IPL 2022: ಮೇ 29 ರಂದು ಅಹಮದಾಬಾದ್​ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ | BCCI announce IPL 2022 play off venue Ahmedabad host final on 29 May


IPL 2022: ಮೇ 29 ರಂದು ಅಹಮದಾಬಾದ್​ನಲ್ಲಿ ಫೈನಲ್! ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಪ್ರಾತಿನಿಧಿಕ ಚಿತ್ರ

IPL 2022 ರ ಪ್ಲೇ-ಆಫ್ ಪಂದ್ಯಗಳ ದಿನಾಂಕಗಳನ್ನು ಬಿಸಿಸಿಐ (BCCI) ಪ್ರಕಟಿಸಿದೆ. ದಿನಾಂಕಗಳ ಜೊತೆಗೆ, ಅದನ್ನು ಆಯೋಜಿಸಲಾಗುವ ಸ್ಥಳಗಳನ್ನು ಸಹ ಬಹಿರಂಗಗೊಳಿಸಿದೆ. ಅಂದರೆ 15ನೇ ಆವೃತ್ತಿಯ ಪ್ಲೇ-ಆಫ್ (play -off) ಪಂದ್ಯಗಳನ್ನು ಎಲ್ಲಿ ಮತ್ತು ಯಾವಾಗ ಆಡಲಾಗುತ್ತದೆ? ಫೈನಲ್ ಪಂದ್ಯ ಎಲ್ಲಿ? ಎಂಬುದನ್ನು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದೆ. ಐಪಿಎಲ್ 2022 ರ ಪ್ಲೇ-ಆಫ್‌ ಪಂದ್ಯಗಳು ಮತ್ತು ಅಂತಿಮ ಪಂದ್ಯದ ದಿನಾಂಕ ಮತ್ತು ಸ್ಥಳದ ಕುರಿತು ಅಂತಿಮ ನಿರ್ಧಾರವನ್ನು ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಬಿಸಿಸಿಐ ಪ್ಲೇಆಫ್ ಪಂದ್ಯಗಳಿಗಾಗಿ 6 ದಿನಗಳನ್ನು ನಿಗಧಿಪಡಿಸಿದೆ. ಇದರಲ್ಲಿ ಕೋಲ್ಕತ್ತಾ ಹಾಗೂ ಅಹಮದಾಬಾದ್​ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ.

ಐಪಿಎಲ್ 2022ರ ಪ್ಲೇಆಫ್ ಪಂದ್ಯಗಳು ಕೇವಲ ಎರಡು ನಗರಗಳಲ್ಲಿ ಮಾತ್ರ ನಡೆಯಲಿವೆ. ಈ ಎರಡು ನಗರಗಳನ್ನು ಕೋಲ್ಕತ್ತಾ ಮತ್ತು ಅಹಮದಾಬಾದ್ ಎಂದು ಆಯ್ಕೆ ಮಾಡಲಾಗಿದೆ. ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಜೊತೆಗೆ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಕೋಲ್ಕತ್ತಾದಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್
ಯಾವ ಪಂದ್ಯಗಳು ಯಾವಾಗ ಮತ್ತು ಯಾವ ಮೈದಾನದಲ್ಲಿ ನಡೆಯುತ್ತವೆ ಎಂಬುದರ ಬಗ್ಗೆ ಹೇಳಬೇಕೆಂದರೆ. IPL 2022 ಪ್ಲೇಆಫ್‌ಗೂ ಮೊದಲ ಕ್ವಾಲಿಫೈಯರ್ ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಮೇ 26 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದು ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಎಲಿಮಿನೇಟರ್‌ನಲ್ಲಿ ಸೋತ ತಂಡದ ಪಯಣ ಟೂರ್ನಿಯಲ್ಲಿ ಸ್ಥಗಿತಗೊಳ್ಳಲಿದೆ. ಅದೇ ಸಮಯದಲ್ಲಿ, ವಿಜೇತ ತಂಡವು ಎರಡನೇ ಕ್ವಾಲಿಫೈಯರ್ ಆಡುವ ಅವಕಾಶವನ್ನು ಪಡೆಯುತ್ತದೆ.

ಅಹಮದಾಬಾದ್‌ನಲ್ಲಿ ಐಪಿಎಲ್ 2022 ಫೈನಲ್
ಎರಡನೇ ಕ್ವಾಲಿಫೈಯರ್‌ನಲ್ಲಿ ಎಲಿಮಿನೇಟರ್ ಪಂದ್ಯ ಗೆದ್ದ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವನ್ನು ಎದುರಿಸಲಿದೆ. ಐಪಿಎಲ್ 2022 ರ ಎರಡನೇ ಕ್ವಾಲಿಫೈಯರ್ ಪಂದ್ಯವು ಮೇ 27 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಹೋಗಲಿದ್ದು, ಅಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ. ಐಪಿಎಲ್ 2022 ರ ಅಂತಿಮ ಪಂದ್ಯವು ಮೇ 29 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಪ್ಲೇಆಫ್ ಪಂದ್ಯಗಳಿಗೆ ಕ್ರೀಡಾಂಗಣ ಭರ್ತಿಗೆ ಅವಕಾಶ
ಬಿಸಿಸಿಐ ಪ್ರಕಾರ, ಐಪಿಎಲ್ 2022 ಪ್ಲೇಆಫ್ ಪಂದ್ಯಗಳ ಸಮಯದಲ್ಲಿ 100 ಪ್ರತಿಶತ ವೀಕ್ಷಕರಿಗೆ ಅವಕಾಶ ನೀಡಲಾಗಿದೆ. ಹೆಚ್ಚುತ್ತಿರುವ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ವೀಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು ಎಂದು ಮೊದಲು ಊಹಿಸಲಾಗಿತ್ತು. ಆದರೆ ಬಿಸಿಸಿಐ ಸದ್ಯಕ್ಕೆ ಅಂತಹ ಯಾವುದೇ ಉದ್ದೇಶ ಹೊಂದಿಲ್ಲ. ಆದಾಗ್ಯೂ, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *