IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ | Royal Challengers Bangalore former captain Virat kohli in bad form in ipl 2022


IPL 2022: 5 ಇನ್ನಿಂಗ್ಸ್, ಕೇವಲ 107 ರನ್! ನಾಯಕತ್ವದಿಂದ ಕೆಳಗಿಳಿದರೂ ಬದಲಾಗಲಿಲ್ಲ ಕೊಹ್ಲಿ ಹಣೆಬರಹ

ಕೊಹ್ಲಿ

ಐಪಿಎಲ್ 2022 (IPL 2022)ರ 22 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು 23 ರನ್‌ಗಳಿಂದ ಸೋಲಿಸಿತು. 217 ರನ್ ಗುರಿ ಪಡೆದ ಆರ್​ಸಿಬಿ 9 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ಗಳಲ್ಲಿ ಶಹಬಾಜ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಗಳಿಸಿದ ರನ್‌ಗಳನ್ನು ನೋಡಿದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ವಲ್ಪ ರನ್ ಗಳಿಸಿದ್ದರೆ RCB ಸುಲಭವಾಗಿ ಪಂದ್ಯವನ್ನು ಗೆಲ್ಲುತ್ತಿತ್ತು. ಆದರೆ ಗುರಿ ಭೇದಿಸುವಾಗಲೇ ಬೆಂಗಳೂರಿಗೆ ಆರಂಭದಲ್ಲೇ ಮೊದಲ ಪೆಟ್ಟು ಬಿತ್ತು. ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಕೇವಲ 8 ರನ್ ಗಳಿಸಿ ಔಟಾದರು. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಮೈದಾನಕ್ಕೆ ಬಂದರೆ ಕಿಂಗ್ ಕೊಹ್ಲಿ ಹಳೆಯ ಫಾರ್ಮ್ ತೋರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಬೃಹತ್ ಗುರಿಯನ್ನು ಸುಲಭವಾಗಿ ಭೇದಿಸುವುದರಲ್ಲಿ ಪರಿಣತಿ ಹೊಂದಿರುವ ಕೊಹ್ಲಿ ಮತ್ತೊಮ್ಮೆ ಇಂತಹದೊಂದು ಚಮತ್ಕಾರ ಮಾಡುವ ನಿರೀಕ್ಷೆಯಲ್ಲಿ ಎಲ್ಲ ಅಭಿಮಾನಿಗಳಿದ್ದರು.

ಆದರೆ ಅಭಿಮಾನಿಗಳ ಭರವಸೆಯನ್ನು ಹುಸಿಗೊಳಿಸಿದ ಕೊಹ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ, ಕೇವಲ ಒಂದು ರನ್ ಮಾಡಿ ತೀವ್ರ ನಿರಾಸೆಯನ್ನುಂಟು ಮಾಡಿದರು. ಮುಕೇಶ್ ಚೌಧರಿ ಅವರು ಎಸೆತವನ್ನು ಬೃಹತ್ ಶಾಟ್ ಆಡುವ ಯತ್ನದಲ್ಲಿ ಕೊಹ್ಲಿ, ಶಿವಂ ದುಬೆಗೆ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್​ ನೀಡಿದರು. ಹೀಗಾಗಿ ಆರ್‌ಸಿಬಿ ಸೋಲಿಗೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ತಂಡಕ್ಕೆ ಕೊಹ್ಲಿ ಅಗತ್ಯವಿದ್ದಾಗ ಅವರ ಬ್ಯಾಟ್‌ನಿಂದ ಒಂದೇ ಒಂದು ರನ್ ಬಂದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲಿನಂತೆ ಅಬ್ಬರವಿಲ್ಲ.. 5 ಪಂದ್ಯಗಳಲ್ಲಿ ಫಿಫ್ಟಿ ಇಲ್ಲ..
ಆರ್‌ಸಿಬಿಯ ಮಾಜಿ ನಾಯಕ ಐಪಿಎಲ್‌ನಲ್ಲಿ ಬರೋಬ್ಬರಿ 5 ಶತಕ ಬಾರಿಸಿದ್ದಾರೆ. ಆದರೆ ಕಳೆದ ಸೀಸನ್​ನಿಂದ ಕೊಹ್ಲಿ ಫಾರ್ಮ್‌ನಲ್ಲಿಲ್ಲ. ಈ ವರ್ಷ ವಿರಾಟ್ 5 ಪಂದ್ಯಗಳನ್ನು ಆಡಿದ್ದು ಕೇವಲ 107 ರನ್ ಗಳಿಸಿದ್ದಾರೆ. ಅವರ ಬ್ಯಾಟ್​ನಿಂದ ಒಂದೇ ಒಂದು ಅರ್ಧಶತಕ ಮಾಡಲು ಸಾಧ್ಯವಾಗಲಿಲ್ಲ. ಕಳೆದ ಋತುವಿನಲ್ಲಿಯೂ ಕೊಹ್ಲಿ ದಾಖಲೆ ಕಳಪೆಯಾಗಿತ್ತು. ಅವರು 15 ಪಂದ್ಯಗಳನ್ನು ಆಡಿ, ಕೇವಲ 119.46 ಸ್ಟ್ರೈಕ್‌ರೇಟ್​ನಲ್ಲಿ ರನ್ ಗಳಿಸಿದರು. ಅದೇ ಸಮಯದಲ್ಲಿ, 2020 ರ ಆವೃತ್ತಿಯಲ್ಲೂ ಅವರ ಸ್ಟ್ರೈಕ್ ರೇಟ್ 121.35 ಆಗಿತ್ತು.

ಈ ಋತುವಿನಲ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇಲ್ಲಿಯವರೆಗೆ ಅದು ಆಗುವ ಲಕ್ಷಣ ಕಾಣುತ್ತಿಲ್ಲ. ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಗೆಲ್ಲಬೇಕಾದರೆ ಕೊಹ್ಲಿ ಬೇಗನೆ ಫಾರ್ಮ್‌ಗೆ ಮರಳಬೇಕೆಂಬುದು ಅಭಿಮಾನಿಗಳ ಹಾರೈಕೆಯಾಗಿದೆ.

ಪಂದ್ಯ ಹೀಗಿತ್ತು
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 22ನೇ ಪಂದ್ಯದಲ್ಲಿ ಆರ್​ಸಿಬಿ- ಸಿಎಸ್​ಕೆ (RCB vs CSK) ತಂಡಗಳು ಸೆಣಸಿದ್ದವು. ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಸಾಹಸದಿಂದ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 23 ರನ್​ಗಳ ಜಯ ಗಳಿಸಿದೆ. ಈ ಮೂಲಕ ಐಪಿಎಲ್ 2022ರ ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆದಿದೆ. ಈ ಐಪಿಎಲ್​ನ (IPL 2022) ಟ್ರೆಂಡ್​ನಂತೆ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿತ್ತು. ಆದರೆ ಇಬ್ಬನಿಯ ಸಮಸ್ಯೆ ಕಾಡದ ಕಾರಣ ಸಿಎಸ್​ಕೆ ಸ್ಪಿನ್ನರ್​ಗಳ ಮೋಡಿಗೆ ಆರ್​ಸಿಬಿ ಬ್ಯಾಟರ್​ಗಳು ತತ್ತರಿಸಿದರು. 20 ಓವರ್​ಗಳಲ್ಲಿ 216 ರನ್​ ಪೇರಿಸಿದ್ದ ಸಿಎಸ್​ಕೆಗೆ ಉತ್ತರವಾಗಿ ಆರ್​ಸಿಬಿ 9 ವಿಕೆಟ್ ನಷ್ಟಕ್ಕೆ 193 ರನ್​ ಗಳಿಸಲಷ್ಟೇ ಶಕ್ತವಾಯಿತು. ಕಪ್ತಾನನಾಗಿ ಮೊದಲ ಜಯ ಕಂಡ ರವೀಂದ್ರ ಜಡೇಜಾ, ಬೌಲಿಂಗ್ ಮೂಲಕ ತಂಡದ ಜಯಕ್ಕೆ ಕೊಡುಗೆ ನೀಡಿದರು. ಪಂದ್ಯದಲ್ಲಿ ಮಹೀಶ್ ತೀಕ್ಷಣ ಕೂಡ 4 ವಿಕೆಟ್ ಮೂಲಕ ಮಿಂಚಿದರು.

TV9 Kannada


Leave a Reply

Your email address will not be published. Required fields are marked *