IPL 2022 Qualifier 1: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಬಲಿಷ್ಠ ತಂಡಗಳ ಎಂಟ್ರಿ | IPL 2022 Qualifier 1: GT vs RR will play Qualifier 1


IPL 2022 Qualifier 1: GT vs RR:- 2008 ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲೂ 2018 ರಲ್ಲಿ ಕೊನೆಯ ಬಾರಿಗೆ ಪ್ಲೇಆಫ್ ಪ್ರವೇಶಿಸಿದ್ದ ಆರ್​ಆರ್ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೆ ನಿರ್ಣಾಯಕ ಪಂದ್ಯಗಳ ಸುತ್ತಿಗೆ ಪ್ರವೇಶಿಸಿದೆ.

IPL 2022: ಐಪಿಎಲ್ ಸೀಸನ್​ 15 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಪ್ಲೇಆಫ್ ಆಡುವ ಮೂರು ತಂಡಗಳು ಫೈನಲ್ ಆಗಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (MI vs DC) ನಡುವಣ ಪಂದ್ಯದ ಬಳಿಕ ಪ್ಲೇಆಫ್​ಗೆ ಅರ್ಹತೆ ಪಡೆಯುವ ನಾಲ್ಕನೇ ತಂಡ ಯಾವುದೆಂದು ನಿರ್ಧಾರವಾಗಲಿದೆ. ಇದಾಗ್ಯೂ ನಾಲ್ಕನೇ ತಂಡದ ಎಂಟ್ರಿಯೊಂದಿಗೆ ಪಾಯಿಂಟ್ಸ್ ಟೇಬಲ್​​ನಲ್ಲಿ ಬದಲಾವಣೆಯಾಗುವುದಿಲ್ಲ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಎರಡು ತಂಡಗಳು ಫೈನಲ್ ಆಗಿವೆ. ಅದರಂತೆ ಮೊದಲ ಕ್ವಾಲಿಫೈಯರ್ ಮುಖಾಮುಖಿಯಲ್ಲಿ ಬಲಿಷ್ಠ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಲಿದೆ.

ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ತಂಡವು ಸಿಎಸ್​ಕೆ ತಂಡವನ್ನು ಮಣಿಸಿ 18 ಪಾಯಿಂಟ್ಸ್​ ಕಲೆಹಾಕಿದೆ. ಈ ಮೂಲಕ 18 ಪಾಯಿಂಟ್ಸ್​ಗಳಿಸಿ 2ನೇ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ನೆಟ್​ ರನ್​ ರೇಟ್ ಮೂಲಕ ಹಿಂದಿಕ್ಕಿದೆ. ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್​ +0.251 ನೆಟ್ ರನ್​ ರೇಟ್ ಹೊಂದಿದ್ದರೆ, ರಾಜಸ್ಥಾನ್ ರಾಯಲ್ಸ್ +0.298 ನೆಟ್​ ರನ್ ರೇಟ್ ಪಡೆದುಕೊಂಡಿದೆ. ಈ ಮೂಲಕ ಲಕ್ನೋಗಿಂತ 0.047 ತುಸು ಹೆಚ್ಚು ನೆಟ್​ ರನ್ ರೇಟ್ ಪಡೆದು ರಾಜಸ್ಥಾನ್ ರಾಯಲ್ಸ್​ ಸೇಫ್ ಝೋನ್​ಗೇರಿದೆ.

ಅದರಂತೆ ಮೇ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೇರಲಿದೆ. ಇತ್ತ ಕೂದಳೆಲೆಯ ಅಂತರದಿಂದ ನೆಟ್​ ರನ್​ ರೇಟ್​ನಲ್ಲಿ ಹಿಂದುಳಿಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡಬೇಕಾಗಿ ಬಂದಿದೆ.

ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ಲಾಭವೇನು?
ಪಾಯಿಂಟ್ಸ್​ ಟೇಬಲ್​ನಲ್ಲಿ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯವಾಡುವ ಮುಖ್ಯ ಲಾಭವೆಂದರೆ ಗೆದ್ದರೆ ನೇರವಾಗಿ ಫೈನಲ್​ಗೆ ಪ್ರವೇಶಿಸಬಹುದು. ಒಂದು ವೇಳೆ ಸೋತರೆ 2ನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ. ಅಂದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದೊಡನೆ ಪಂದ್ಯವಾಡಬೇಕಾಗುತ್ತದೆ.

ಇಲ್ಲಿ ಮೊದಲ ಅವಕಾಶದಲ್ಲಿ ಸೋತರೂ, 2ನೇ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್​ಗೆ ಎಂಟ್ರಿ ಕೊಡುವ ಚಾನ್ಸ್ ಮೊದಲ ಕ್ವಾಲಿಫೈಯರ್​ ಪಂದ್ಯವಾಡುವ ತಂಡಗಳಿಗೆ ಇರಲಿದೆ. ಅಂದರೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಿಗೆ ಫೈನಲ್​ ಪ್ರವೇಶಿಸಲು ಎರಡು ಅವಕಾಶ ಸಿಗಲಿದೆ. ಮತ್ತೊಂದೆಡೆ ಎಲಿಮಿನೇಟರ್ ಪಂದ್ಯವಾಡುವ ತಂಡಗಳಲ್ಲಿ ಸೋತ ತಂಡ ನೇರವಾಗಿ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿಯೇ ಕೊನೆಯ ಲೀಗ್ ಪಂದ್ಯದಲ್ಲಿ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಕ್ವಾಲಿಫೈಯರ್​ನಲ್ಲಿ ಅವಕಾಶ ಪಡೆದು ಸೇಫ್ ಝೋನ್​ನಲ್ಲಿದೆ.

ಅಂದಹಾಗೆ 2008 ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ್ ರಾಯಲ್ಸ್ ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. ಅದರಲ್ಲೂ 2018 ರಲ್ಲಿ ಕೊನೆಯ ಬಾರಿಗೆ ಪ್ಲೇಆಫ್ ಪ್ರವೇಶಿಸಿದ್ದ ಆರ್​ಆರ್ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೆ ನಿರ್ಣಾಯಕ ಪಂದ್ಯಗಳ ಸುತ್ತಿಗೆ ಪ್ರವೇಶಿಸಿದೆ. ಈ ಮೂಲಕ ಈ ಬಾರಿ ತನ್ನ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ತವಕದಲ್ಲಿದೆ ರಾಜಸ್ಥಾನ್ ರಾಯಲ್ಸ್​. ಮತ್ತೊಂದೆಡೆ ಚೊಚ್ಚಲ ಸೀಸನ್​ನಲ್ಲಿ ಗುಜರಾತ್ ಟೈಟನ್ಸ್ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದು ಮೊದಲ ಸೀಸನ್​ನಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸುವ ಇರಾದೆಯಲ್ಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *