IPL 2022: ಐಪಿಎಲ್ ನಿಯಮ ಬದಲಿಸುವಂತೆ ಒತ್ತಾಯಿಸಿದ ಮುಂಬೈ ಇಂಡಿಯನ್ಸ್ ಕೋಚ್..! | IPL 2022: Mahela Jayawardena calls for change after Pant incident


IPL 2022: ಐಪಿಎಲ್ ನಿಯಮ ಬದಲಿಸುವಂತೆ ಒತ್ತಾಯಿಸಿದ ಮುಂಬೈ ಇಂಡಿಯನ್ಸ್ ಕೋಚ್..!

MI

ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಹೇಲಾ ಜಯವರ್ಧನೆ ಐಪಿಎಲ್ ನಿಯಮಗಳಲ್ಲಿ ಬದಲಾವಣೆ ತರುವಂತೆ ಒತ್ತಾಯಿಸಿದ್ದಾರೆ. ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳಲು ವೀಡಿಯೊ ಅಂಪೈರ್ ಮತ್ತು ಆನ್-ಫೀಲ್ಡ್ ಅಂಪೈರ್‌ಗಳ ನಡುವೆ ಹೆಚ್ಚು ಸಮನ್ವಯತೆ ಇರಬೇಕು ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ನಿಯಮಗಳಲ್ಲಿ ಏನಾದರೂ ಬದಲಾವಣೆ ಮಾಡುವುದಾದರೆ ಅದಕ್ಕೆ ನಮ್ಮ ಒಪ್ಪಿಗೆ ಇದೆ ಎಂದು ಜಯವರ್ಧನೆ ತಿಳಿಸಿದ್ದಾರೆ. ಕಳೆದ ವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ನೋಬಾಲ್ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ನಾಯಕ ಜಯವರ್ಧನೆ ಈ ಹೇಳಿಕೆ ನೀಡಿದ್ದಾರೆ. ಪಂದ್ಯದ ಅಂತಿಮ ಓವರ್‌ನಲ್ಲಿ ಆನ್-ಫೀಲ್ಡ್ ಅಂಪೈರ್ ಫುಲ್ ಟಾಸ್ ಬಾಲ್‌ಗೆ ನೋ ಬಾಲ್ ನೀಡಲಿಲ್ಲ. ಆ ನಂತರ ಸಾಕಷ್ಟು ವಿವಾದಗಳು ನಡೆದಿದ್ದವು. ಇದರಿಂದಾಗಿ ದೆಹಲಿ ತಂಡದ ನಾಯಕ ರಿಷಬ್ ಪಂತ್ ಅವರ ಸಂಭಾವನೆಯನ್ನು ಒಂದು ಪಂದ್ಯಕ್ಕೆ ಕಡಿತಗೊಳಿಸಲಾಗಿದ್ದು, ಸಹಾಯಕ ಕೋಚ್ ಪ್ರವೀಣ್ ಆಮ್ರೆ ಒಂದು ಪಂದ್ಯಕ್ಕೆ ನಿಷೇಧಕ್ಕೊಳಗಾಗಿದ್ದಾರೆ. ಹೀಗಾಗಿ ಫೀಲ್ಡ್ ಅಂಪೈರ್ ಮತ್ತು ಥರ್ಡ್​ ಅಂಪೈರ್ ನಡುವೆ ಸಮನ್ವಯತೆ ಇರುವಂತಹ ನಿಯಮಗಳನ್ನು ರೂಪಿಸಬೇಕೆಂದು ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿಯೂ ಇಂತಹ ಘಟನೆ ಸಂಭವಿಸಬಹುದು ಎಂದು ಮಹೇಲಾ ಜಯವರ್ಧನೆ ಐಸಿಸಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಮೂರನೇ ಅಂಪೈರ್‌ಗೆ ಈ ವಿಷಯಗಳ ಮೇಲೆ ನಿಗಾ ಇಡಲು ಮತ್ತು ಈ ಬಾಲ್​ ಅನ್ನು ರಿಪ್ಲೇ ಮಾಡಲು ಆನ್‌-ಫೀಲ್ಡ್ ಅಂಪೈರ್‌ಗೆ ಹೇಳಲು ಯಾವುದೇ ಆಯ್ಕೆ ಇದೆಯೇ? ಏಕೆಂದರೆ ಆಟ ನಿಲ್ಲಿಸಿ ಜನರು ಮೈದಾನಕ್ಕೆ ಬರುವುದನ್ನು ನೋಡಿದರೆ ಬೇಸರವಾಗುತ್ತಿದೆ ಎಂದರು ಮಹೇಲಾ ಜಯವರ್ಧನೆ ಹೇಳಿದರು.

ಇಲ್ಲಿ ಮುಖ್ಯ ವಿಷಯ ಎಂದರೆ ಇಂತಹ ಸಂದರ್ಭಗಳಲ್ಲಿ ಬಾಲ್​ ರಿಪ್ಲೇ ನೋಡಲು ಥರ್ಡ್ ಅಂಪೈರ್ ಬಳಿ ಮನವಿ ಮಾಡುವಂತಿಲ್ಲ ಎಂದು ನಿಯಮಗಳು ಹೇಳುತ್ತವೆ. ಯಾವುದೇ ಆಟಗಾರ ಅಥವಾ ಕೋಚ್ ಮೈದಾನಕ್ಕೆ ಬರಲು ಅವಕಾಶವಿಲ್ಲ. ಕೋಚ್ ಆಗಿ ಮೈದಾನಕ್ಕೆ ಬರುವ ಅವಕಾಶ ಸಿಗುವುದು ಟೈಮ್ ಔಟ್ ಸಮಯದಲ್ಲಿ ಮಾತ್ರ. ಕೋಚ್ ಅಥವಾ ಬೇರೆಯವರು ಮೈದಾನಕ್ಕೆ ಬರುವ ಸಮಯ ಇದಾಗಿರಬೇಕು. ಈ ಘಟನೆಯ ಬಗ್ಗೆ ನಾನು ನನ್ನ ತಂಡದೊಂದಿಗೆ ಚರ್ಚಿಸಿದ್ದೇನೆ. ಪಂದ್ಯದ ಸಮಯದಲ್ಲಿ ನನ್ನ ಜವಾಬ್ದಾರಿಗಳ ಬಗ್ಗೆ ಹೇಳಿದ್ದೇನೆ ಎಂದು ಜಯವರ್ಧನೆ ಹೇಳಿದರು.

ಈ ಘಟನೆಯನ್ನು ನಾವೆಲ್ಲರೂ ಟಿವಿಯಲ್ಲಿ ನೋಡಿದ್ದೇವೆ. ಹೆಚ್ಚಿನ ಆಟಗಾರರು ಒಟ್ಟಿಗೆ ಪಂದ್ಯ ವೀಕ್ಷಿಸುತ್ತಿದ್ದರು. ಪಂದ್ಯದ ನಂತರ ನಾವು ಚರ್ಚಿಸಿದ್ದೇವೆ. ಇಂತಹ ಘಟನೆಗಳು ನಡೆಯಬಾರದು. ರಿಷಬ್ ಪಂತ್ ಮತ್ತು ಆಮ್ರೆ ಕೂಡ ಪಶ್ಚಾತ್ತಾಪ ಪಡುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಪಂತ್ ಏನು ಹೇಳಿದರೂ ಅದನ್ನು ಭಾವುಕರಾಗಿ ಹೇಳಿದರು. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಹೇಲ ಜಯವರ್ಧನೆ ಇದೇ ವೇಳೆ ತಿಳಿಸಿದರು.

TV9 Kannada


Leave a Reply

Your email address will not be published. Required fields are marked *