IPL 2022 Final: ಫೈನಲ್ ಪಂದ್ಯದಲ್ಲಿ ಕೈಕೊಡುವ ಹಾರ್ದಿಕ್ ಪಾಂಡ್ಯ..! | IPL 2022 Final: Hardik Pandya Does Not Score Runs In IPL Final


IPL 2022 Final: ಉಭಯ ತಂಡಗಳು ಈ ಬಾರಿ ಎರಡು ಪಂದ್ಯಗಳನ್ನು ಆಡಿದ್ದು, ಈ ವೇಳೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೇಲುಗೈ ಸಾಧಿಸಿದೆ. ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ದ ಗುಜರಾತ್ ಟೈಟಾನ್ಸ್ 37 ರನ್​ಗಳಿಂದ ಜಯ ಸಾಧಿಸಿತ್ತು. ಇನ್ನು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿತ್ತು.

IPL 2022 Final: ಐಪಿಎಲ್ ಸೀಸನ್ 15 ಫೈನಲ್ ಪಂದ್ಯದಲ್ಲಿ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿ ನಿಂತಿದೆ. ತವರಿನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್​ ಪರ ನಾಯಕನಾಗಿ ಆಡಲು ಹಾರ್ದಿಕ್ ಪಾಂಡ್ಯ ಸಿದ್ಧರಾಗಿದ್ದಾರೆ. ಪ್ರಸಕ್ತ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್​ ನಡುವೆ 2 ಪಂದ್ಯಗಳು ನಡೆದಿದ್ದು, ಎರಡರಲ್ಲೂ ಗುಜರಾತ್ ಗೆದ್ದಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿ ಗುಜರಾತ್ ಟೈಟಾನ್ಸ್ ಗುರುತಿಸಿಕೊಂಡಿದೆ. ವಿಶೇಷ ಎಂದರೆ ಇದು ಹಾರ್ದಿಕ್ ಪಾಂಡ್ಯ ಅವರಿಗೆ 5ನೇ ಫೈನಲ್ ಪಂದ್ಯ.

ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಪರ 4 ಬಾರಿ ಪ್ರಶಸ್ತಿ ಸುತ್ತಿನಲ್ಲಿ ಆಡಿ ಗೆಲುವಿನ ರುಚಿ ನೋಡಿದ್ದರು. ಅಂದರೆ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸೋಲನ್ನು ನೋಡಿಲ್ಲ. ಆದರೆ ಈ ವೇಳೆ ಪಾಂಡ್ಯ ಮಿಂಚಿಲ್ಲ ಎಂಬುದು ವಿಶೇಷ. ಒಟ್ಟಾರೆ ಐಪಿಎಲ್‌ನಲ್ಲಿ ಪಾಂಡ್ಯ 1929 ರನ್ ಗಳಿಸಿದ್ದಾರೆ. ಅಂದರೆ ಇಂದು 71 ರನ್ ಗಳಿಸಿದರೆ ಅವರ 2 ಸಾವಿರ ರನ್ ಕೂಡ ಪೂರ್ಣಗೊಳ್ಳುತ್ತದೆ. ಇನ್ನು ಪ್ರಸಕ್ತ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ್ದು ಹಾರ್ದಿಕ್ ಪಾಂಡ್ಯ. ಇದಾಗ್ಯೂ ಗುಜರಾತ್ ಟೈಟಾನ್ಸ್‌ಗೆ ಇದೀಗ ಆತಂಕ ಎದುರಾಗಿದೆ.

ಏಕೆಂದರೆ ಹಾರ್ದಿಕ್ ಪಾಂಡ್ಯ ಆಡಿರುವ 4 ಫೈನಲ್ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಈ ಬಾರಿ ಗುಜರಾತ್ ಟೈಟಾನ್ಸ್ ತಂಡದ ಪರ 453 ರನ್​ ಬಾರಿಸಿರುವ ಪಾಂಡ್ಯ ತಂಡದ ಬ್ಯಾಟಿಂಗ್​ ವಿಭಾಗದ ಆಧಾರಸ್ತಂಭ. ಆದರೆ ಪಾಂಡ್ಯ ನಿರ್ಣಾಯಕ ಪಂದ್ಯದಲ್ಲಿ ಎಡವಿರುವುದಕ್ಕೆ ಇತಿಹಾಸವೇ ಸಾಕ್ಷಿ. ಏಕೆಂದರೆ ಮುಂಬೈ ಇಂಡಿಯನ್ಸ್ ಪರ ಆಡಿದ 4 ಫೈನಲ್​ ಪಂದ್ಯಗಳಲ್ಲೂ ಮಹತ್ವದ ಕೊಡುಗೆ ನೀಡುವಲ್ಲಿ ಪಾಂಡ್ಯ ವಿಫಲರಾಗಿದ್ದರು.

ಹಾರ್ದಿಕ್ ಪಾಂಡ್ಯ 2015ರಲ್ಲಿ ಮೊದಲ ಐಪಿಎಲ್ ಫೈನಲ್ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ 5 ವಿಕೆಟ್‌ಗೆ 202 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆದರೆ, ಪಾಂಡ್ಯ 2 ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇನ್ನು 2017 ರಲ್ಲಿ ಪಾಂಡ್ಯ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಫೈನಲ್ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಅವರು 9 ಎಸೆತಗಳಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಐಪಿಎಲ್ 2019 ರ ಫೈನಲ್ ಪಂದ್ಯ ಮತ್ತೊಮ್ಮೆ ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ಮುಂಬೈ 8 ವಿಕೆಟ್‌ಗೆ 149 ರನ್ ಗಳಿಸಿತು. ಈ ಪಂದ್ಯದಲ್ಲೂ ಪಾಂಡ್ಯ 10 ಎಸೆತಗಳಲ್ಲಿ 16 ರನ್ ಗಳಿಸಿ ಔಟಾಗಿದ್ದರು. ಇದಾದ ಬಳಿಕ 2020 ರಲ್ಲಿ ಹಾರ್ದಿಕ್ ಪಾಂಡ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್ ಪಂದ್ಯವಾಡಿದ್ದರು. ಆ ಪಂದ್ಯದಲ್ಲಿ ಪಾಂಡ್ಯ ಗಳಿಸಿದ್ದು ಕೇವಲ 3 ರನ್​ ಮಾತ್ರ.

ಅಂದರೆ ಮುಂಬೈ ಇಂಡಿಯನ್ಸ್ ಪರ 4 ಫೈನಲ್ ಪಂದ್ಯವಾಡಿರುವ ಹಾರ್ದಿಕ್ ಪಾಂಡ್ಯ ಒಟ್ಟು ಕಲೆಹಾಕಿರುವ ಮೊತ್ತ ಕೇವಲ 23 ರನ್​ಗಳು ಮಾತ್ರ. ಹೀಗಾಗಿಯೇ ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ದದ ಫೈನಲ್​ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಒತ್ತಡವನ್ನು ಮೆಟ್ಟಿ ನಿಂತು ಮಿಂಚಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

TV9 Kannada


Leave a Reply

Your email address will not be published. Required fields are marked *