IPL 2022: ಐಪಿಎಲ್ ಸೀಸನ್ 15 ನಲ್ಲಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದೆ. ಇನ್ನು ಫಾಫ್ ಡುಪ್ಲೆಸಿಸ್ ಪಡೆ ಮುಂದಿನ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಬೇಕಿದೆ. ಅದರಲ್ಲೂ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಸೋಲಿಸುವುದು ಸುಲಭವಲ್ಲ. ಹೀಗಾಗಿ ಹೊಸ ರಣತಂತ್ರಗಳೊಂದಿಗೆ ಆರ್ಸಿಬಿ (RCB) ತಂಡ ಕಣಕ್ಕಿಳಿಯಬೇಕಿದೆ. ಹೀಗಾಗಿಯೇ ಆರ್ಸಿಬಿ ಲಕ್ನೋ ತಂಡದ ಇಬ್ಬರು ಆಟಗಾರರ ವಿರುದ್ದ ಭರ್ಜರಿ ಪ್ಲ್ಯಾನ್ ರೂಪಿಸಬೇಕಾಗಿರುವುದು ಅನಿವಾರ್ಯ. ಅವರಲ್ಲಿ ಮುಖ್ಯರೆಂದರೆ ಕೆಎಲ್ ರಾಹುಲ್. ಏಕೆಂದರೆ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ದ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಕೆಎಲ್ಆರ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ರಾಹುಲ್ ಆರ್ಸಿಬಿ ಪಾಲಿಗೆ ಕಂಟಕವಾಗಬಹುದು.
ಇದಾಗ್ಯೂ ಆರ್ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು ಎಂಬುದು ವಿಶೇಷ. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 6 ವಿಕೆಟ್ಗೆ 181 ರನ್ ಗಳಿಸಿತ್ತು. ನಾಯಕ ಫಾಫ್ ಡು ಪ್ಲೆಸಿಸ್ 96 ರನ್ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದ್ದರು. ಇದಕ್ಕೆ ಉತ್ತರವಾಗಿ ಲಕ್ನೋ ತಂಡ 8 ವಿಕೆಟ್ಗೆ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನ ಮುಖ್ಯ ಕಾರಣ ಜೋಶ್ ಹ್ಯಾಝಲ್ವುಡ್. ಏಕೆಂದರೆ ಕೇವಲ 25 ರನ್ಗಳಿಗೆ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆಲುವಿನ ಲಯಕ್ಕೆ ಮರಳಿದೆ.
ಅದರಲ್ಲೂ ಕೊನೆಯ ಪಂದ್ಯದಲ್ಲಿ KKR ವಿರುದ್ದ ಲಕ್ನೋ ಸೂಪರ್ ಜೈಂಟ್ಸ್ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಡಿಕಾಕ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ರೆ, ರಾಹುಲ್ ಉತ್ತಮ ಸಾಥ್ ನೀಡಿದ್ದರು. ಇಲ್ಲಿ ಈ ಇಬ್ಬರೇ ಆರ್ಸಿಬಿ ತಂಡಕ್ಕೂ ಕಂಟಕವಾಗುವ ಸಾಧ್ಯತೆಯಿದೆ.