯಾಟ್ಸ್​ಮನ್ ಉತ್ತಮ ಪ್ರದರ್ಶನ ನೀಡಿಲ್ಲ.

ಹಳಿ ತಪ್ಪಿದ ಬೌಲಿಂಗ್ ಲೈನಪ್: ಕೆಕೆಆರ್ ಪರ ಆರಂಭದಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ನಡೆಸಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಆರಂಭಿಕ ಪಂದ್ಯಗಳಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ಸಂಘಟಿಸಿದರೂ ಇತರೆ ಬೌಲರ್​ಗಳಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಇತ್ತ ದ್ವಿತಿಯಾರ್ಧದಲ್ಲಿ ಆಂಡ್ರೆ ರಸೆಲ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಈ ವೇಳೆ ಉಮೇಶ್ ಯಾದವ್​ ಲಯ ತಪ್ಪಿದ್ದರು. ಅಂದರೆ ಸುನಿಲ್ ನರೈನ್, ವರುಣ್ ಚಕ್ರವರ್ತಿ, ಟಿಮ್ ಸೌಥಿ ಅಂತಹ ವಿಕೆಟ್ ಟೇಕರ್​ ಬೌಲರ್​ಗಳಿದ್ದರೂ ವಿಕೆಟ್ ಪಡೆಯುವಲ್ಲಿ ಎಡವಿದ್ದರು. ಅದರಲ್ಲೂ ರಿಟೈನ್ ಮಾಡಲಾದ ವರುಣ್ ಚಕ್ರವರ್ತಿ 11 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 6 ವಿಕೆಟ್ ಮಾತ್ರ. ಅತ್ತ ಕೆಕೆಆರ್ ಪರ ರಸೆಲ್ 17 ಹಾಗೂ ಉಮೇಶ್ ಯಾದವ್ 16 ವಿಕೆಟ್ ಪಡೆದಿದ್ದರೂ ಇಬ್ಬರಿಂದ ಒಂದೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ಮೂಡಿಬಂದಿಲ್ಲ. ಇವರಿಬ್ಬರೂ ಮಿಂಚಿದಾಗ ಉಳಿದ ಬೌಲರ್​ಗಳಿಂದ ಸಾಥ್ ಸಿಕ್ಕಿರಲಿಲ್ಲ.

ಕೈಕೊಟ್ಟ ಆಲ್​ರೌಂಡರ್​ಗಳು: ಕೆಕೆಆರ್ ತಂಡದ ಟ್ರಂಪ್ ಕಾರ್ಡ್ ಎಂದರೆ ಸುನಿಲ್ ನರೈನ್. ಏಕೆಂದರೆ ಈ ಬಾರಿ ಕೆಕೆಆರ್ ನರೈನ್ ಅವರನ್ನು ಉಳಿಸಿಕೊಂಡಿತ್ತು. ಇದಾಗ್ಯೂ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ವಿಫಲರಾಗುವ ಮೂಲಕ ನರೈನ್ ನಿರಾಸೆ ಮೂಡಿಸಿದರು. ಏಕೆಂದರೆ ಅನುಭವಿ ಸ್ಪಿನ್ ಮಾಂತ್ರಿಕನಾಗಿದ್ದ ನರೈನ್ 14 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 9 ವಿಕೆಟ್ ಮಾತ್ರ. ಇನ್ನು ಬ್ಯಾಟ್​ನಿಂದ ಬಂದಿದ್ದು 74 ರನ್​ಗಳು. ಹಾಗೆಯೇ ಪ್ಯಾಟ್ ಕಮಿನ್ಸ್​ ಪ್ರಮುಖ ಆಲ್​ರೌಂಡರ್​ ಆಗಿದ್ದರೂ ಆಡಿದ್ದು ಕೇವಲ 5 ಪಂದ್ಯ ಮಾತ್ರ. ಈ ವೇಳೆ 7 ವಿಕೆಟ್ ಪಡೆದಿದ್ದರು. ಇದಾದ ಬಳಿಕ ಗಾಯಗೊಂಡು ಹೊರಗುಳಿದಿದ್ದರು.

ತಂಡದಲ್ಲಿ ನಿರಂತರ ಬದಲಾವಣೆ: ಈ ಬಾರಿ ಕೆಕೆಆರ್ ಪರ 20 ಮಂದಿ ಆಡಿದ್ದರು. ಅಂದರೆ ಸತತವಾಗಿ ತಂಡದಲ್ಲಿ ಬದಲಾವಣೆ ತಂದಿದ್ದು ಪರಿಣಾಮ ಬೀರಿತು. ಏಕೆಂದರೆ ಗೆದ್ದ ತಂಡವನ್ನೇ ಮುಂದುವರೆಸದಿರುವುದು ತಂಡದ ಮೇಲೆ ಪರಿಣಾಮ ಬೀರಿತು. ಏಕೆಂದರೆ ಮೊದಲ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿತ್ತು. ಆದರೆ ಬಳಿಕ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತು. ಇನ್ನು ದ್ವಿತಿಯಾರ್ಧದಲ್ಲೂ ತಂಡದಲ್ಲಿ ಬದಲಾವಣೆ ಮಾಡಲಾಯಿತು. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡರೂ ಕೆಕೆಆರ್ ತಂಡ 14 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ 6ನೇ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *