IPL 2022, Final: ಇಂದಿನ ಫೈನಲ್ ಪಂದ್ಯದ ವಿಶೇಷತೆ ಏನು ಗೊತ್ತಾ? | IPL 2022, Final Gujarat Titans vs Rajasthan Royals Preview


IPL 2022, Final – Gujarat Titans vs Rajasthan Royals: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ಉತ್ತಮ ಪೈಪೋಟಿ ನೀಡಿತ್ತು. ಕೊನೆಯ ಓವರ್​ನಲ್ಲಿ ಡೇವಿಡ್ ಮಿಲ್ಲರ್ 3 ಸಿಕ್ಸ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

IPL 2022 ರ ಟೂರ್ನಿಗೆ ಇಂದು ಅದ್ಧೂರಿ ತೆರೆ ಬೀಳಲಿದೆ. ಅಹಮದಾಬಾದ್​ನ ನರೇಂದ್ರ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ದ ಸೆಣಸಲಿದೆ. ಈ ಪಂದ್ಯದಲ್ಲಿ ಗುಜರಾತ್ ತಂಡ ಗೆದ್ದರೆ ಚೊಚ್ಚಲ ಸೀಸನ್​ನಲ್ಲೇ ಟ್ರೋಫಿ ಗೆದ್ದ ಹಿರಿಮೆಗೆ ಪಾತ್ರವಾಗಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ದಾಖಲಿಸಿದರೆ, 14 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಏಕೆಂದರೆ 2008 ರಲ್ಲಿ ಪ್ರಶಸ್ತಿ ಗೆದ್ದ ಬಳಿಕ ರಾಜಸ್ಥಾನ್ ರಾಯಲ್ಸ್ ಫೈನಲ್ ಪ್ರವೇಶಿಸಿಲ್ಲ. ಇದೀಗ 14 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸಲಿದೆ.

ವಿಶೇಷ ಎಂದರೆ ಈ ಬಾರಿ ಪ್ರಮುಖ ಮೂರು ತಂಡಗಳನ್ನು ಹೊರತುಪಡಿಸಿ ಎರಡು ತಂಡಗಳು ಫೈನಲ್ ಆಡುತ್ತಿದೆ. ಅಂದರೆ ಕಳೆದ 14 ವರ್ಷಗಳ ಐಪಿಎಲ್ ಸೀಸನ್​ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಹೆಚ್ಚಾಗಿ ಫೈನಲ್​ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಮೂರು ತಂಡಗಳನ್ನು ಹೊರತುಪಡಿಸಿ 2 ತಂಡಗಳು ಫೈನಲ್ ಆಡುತ್ತಿದೆ. ಐಪಿಎಲ್ ಇತಿಹಾಸದಲ್ಲಿ ಹೀಗೆ ನಡೆಯುತ್ತಿರುವುದು ಇದು ಎರಡನೇ ಬಾರಿ. 2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್​ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್​) ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ಅಂದು ಕೆಕೆಆರ್ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

2014 ರ ಫೈನಲ್ ಹೊರತುಪಡಿಸಿದರೆ ಉಳಿದೆಲ್ಲಾ ಫೈನಲ್​ನಲ್ಲೂ ಸಿಎಸ್​ಕೆ, ಮುಂಬೈ ಅಥವಾ ಆರ್​ಸಿಬಿ ತಂಡಗಳು ಕಾಣಿಸಿಕೊಂಡಿದೆ. ಅಂದರೆ ಅಂತಿಮ ಪಂದ್ಯದಲ್ಲಿ ಈ ಮೂರು ತಂಡಗಳಲ್ಲಿ ಒಂದು ತಂಡ ಆಡಿದೆ. ಇದೀಗ ಈ ಮೂರು ತಂಡಗಳು ಇಲ್ಲದೆ ನಡೆಯುತ್ತಿರುವ ಎರಡನೇ ಫೈನಲ್ ಪಂದ್ಯ ಇದಾಗಿದ್ದು, ಹೀಗಾಗಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಕೂಡ ಎಲ್ಲರಲ್ಲೂ ಮನೆ ಮಾಡಿದೆ.

ಉಭಯ ತಂಡಗಳು ಈ ಬಾರಿ ಎರಡು ಪಂದ್ಯಗಳನ್ನು ಆಡಿದ್ದು, ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿದೆ. ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ದ ಗುಜರಾತ್ ಟೈಟಾನ್ಸ್ 37 ರನ್​ಗಳಿಂದ ಜಯ ಸಾಧಿಸಿತ್ತು. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿತ್ತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಹೊಂದಿದೆ ಎನ್ನಬಹುದು.

ಇದಾಗ್ಯೂ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ಉತ್ತಮ ಪೈಪೋಟಿ ನೀಡಿತ್ತು. ಕೊನೆಯ ಓವರ್​ನಲ್ಲಿ ಡೇವಿಡ್ ಮಿಲ್ಲರ್ 3 ಸಿಕ್ಸ್ ಬಾರಿಸುವ ಮೂಲಕ ಗುಜರಾತ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಫೈನಲ್ ಪಂದ್ಯದಲ್ಲಿ ಮತ್ತೆ ರಾಜಸ್ಥಾನ್ ರಾಯಲ್ಸ್ ಕಡೆಯಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ:

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್.

ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್ 11: ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಮೊಹಮ್ಮದ್ ಶಮಿ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *