Chris Gayle
ಐಪಿಎಲ್ ಸೀಸನ್ 15 ಮೆಗಾ ಹರಾಜಿಗೆ ವೇದಿಕೆ ಸಿದ್ದವಾಗಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಈಗಾಗಲೇ 1214 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಹೆಸರಿಲ್ಲ ಎಂಬುದು ವಿಶೇಷ. ಅಂದರೆ ಕಳೆದ 14 ಸೀಸನ್ ಐಪಿಎಲ್ ಆಡಿದ್ದ ಗೇಲ್ ಇದೇ ಮೊದಲ ಬಾರಿಗೆ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಗೇಲ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅದರಲ್ಲೂ ಈ ಬಾರಿ 10 ತಂಡಗಳಿರುವ ಕಾರಣ ಕ್ರಿಸ್ ಗೇಲ್ ಅವರು ಕೂಡ ಹೆಸರು ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.
ಆದರೀಗ ಮೆಗಾ ಹರಾಜು ಪಟ್ಟಿ ಹೊರಬೀಳುತ್ತಿದ್ದಂತೆ ಕ್ರಿಸ್ ಗೇಲ್ ಹೊರಗುಳಿದಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಏಕೆಂದರೆ ಯೂನಿವರ್ಸ್ ಬಾಸ್ ಐಪಿಎಲ್ ಆರಂಭದಿಂದಲೂ ಸ್ಟಾರ್ ಆಗಿದ್ದರು. ಆರಂಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಗೇಲ್, ಆ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ನ ಭಾಗವಾಗಿದ್ದರು. ಅಲ್ಲದೆ ಕಳೆದ ಸೀಸನ್ ಐಪಿಎಲ್ನಲ್ಲೂ ಪಂಜಾಬ್ ಕಿಂಗ್ಸ್ ಪರ ಆಡಿದ್ದರು.
ಆದರೆ ಕಳೆದೆರಡು ಸೀಸನ್ಗಳಲ್ಲಿನ ಕ್ರಿಸ್ ಗೇಲ್ ಪ್ರದರ್ಶನ ಕಳಪೆಯಾಗಿತ್ತು. ಅದರಲ್ಲೂ 2020 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಕ್ರಿಸ್ ಗೇಲ್ ಅವರನ್ನು 7 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಆದರೆ ಕೊನೆಯ 7 ಪಂದ್ಯಗಳಲ್ಲಿ ಅವಕಾಶ ಪಡೆದ ಗೇಲ್ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಇದಾಗ್ಯೂ 2021 ರಲ್ಲಿ 10 ಪಂದ್ಯಗಳನ್ನಾಡಿದ್ದ ಗೇಲ್ ಕಲೆಹಾಕಿದ್ದು ಕೇವಲ 193 ರನ್ ಮಾತ್ರ.
ಅತ್ತ 2018 ರ ಮೆಗಾ ಹರಾಜಿನಲ್ಲಿ ಯಾವುದೇ ತಂಡ ಖರೀದಿಸಲು ಮುಂದಾಗಿರಲಿಲ್ಲ. ಮೊದಲೆರಡು ಸುತ್ತಿನಲ್ಲಿ ಗೇಲ್ ಅವರಿಗಾಗಿ ಯಾವುದೇ ತಂಡ ಬಿಡ್ ಮಾಡಿರಲಿಲ್ಲ. ಇದಾಗ್ಯೂ ಅಂತಿಮ ಸುತ್ತಿನಲ್ಲಿ ಗೇಲ್ ಅವರನ್ನು ಮೂಲಬೆಲೆಗೆ ಅಂದರೆ ಕೇವಲ 2 ಕೋಟಿಗೆ ಪಂಜಾಬ್ ಕಿಂಗ್ಸ್ ಖರೀದಿಸಿತು. ಇದೀಗ ಮತ್ತೆ ಐಪಿಎಲ್ ಮೆಗಾ ಹರಾಜು ನಡೆಯುತ್ತಿದೆ. ಕಳೆದ ಎರಡು ಸೀಸನ್ ಐಪಿಎಲ್ನಲ್ಲಿ ವಿಫಲರಾಗಿರುವ 42 ವರ್ಷದ ಗೇಲ್ ಅವರ ಖರೀದಿಗೆ ಐಪಿಎಲ್ ಫ್ರಾಂಚೈಸಿಗಳು ಒಲವು ತೋರಿಸುವುದು ಅನುಮಾನ. ಇದೇ ಕಾರಣದಿಂದಾಗಿ ಕ್ರಿಸ್ ಗೇಲ್ ಐಪಿಎಲ್ಗೆ ಹೆಸರು ನೀಡದಿರಲು ನಿರ್ಧರಿಸಿದ್ದಾರೆ. ಒಂದು ವೇಳೆ ಹೆಸರು ನೀಡಿ ಅನ್ಸೋಲ್ಡ್ ಆದರೆ ಟಿ20 ಕ್ರಿಕೆಟ್ನಲ್ಲಿ ರಾಜನಂತೆ ಮೆರೆದ ಆಟಗಾರನಿಗೆ ಅದಕ್ಕಿಂತ ಅವಮಾನ ಮತ್ತೊಂದಿಲ್ಲ. ಹೀಗಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳದಿರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದಾಗ್ಯೂ ಕ್ರಿಸ್ ಗೇಲ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿಲ್ಲ. ಟಿ10 ಲೀಗ್ ಹಾಗೂ ಇತರೆ ಲೀಗ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಐಪಿಎಲ್ನಲ್ಲಿ ಕೆಕೆಆರ್, ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ ಪರ ಆಡಿರುವ ಗೇಲ್ 39.72 ರ ಸರಾಸರಿಯಲ್ಲಿ ಒಟ್ಟು 4965 ರನ್ಗಳನ್ನು ಕಲೆಹಾಕಿದ್ದಾರೆ. ಈ ವೇಳೆ 6 ಶತಕಗಳನ್ನು ಹಾಗೂ 31 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು 357 ಸಿಕ್ಸರ್ ಸಿಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.