IPL 2022: ಬೆಂಕಿ ಬೌಲಿಂಗ್​ನಿಂದ 8 ಲಕ್ಷ ರೂ: ಮುಂದಿನ ಟಾರ್ಗೆಟ್ ತಿಳಿಸಿದ ಉಮ್ರಾನ್ ಮಲಿಕ್ | Umran Malik Wins 8th Consecutive ‘Fastest Delivery of the Match’ Award in IPL 2022


IPL 2022: ಬೆಂಕಿ ಬೌಲಿಂಗ್​ನಿಂದ 8 ಲಕ್ಷ ರೂ: ಮುಂದಿನ ಟಾರ್ಗೆಟ್ ತಿಳಿಸಿದ ಉಮ್ರಾನ್ ಮಲಿಕ್

Umran Malik

IPL 2022:  ಸನ್​ರೈಸರ್ಸ್​ ಹೈದರಾಬಾದ್ (SRH) ತಂಡವು ಇದುವರೆಗೆ 8 ಪಂದ್ಯಗಳನ್ನು ಆಡಿದೆ. 8 ಪಂದ್ಯಗಳಲ್ಲಿ 5 ಜಯ ಸಾಧಿಸಿದೆ. ವಿಶೇಷ ಎಂದರೆ ಈ ಎಂಟು ಪಂದ್ಯಗಳಲ್ಲಿ SRH ಯುವ ವೇಗಿ ಉಮ್ರಾನ್ ಮಲಿಕ್ (Umran Malik) 8 ಬಾರಿ ವಿಶೇಷ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ (IPL 2022) ನೀಡಲಾಗುತ್ತಿರುವ ಫಾಸ್ಟೆಸ್ಟ್ ಡೆಲಿವರಿ ಆಫ್​ ದಿ ಮ್ಯಾಚ್ ಅವಾರ್ಡ್​ ಅನ್ನು ಸತತವಾಗಿ ಪಡೆದ ಏಕೈಕ ಬೌಲರ್ ಉಮ್ರಾನ್ ಮಲಿಕ್. ಗಂಟೆಗೆ 150 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಉಮ್ರಾನ್ ಮಲಿಕ್ ಎಸ್​ಆರ್​ಹೆಚ್​ ತಂಡದ ಎಲ್ಲಾ ಪಂದ್ಯಗಳಲ್ಲೂ ಫಾಸ್ಟೆಸ್ಟ್ ಡೆಲಿವರಿ ಅವಾರ್ಡ್​ ಪಡೆದಿದ್ದಾರೆ. ಅಂದರೆ ಇದುವರೆಗೆ ಉಮ್ರಾನ್ ಮಲಿಕ್ ವೇಗವನ್ನು ಎದುರಾಳಿ ತಂಡದ ಯಾವುದೇ ಬೌಲರ್​ಗೆ ದಾಟಲಾಗಲಿಲ್ಲ. ಅದರಲ್ಲೂ ಗುಜರಾತ್ ಟೈಟನ್ಸ್ ಹಾಗೂ ಎಸ್​ಆರ್​ಹೆಚ್ (SRH vs GT)  ನಡುವಣ ಪಂದ್ಯವು ಇದೇ ಕಾರಣಕ್ಕೆ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

ಏಕೆಂದರೆ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ವೇಗದ ಅಸ್ತ್ರ ಲಾಕಿ ಫರ್ಗುಸನ್ ಫಾಸ್ಟೆಸ್ಟ್ ಅವಾರ್ಡ್ ಗೆಲ್ಲಲಿದ್ದಾರೆ ಎನ್ನಲಾಗಿತ್ತು. ಏಕೆಂದರೆ ಈ ಬಾರಿ ಸತತವಾಗಿ 150 ರ ವೇಗದಲ್ಲಿ ಚೆಂಡೆಸೆಯುತ್ತಿರುವ ಲಾಕಿ ಫರ್ಗುಸನ್ ಉಮ್ರಾನ್ ಮಲಿಕ್ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಬ್ಬರ ನಡುವಣ ವೇಗದ ಕಾಳದಲ್ಲೂ ಉಮ್ರಾನ್ ಮಲಿಕ್ ಗೆದ್ದಿದ್ದಾರೆ.

152.9 kph ವೇಗದಲ್ಲಿ ವೃದ್ದಿಮಾನ್ ಸಾಹ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಉಮ್ರಾನ್ ಮಲಿಕ್ ಫಾಸ್ಟೆಸ್ಟ್ ಡೆಲಿವರಿ ಅವಾರ್ಡ್ ಪಡೆದಿದ್ದಾರೆ. ಈ ಮೂಲಕ 8 ಪಂದ್ಯಗಳಿಂದ 8 ಲಕ್ಷ ರೂ. ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಉಮ್ರಾನ್ ಮಲಿಕ್ ವೇಗದ ಮುಂದೆ ಲಾಕಿ ಫರ್ಗುಸನ್ ಕೂಡ ಮಂಕಾಗಿದ್ದರು ಎಂಬುದು ವಿಶೇಷ. ಏಕೆಂದರೆ ಈ ಪಂದ್ಯದಲ್ಲಿ ಲಾಕಿ ಫರ್ಗುಸನ್ 150 ರ ಅಸುಪಾಸಿನಲ್ಲಿ ಚೆಂಡೆಸೆದರೆ, ಉಮ್ರಾನ್ 150 ಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅದರಂತೆ ಅನುಭವಿ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ಹಿಂದಿಕ್ಕಿ ಉಮ್ರಾನ್ 8ನೇ ಬಾರಿಗೆ ಫಾಸ್ಟೆಸ್ಟ್ ಅವಾರ್ಡ್​ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 25 ರನ್​ ನೀಡಿ 5 ವಿಕೆಟ್ ಉರುಳಿಸುವ ಮೂಲಕ ಎಸ್​ಆರ್​ಹೆಚ್​ ಪರ 5 ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಎಸ್​ಆರ್​ಹೆಚ್​ ಸೋತರೂ, ಅತ್ಯುತ್ತಮ ಬೌಲಿಂಗ್ ಮಾಡಿದ್ದ ಉಮ್ರಾನ್ ಮಲಿಕ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆ ಬಳಿಕ ಮಾತನಾಡಿದ ಉಮ್ರಾನ್ ಮಲಿಕ್ ಮುಂದಿನ ಟಾರ್ಗೆಟ್​ಗಳನ್ನು ತಿಳಿಸಿದರು. ನಾನು ಸರಿಯಾದ ಲೆನ್​ ಮತ್ತು ಲೆಂಗ್ತ್​ನಲ್ಲಿ ಬೌಲಿಂಗ್​ ಮಾಡುವುದನ್ನು ಬಯಸುತ್ತೇನೆ. ಇದರ ಜೊತೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಗುರಿಯನ್ನು ಹೊಂದಿದ್ದೇನೆ. ಖಂಡಿತವಾಗಿಯೂ ಆ ಗುರಿಯನ್ನು ಮುಟ್ಟುತ್ತೇನೆ ಎಂಬ ವಿಶ್ವಾಸವಿದೆ ಎಂದು ಉಮ್ರಾನ್ ಮಲಿಕ್ ತಿಳಿಸಿದ್ದಾರೆ.

ಸದ್ಯ ಟೂರ್ನಿಯುದ್ದಕ್ಕೂ ಸ್ಥಿರವಾಗಿ 150 kmph ವೇಗದಲ್ಲಿ ಬೌಲಿಂಗ್ ಮಾಡುತ್ತಿರುವ ಉಮ್ರಾನ್ ಮಲಿಕ್ ಕಳೆದ ಎಂಟು ಪಂದ್ಯಗಳಲ್ಲಿ 15.93 ಸರಾಸರಿಯಲ್ಲಿ 15 ವಿಕೆಟ್​ಗಳನ್ನು ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ 22 ರ ಜಮ್ಮು ಕಾಶ್ಮೀರದ ಯುವ ವೇಗಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಕ್ಕರೂ ಅಚ್ಚರಿಪಡಬೇಕಿಲ್ಲ.

TV9 Kannada


Leave a Reply

Your email address will not be published. Required fields are marked *