SRH
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ತಂಡದಿಂದ ಡೇವಿಡ್ ವಾರ್ನರ್, ರಶೀದ್ ಖಾನ್ ಅವರಂತಹ ಸ್ಟಾರ್ ಆಟಗಾರರು ಹೊರನಡೆದಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಸೀಸನ್ನಲ್ಲಿ ಈ ಆಟಗಾರರು ಎಸ್ಆರ್ಹೆಚ್ ಪರ ಆಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಸನ್ ರೈಸರ್ಸ್ ಹೈದರಾಬಾದ್ (SRH) ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಒಂದೆಡೆ ರಿಟೈನ್ ಪ್ರಕ್ರಿಯೆ ಮುಕ್ತಾಯಗೊಳಿಸುತ್ತಿದ್ದಂತೆ ಇತ್ತ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಹೊಸ ಫ್ರಾಂಚೈಸಿಯ ಕೋಚ್ ಸ್ಥಾನವನ್ನು ಎದುರು ನೋಡುತ್ತಿದ್ದಾರೆ ಎಂದು ವರದಿಯಾಗಿದೆ. ಅತ್ಯಂತ ಯಶಸ್ವಿ ತರಬೇತುದಾರರಲ್ಲಿ ಒಬ್ಬರಾದ ಟ್ರೆವರ್ ಬೇಲಿಸ್ ಅವರು 2019 ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಕೋಚ್ ಆಗಿದ್ದರು. ಅಲ್ಲದೆ 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2020ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿದ್ದ ಬೇಲಿಸ್ ನೇತೃತ್ವದಲ್ಲಿ ಎಸ್ಆರ್ಹೆಚ್ ಮೂರನೇ ಸ್ಥಾನ ಅಲಂಕರಿಸಿತ್ತು. ಆದರೆ ದಿಢೀರಣೆ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಟ್ರೇವರ್ ಬೇಲಿಸ್ ಹೊರನಡೆದಿದ್ದಾರೆ.
ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಂಡಿ ಫ್ಲವರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಿಂಬಾಬ್ವೆಯ ಮಾಜಿ ನಾಯಕ ಕಳೆದ ಎರಡು ಸೀಸನ್ಗಳಿಂದ ಪಂಜಾಬ್ ತಂಡದ ಭಾಗವಾಗಿದ್ದರು. ಇದೀಗ ಆಂಡಿ ಫ್ಲವರ್ ಕೂಡ ಹೊಸ ಫ್ರಾಂಚೈಸಿ ಪರ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.