IPL 2022: ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್: ಒಂದೇ ದಿನ…ಇಬ್ಬರದ್ದು ಒಂದೇ ಕಥೆ | IPL 2022: Virat Kohli and Jos Buttler same Old Story


IPL 2022: ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್: ಒಂದೇ ದಿನ...ಇಬ್ಬರದ್ದು ಒಂದೇ ಕಥೆ

Virat Kohli and Jos Buttler

Jos Buttler : ಈ ಭರ್ಜರಿ ಇನಿಂಗ್ಸ್​ನಲ್ಲಿ 45 ಸಿಕ್ಸ್ ಹಾಗೂ 83 ಫೋರ್​ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಆದರೆ ಐಪಿಎಲ್​ ಟ್ರೋಫಿ ಮಾತ್ರ ಕೈತಪ್ಪಿದೆ.

IPL 2022: ಐಪಿಎಲ್ ಸೀಸನ್​ 15 ಮುಕ್ತಾಯವಾಗಿದೆ. ಫೈನಲ್​ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​​ಗೆ ಸೋಲುಣಿಸಿ ಗುಜರಾತ್ ಟೈಟಾನ್ಸ್ (GT vs RR) ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಬೇಕೆಂಬ ಜೋಸ್ ಬಟ್ಲರ್ (Jos Buttler) ಅವರ ಕನಸು ಕೂಡ ಕಮರಿದೆ. ಇಡೀ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಬಟ್ಲರ್ ಆರ್​ಆರ್​ ತಂಡ ಫೈನಲ್​ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಏಕೆಂದರೆ ಆಡಿದ 17 ಪಂದ್ಯಗಳಲ್ಲಿ ಬಟ್ಲರ್ ಬ್ಯಾಟ್​ನಿಂದ ಮೂಡಿಬಂದಿದ್ದು ಬರೋಬ್ಬರಿ 863 ರನ್​ಗಳು. ಈ ವೇಳೆ 4 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಈ ಭರ್ಜರಿ ಇನಿಂಗ್ಸ್​ನಲ್ಲಿ 45 ಸಿಕ್ಸ್ ಹಾಗೂ 83 ಫೋರ್​ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದಿದ್ದಾರೆ. ಆದರೆ ಐಪಿಎಲ್​ ಟ್ರೋಫಿ ಮಾತ್ರ ಕೈತಪ್ಪಿದೆ.

ವಿಶೇಷ ಎಂದರೆ ಇದೀಗ 863 ರನ್​ ಬಾರಿಸಿರುವ ಬಟ್ಲರ್ ಐಪಿಎಲ್​ ಸೀಸನ್​ವೊಂದರಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ 2ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ಇನ್ನು ಅಗ್ರಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. 2016 ರಲ್ಲಿ ಕೊಹ್ಲಿ 973 ಬಾರಿಸಿ ದಾಖಲೆ ಬರೆದಿದ್ದರು. ಈ ದಾಖಲೆ ಇನ್ನೂ ಕೂಡ ಅಚ್ಚಳಿಯದೇ ಉಳಿದಿದೆ. ಆದರೆ ಅಂದು ಅಬ್ಬರಿಸಿದ್ದ ವಿರಾಟ್ ಕೊಹ್ಲಿಗೂ ಐಪಿಎಲ್ ಟ್ರೋಫಿ ಒಲಿದಿರಲಿಲ್ಲ ಎಂಬುದು ವಿಶೇಷ.

ಅಂದರೆ 2016 ರಲ್ಲಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ ವಿರಾಟ್ ಕೊಹ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ದ ಆರ್​ಸಿಬಿ 8 ರನ್​ಗಳಿಂದ ಸೋತ ಪರಿಣಾಮ ಟ್ರೋಫಿ ಎತ್ತಿ ಹಿಡಿಯುವ ಭಾಗ್ಯ ದೊರೆತಿರಲಿಲ್ಲ. ಇದೀಗ ಜೋಸ್ ಬಟ್ಲರ್ ಕೂಡ ಹಲವು ಪ್ರಶಸ್ತಿಗಳನ್ನು ಪಡೆದರೂ ಚಾಂಪಿಯನ್ ತಂಡದ ಭಾಗವಾಗಲು ಸಾಧ್ಯವಾಗಿಲ್ಲ.

ಕಾಕತಾಳೀಯ ಎಂಬಂತೆ ಇಬ್ಬರು ಆಟಗಾರರ ಇನಿಂಗ್ಸ್ ಸೋಲಿನೊಂದಿಗೆ ಅಂತ್ಯವಾಗಿದ್ದು ಮೇ 29 ರಂದು ಎಂಬುದು ವಿಶೇಷ. ಅಂದರೆ 2016 ರಲ್ಲಿ ವಿರಾಟ್ ಕೊಹ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರನಾಗಿ ಮಿಂಚಿ ಎಸ್​ಆರ್​ಹೆಚ್​ ವಿರುದ್ದ ಫೈನಲ್​ನಲ್ಲಿ ಸೋತಿದ್ದು ಮೇ 29 ರಂದು. ಈ ಬಾರಿಯ ಐಪಿಎಲ್ ಫೈನಲ್ ಕೂಡ ಮೇ 29 ರಂದೇ ನಡೆದಿದೆ. ಅಲ್ಲದೆ 863 ರನ್​ ಬಾರಿಸಿ ಅಬ್ಬರಿಸಿದ್ದ ಜೋಸ್ ಬಟ್ಲರ್ ಅವರ ಐಪಿಎಲ್ ಅಭಿಯಾನವು ಕೂಡ ಅದೇ ದಿನಾಂಕದಂದೇ ಸೋಲಿನೊಂದಿಗೆ ಅಂತ್ಯಗೊಂಡಿದೆ.

ಒಟ್ಟಿನಲ್ಲಿ ಒಂದೇ ದಿನಾಂಕದಂದೇ ನಡೆದ ಫೈನಲ್​ ಪಂದ್ಯದಲ್ಲಿ ಇಡೀ ಸೀಸನ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ಇಬ್ಬರು ಆಟಗಾರರಿಗೆ ಪ್ರಶಸ್ತಿ ಒಲಿಯದಿರುವುದು ಕಾಕತಾಳೀಯವಾದರೂ ಅಚ್ಚರಿಯೇ ಸರಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *