IPL 2022
ಇಂಡಿಯನ್ ಪ್ರೀಮಿಯರ್ ಲೀಗ್ ( IPL 2022) ಸೀಸನ್ 15 ಆರಂಭಕ್ಕೂ ಮುನ್ನ ಟೂರ್ನಿಗೆ ಕೊರೋನಾತಂಕ ಎದುರಾಗಿದೆ. ಹೀಗಾಗಿಯೇ ಬಿಸಿಸಿಐ ಟೂರ್ನಿ ಆಯೋಜಿಸಲು ಪರ್ಯಾಯ ಮಾರ್ಗಗಳನ್ನು ಎದುರು ನೋಡುತ್ತಿದೆ. ಏಕೆಂದರೆ ಭಾರತದಲ್ಲಿ ಕೊರೋನಾ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೀಗಾಗಿ ದೇಶದಲ್ಲಿ ಐಪಿಎಲ್ ಆಯೋಜಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಕಳೆದ ಬಾರಿ ಭಾರತದಲ್ಲಿ ಕೊರೋನಾ ನಡುವೆ ಟೂರ್ನಿ ಆಯೋಜಿಸಿ ಬಿಸಿಸಿಐ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಮತ್ತದೇ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಅದಕ್ಕಾಗಿ ಈಗಾಗಲೇ ಬಿಸಿಸಿಐ ಪ್ಲ್ಯಾನ್ ಬಿ- ಅನ್ನು ಸಿದ್ದಪಡಿಸಿದೆ ಎಂದು ವರದಿಯಾಗಿದೆ.
ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದರೆ ಬಿಸಿಸಿಐ ಮಹಾರಾಷ್ಟ್ರದಲ್ಲಿರುವ ಮೂರು ಸ್ಟೇಡಿಯಂನಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆಯಿದೆ. ಅದರಂತೆ ವಾಂಖೆಡೆ, ಡಿವೈ ಪಾಟೀಲ್ ಸ್ಟೇಡಿಯಂ, ಹಾಗೂ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ಇಡೀ ಟೂರ್ನಿ ನಡೆಯಬಹುದು. ಒಂದು ವೇಳೆ ಸರ್ಕಾರ ಇದಕ್ಕೆ ಅವಕಾಶ ನೀಡದಿದ್ದರೆ ಬಿಸಿಸಿಐ ಪ್ಲ್ಯಾನ್ – ಬಿ ಮೂಲಕ ವಿದೇಶಕ್ಕೆ ಟೂರ್ನಿಯನ್ನು ಸ್ಥಳಾಂತರ ಮಾಡಲಿದೆ. ಆದರೆ ಈ ಬಾರಿ ಯುಎಇಗೆ ಶಿಫ್ಟ್ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
ಏಕೆಂದರೆ ಯುಎಇನಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವುದರಿಂದ ಬಿಸಿಸಿಐಗೆ ಹೆಚ್ಚಿನ ಹೊರೆಯಾಗುತ್ತದೆ. ಅದರಲ್ಲೂ ದುಬೈ, ಅಬುಧಾಬಿಯಂತಹ ದುಬಾರಿ ನಗರಗಳಲ್ಲಿ ಐಪಿಎಲ್ಗಾಗಿ ವ್ಯವಸ್ಥೆ ಮಾಡುವುದರಿಂದ ಫ್ರಾಂಚೈಸಿಗಳ ಲಾಭಕ್ಕೂ ಕತ್ತರಿ ಬೀಳುತ್ತಿದೆ. ಹೀಗಾಗಿ ಈ ಬಾರಿ ಬಿಸಿಸಿಐ ಶ್ರೀಲಂಕಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿಯನ್ನು ನಡೆಸಲು ಪ್ಲ್ಯಾನ್ ರೂಪಿಸುತ್ತಿದೆ.
ಈ ಹಿಂದೆ 2009 ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ಸೌತ್ ಆಫ್ರಿಕಾದಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲೂ ಓಮಿಕ್ರಾನ್ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದು, ಇದಾಗ್ಯೂ ಅಲ್ಲಿನ ಕ್ರಿಕೆಟ್ ಮಂಡಳಿ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದೇ ವಿಶ್ವಾಸದಲ್ಲಿ ಐಪಿಎಲ್ ಅನ್ನು ದಕ್ಷಿಣ ಆಫ್ರಿಕಾಗೆ ಶಿಫ್ಟ್ ಮಾಡುವ ಬಗ್ಗೆ ಬಿಸಿಸಿಐ ಚಿಂತಿಸಿದೆ.
ಇನ್ನೊಂದೆಡೆ ಕಳೆದ ಬಾರಿಯ ಐಪಿಎಲ್ನ ದ್ವಿತಿಯಾರ್ಧವನ್ನು ಆಯೋಜಿಸುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಪತ್ರ ಬರೆದಿತ್ತು. ಟೂರ್ನಿ ನಡೆಸಲು ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ಲಂಕಾ ಕ್ರಿಕೆಟ್ ಬೋರ್ಡ್ ತಯಾರಿದೆ ಎಂದು ತಿಳಿಸಿತ್ತು. ಇತ್ತ ಶ್ರೀಲಂಕಾದಲ್ಲೂ ಕೊರೋನಾ ಪ್ರಕರಣ ನಿಯಂತ್ರಣದಲ್ಲಿದೆ. ಹೀಗಾಗಿ ಬಿಸಿಸಿಐ ಶ್ರೀಲಂಕಾವನ್ನೂ ಕೂಡ ಮತ್ತೊಂದು ಆಯ್ಕೆಯಾಗಿ ಪರಿಗಣಿಸಿದೆ. ಹೀಗಾಗಿ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಾಧ್ಯವಾಗದಿದ್ದರೆ ಶ್ರೀಲಂಕಾ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್ ಬಿ ರೂಪಿಸಿದೆ.