Joe Root
ಜೋ ರೂಟ್…ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ (Joe Root) ಸ್ಥಿರ ಪ್ರದರ್ಶನ ನೀಡುವ ಆಟಗಾರರಲ್ಲಿ ಒಬ್ಬರು. ಈ ಹಿಂದೆ ಇಂಗ್ಲೆಂಡ್ ಸೀಮಿತ ಓವರ್ಗಳ ತಂಡದಲ್ಲಿ ಕಾಣಿಸಿಕೊಂಡಿದ್ದರೂ ಆ ಬಳಿಕ ರೂಟ್ ಟೆಸ್ಟ್ ಕ್ರಿಕೆಟ್ನತ್ತ ಮಾತ್ರ ವಾಲಿದರು. ಪರಿಣಾಮ ಪ್ರಸ್ತುತ ಕ್ರಿಕೆಟ್ನ ಫ್ಯಾಬ್ ಫೋರ್ನಲ್ಲಿ ಈಗಲೂ ಜೋ ರೂಟ್ ಹೆಸರು ರಾರಾಜಿಸುತ್ತಿದೆ. ಅದರಲ್ಲೂ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರರಲ್ಲಿ ರೂಟ್ ಅಗ್ರಸ್ಥಾನದಲ್ಲಿದ್ದಾರೆ. ಇದಾಗ್ಯೂ ಪ್ರತಿ ಬಾರಿ ಐಪಿಎಲ್ ಹರಾಜು ನಡೆಯುವ ವೇಳೆ ರೂಟ್ ಹೆಸರು ಚರ್ಚೆಯಲ್ಲಿರುತ್ತದೆ. ಏಕೆಂದರೆ ಜೋ ರೂಟ್ ಒಂದೇ ಒಂದು ಬಾರಿ ಐಪಿಎಲ್ಗಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದರು. ಅಂದರೆ 2018 ರಲ್ಲಿ ಹೆಸರು ನೀಡಿದ್ದ ರೂಟ್ ರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಆದರೆ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಬಹುತೇಕ ತಂಡಗಳು ನಾಯಕನ ಹುಡುಕಾಟದಲ್ಲಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ ಜೋ ರೂಟ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಈ ಬಾರಿ ಹೆಸರು ನೀಡುವ ಬಗ್ಗೆ ಕೂಡ ರೂಟ್ ಸುಳಿವು ನೀಡಿದ್ದರು. ಆದರೀಗ ಆ್ಯಶಸ್ ಸರಣಿಯಲ್ಲಿನ ಇಂಗ್ಲೆಂಡ್ ತಂಡದ ಹೀನಾಯ ಸೋಲಿನ ಬಳಿಕ ಜೋ ರೂಟ್ ನಿರ್ಧಾರ ಬದಲಿಸಿದ್ದಾರೆ.
ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ 4-0 ಅಂತರದಿಂದ ಹೀನಾಯವಾಗಿ ಸೋಲನುಭವಿಸಿದೆ. ಇಂತಹ ಸಂದರ್ಭದಲ್ಲಿ ಜೋ ರೂಟ್ ಅವರು ಐಪಿಎಲ್ನತ್ತ ಮುಖ ಮಾಡಿದರೆ ಇಂಗ್ಲೆಂಡ್ ಕ್ರಿಕೆಟ್ ಸಂಕಷ್ಟಕ್ಕೆ ಸಿಲುಕಬಹುದು. ಹೀಗಾಗಿಯೇ ರೂಟ್ ಕೂಡ ಐಪಿಎಲ್ ತ್ಯಾಗಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಉತ್ತುಂಗಕ್ಕೇರಿಸುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಮುಂಬರುವ ಮೆಗಾ ಹರಾಜಿಗಾಗಿ ಜೋ ರೂಟ್ ಹೆಸರು ನೀಡಿಲ್ಲ ಎಂಬುದು ಖಚಿತವಾಗಿದೆ.
ಆ್ಯಶಸ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿನ ಹೀನಾಯ ಸೋಲಿನ ಬಳಿಕ ಮಾತನಾಡಿರುವ ಜೋ ರೂಟ್ ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್ ತಂಡವನ್ನು ಕಟ್ಟಿ ಬೆಳೆಸಲು ನಾವು ಸಾಕಷ್ಟು ಕೆಲಸ ಮಾಡಬೇಕಿದೆ. ಅದಕ್ಕೆ ನನ್ನೆಲ್ಲ ಶಕ್ತಿ ನೀಡಬೇಕಾಗುತ್ತದೆ. ನಾನು ನಮ್ಮ ದೇಶದಲ್ಲಿ ಟೆಸ್ಟ್ ಕ್ರಿಕೆಟ್ನ ಭವಿಷ್ಯವನ್ನು ಯೋಚಿಸುತ್ತೇನೆ. ಇದಕ್ಕಾಗಿ ನಾನು ಸತತ ಪ್ರಯತ್ನಿಸುತ್ತೇನೆ. ಹೀಗಾಗಿ ಐಪಿಎಲ್ನಂತಹ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಮೂಲಕ ಮತ್ತೊಮ್ಮೆ 31 ವರ್ಷದ ಜೋ ರೂಟ್ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಐಪಿಎಲ್ ಅನ್ನು ತ್ಯಾಗ ಮಾಡಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಾದ ಅಲೆಸ್ಟೇರ್ ಕುಕ್, ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಸೇರಿದಂತೆ ಹಲವಾರು ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್ನಿಂದ ಹಿಂದೆ ಸರಿದಿದ್ದರು. ಅಷ್ಟೇ ಅಲ್ಲದೆ ಈ ಆಟಗಾರರು ಇಂಗ್ಲೆಂಡ್ ಟೆಸ್ಟ್ ತಂಡಕ್ಕಾಗಿ ಹೆಚ್ಚಿನ ಸಮಯ ಮೀಸಲಿರಿಸಿ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದರು. ಇದೀಗ ಜೋ ರೂಟ್ ಕೂಡ ಅಂತಹದ್ದೇ ನಿರ್ಧಾರ ಮಾಡುವ ಮೂಲಕ ರಾಷ್ಟ್ರೀಯ ತಂಡದ ಪ್ರತಿಷ್ಠಿತೆ ಮುಖ್ಯವೇ ಹೊರತು ಹಣವಲ್ಲ ಎಂಬುದನ್ನು ಸಾರಿದ್ದಾರೆ.