Hardik Pandya
ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟಿದೆ. ಅತ್ತ ಮುಂಬೈ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಕೀರನ್ ಪೊಲಾರ್ಡ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಖಾಯಂ ಸದಸ್ಯರಾಗಿದ್ದ ಪಾಂಡ್ಯ ಈ ಹಿಂದಿನ ಮೆಗಾ ಹರಾಜಿಗೂ ಮುನ್ನ ರಿಟೈನ್ ಆಟಗಾರರ ಪಟ್ಟಿಯಲ್ಲಿದ್ದರು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಪಾಂಡ್ಯ ಮುಂಬೈ ಪರ ಮಂಕಾಗಿದ್ದಾರೆ. ಇದೇ ಕಾರಣದಿಂದ ಮುಂಬೈ ಇಂಡಿಯನ್ಸ್ ಪಾಂಡ್ಯರನ್ನು ಕೈಬಿಟ್ಟು ಸೂರ್ಯಕುಮಾರ್ ಯಾದವ್ಗೆ ಮಣೆ ಹಾಕಿದೆ.
ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಪಾಂಡ್ಯ ಕೇವಲ 113.39 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ 12 ಪಂದ್ಯಗಳಲ್ಲಿ 127 ರನ್ ಮಾತ್ರಗಳಿಸಲು ಶಕ್ತರಾಗಿದ್ದರು. ಅಷ್ಟೇ ಅಲ್ಲದೆ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು, ಬೌಲಿಂಗ್ ಕೂಡ ಮಾಡಿರಲಿಲ್ಲ. ಇದೀಗ ಔಟ್ ಆಫ್ ಫಾರ್ಮ್ನಲ್ಲಿರುವ ಪಾಂಡ್ಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪರ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬುದ ಸಣ್ಣ ಸುಳಿವು ನೀಡಿದ್ದಾರೆ ಪಾಂಡ್ಯ.
ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬಿದ್ದಿರುವ ಬಗ್ಗೆ ಮಾತನಾಡಿರುವ ಪಾಂಡ್ಯ, “ನಾನು ಈ ನೆನಪುಗಳನ್ನು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನನ್ನ ಜೀವನದುದ್ದಕ್ಕೂ ಈ ಕ್ಷಣಗಳನ್ನು ನನ್ನೊಂದಿಗೆ ಸಾಗಿಸುತ್ತೇನೆ. ಸ್ನೇಹಿತರಿಗೆ, ಅಭಿಮಾನಿಗಳಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ಮುಂಬೈ ತಂಡದಲ್ಲಿ ನಾನು ಒಬ್ಬ ಆಟಗಾರನಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ. ನಾವು ಒಟ್ಟಿಗೆ ಗೆದ್ದಿದ್ದೇವೆ, ಒಟ್ಟಿಗೆ ಸೋತಿದ್ದೇವೆ, ಒಟ್ಟಿಗೆ ಹೋರಾಡಿದ್ದೇವೆ. ಈ ತಂಡದೊಂದಿಗಿನ ಪ್ರತಿ ಕ್ಷಣವೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಲೇಬೇಕು. ಅದರಂತೆ ಮುಂಬೈ ಜೊತೆಗಿನ ಒಡನಾಟ ಕೊನೆಗೊಂಡಿದೆ ಎನ್ನುವ ಮೂಲಕ ಹಾರ್ದಿಕ್ ಪಾಂಡ್ಯ ಮುಂಬರುವ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಅತ್ತ ಪಾಂಡ್ಯ ಹೆಸರು ಹೊಸ ಫ್ರಾಂಚೈಸಿ ಅಹಮದಾಬಾದ್ ಜೊತೆ ತಳುಕು ಹಾಕಿಕೊಂಡಿದ್ದು, ಹೀಗಾಗಿ ಅವರು ಮೆಗಾ ಹರಾಜಿಗೂ ಮುನ್ನವೇ ಹೊಸ ತಂಡದ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಹಾರ್ದಿಕ್ ಪಾಂಡ್ಯ, 2015, 2017, 2019 ಮತ್ತು 2020 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದರು ಎಂಬುದು ವಿಶೇಷ.