IPL 2022
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಭಾಗವಹಿಸಲು 1214 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಹರಾಜಿಗೂ ಮುನ್ನ ಬಿಸಿಸಿಐ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇನ್ನು ಕಳೆದ ಸೀಸನ್ನಲ್ಲಿ ಕಡಿಮೆ ಮೊತ್ತ ಪಡೆದಿದ್ದ ಕೆಲ ಆಟಗಾರರು ಈ ಬಾರಿ ದೊಡ್ಡ ಮೊತ್ತವನ್ನು ಮೂಲಬೆಲೆಯಾಗಿ ಘೋಷಿಸಿಕೊಂಡಿದೆ. ಇನ್ನು ಕೆಲ ಆಟಗಾರರು ಕಳೆದ ಸೀಸನ್ನಲ್ಲಿನ ಬೇಸ್ ಪ್ರೈಸ್ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಅದರಂತೆ 49 ಆಟಗಾರರು 2 ಕೋಟಿ ರೂ ಮೂಲ ಬೆಲೆ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ 17 ಭಾರತೀಯರಿದ್ದು, 32 ವಿದೇಶಿ ಆಟಗಾರರು ಸೇರಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ ಆರ್ಸಿಬಿ ತಂಡದ ಮಾಜಿ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಹರ್ಷಲ್ ಪಟೇಲ್ ಇರುವುದು ವಿಶೇಷ. ಅಂದರೆ ಕಳೆದ ಸೀಸನ್ನಲ್ಲಿ 20 ಲಕ್ಷ ರೂ. ಪಡೆದಿದ್ದ ಹರ್ಷಲ್ ಪಟೇಲ್ ಹಾಗೂ ದೇವದತ್ ಪಡಿಕ್ಕಲ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅದರಂತೆ ಆರ್ಸಿಬಿ ತಂಡದ ಈ ಇಬ್ಬರು ಮಾಜಿ ಆಟಗಾರರ ಖರೀದಿಗೆ 2 ಕೋಟಿಯಿಂದ ಬಿಡ್ಡಿಂಗ್ ಶುರುವಾಗಲಿದೆ.
ದೇವದತ್ ಪಡಿಕ್ಕಲ್ ಅವರನ್ನು 2020 ರಲ್ಲಿ RCB 20 ಲಕ್ಷದ ಮೂಲ ಬೆಲೆಗೆ ಖರೀದಿಸಿತು. ಅಲ್ಲದೆ ಮೊದಲ ಸೀಸನ್ನಲ್ಲೇ ಆರ್ಸಿಬಿ ಪರ 15 ಪಂದ್ಯಗಳಲ್ಲಿ 473 ರನ್ ಗಳಿಸಿದ್ದರು. ಪಡಿಕ್ಕಲ್ ಅವರ ಪ್ರದರ್ಶನದ ಆಧಾರದ ಮೇಲೆ ಆರ್ಸಿಬಿ ಅರ್ಹತಾ ಸುತ್ತಿಗೆ ಪ್ರವೇಶಿಸಿತು. ಇನ್ನು ಕಳೆದ ಐಪಿಎಲ್ ನಲ್ಲೂ ದೇವದತ್ ಬ್ಯಾಟ್ ಬಿರುಸಾಗಿ ಬ್ಯಾಟ್ ಬೀಸಿದ್ದರು. 14 ಪಂದ್ಯಗಳಲ್ಲಿ ಶತಕದ ನೆರವಿನಿಂದ 411 ರನ್ ಗಳಿಸಿದ್ದರು. ಹೀಗಾಗಿ ಈ ಬಾರಿ ದೇವದತ್ ಪಡಿಕ್ಕಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದರು.
ಮತ್ತೊಂದೆಡೆ ಕಳೆದ ಸೀಸನ್ ಐಪಿಎಲ್ನ ಅತ್ಯಂತ ಯಶಸ್ವಿ ವೇಗಿ ಹರ್ಷಲ್ ಪಟೇಲ್ ಕೂಡ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2021 ರ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ ಕೇವಲ 20 ಲಕ್ಷ ರೂ.ಗೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ ಕಳೆದ ಐಪಿಎಲ್ನಲ್ಲಿ ಹ್ಯಾಟ್ರಿಕ್ ಸೇರಿದಂತೆ 15 ಪಂದ್ಯಗಳಲ್ಲಿ ಒಟ್ಟು 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಇದೀಗ 2 ಕೋಟಿ ರೂ ಮೂಲ ಬೆಲೆಯೊಂದಿಗೆ ಹರ್ಷಲ್ ಪಟೇಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆದರೆ ಅಚ್ಚರಿ ಎಂದರೆ ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ 5.25 ಕೋಟಿ ಪಡೆದಿದ್ದ ಶಾರೂಖ್ ಖಾನ್ ಈ ಬಾರಿ ಕೂಡ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಶಸ್ವಿ ವೇಗಿ ಅವೇಶ್ ಖಾನ್ ಕೂಡ ಕೇವಲ 20 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅವೇಶ್ ಖಾನ್ ಕಳೆದ ಸೀಸನ್ನಲ್ಲಿ 24 ವಿಕೆಟ್ ಉರುಳಿಸಿದ್ದರು. ಈ ಮೂಲಕ ಐಪಿಎಲ್ 2021 ರ 2ನೇ ಯಶಸ್ವಿ ಬೌಲರ್ ಎನಿಸಿಕೊಂಡರು.