ಕ್ರಿಕೆಟ್ನಲ್ಲಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದ ಆತ, ದೇಶದ ರಾಜಕಾರಣದಲ್ಲೂ ಮಿಂಚುತ್ತಿದ್ದಾರೆ. ಅವರು ಪೊಲಿಟಿಕಲ್ ಮೈದಾನದಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಿ ಮೂರು ವರ್ಷವೇ ಆಗೋಗಿದೆ. ಕ್ರೀಸ್ನಲ್ಲಿ ಬೌಲರ್ಗಳನ್ನು ಹೇಗೆ ದಂಡಿಸುತ್ತಿದ್ರೋ ಅದೇ ರೀತಿಯಲ್ಲಿ ರಾಜಕಾರಣದಲ್ಲೂ ಎದುರಾಳಿಗಳ ಬೆವರಿಳಿಸುತ್ತಿದ್ದಾರೆ. ಉಗ್ರರು, ದೇಶ ವಿರೋಧಿಗಳ ಬೆಂಕಿಯ ಚೆಂಡನ್ನು ತಮ್ಮ ಮಾತುಗಳ ಮೂಲಕವೇ ಬೌಂಡರಿಗೆ ಅಟ್ಟುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಈಗ ಉಗ್ರರ ಟಾರ್ಗೆಟ್ ಆದ್ರಾ?
ಗೌತಮ್ ಗಂಭೀರ್ ಅಂದ್ರೆ ನೆನಪಾಗೋದು.. ರಾಹುಲ್ ದ್ರಾವಿಡ್ ತಾಳ್ಮೆ, ಸಚಿನ್ ತೆಂಡುಲ್ಕರ್ ಆಕ್ರಮಣಕಾರಿ ಆಟದ ಸಮ್ಮಿಲನ. ಸಮಯೋಚಿತವಾಗಿ ಚೆಂಡನ್ನು ದಂಡಿಸುವಲ್ಲಿ ಗಂಭೀರ್ ಸಖತ್ ಎಕ್ಸ್ಪರ್ಟ್. ಅದೆಷ್ಟೋ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ತಂದಿರೋ ಆಟಗಾರ, ಗಂಭೀರ್ ಕ್ರೀಸ್ನಲ್ಲಿದ್ರು ಅಂದ್ರೆ, ಮ್ಯಾಚ್ ನಮ್ಮದೇ ಅನ್ನೋ ನಂಬಿಕೆ ಇರ್ತಿತ್ತು. ಅದರಲ್ಲಿಯೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ, 2011ರಲ್ಲಿ ವಿಶ್ವಕಪ್ನಲ್ಲಿ ಗಂಭೀರ್ ಆಟವನ್ನು ಕ್ರಿಕೆಟ್ ಅಭಿಮಾನಿಗಳು ಯಾವತ್ತೂ ಮರೆಯಲ್ಲ.
ಅದು, 2011ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 6 ವಿಕೆಟ್ಗೆ 274 ರನ್ ಕಲೆ ಹಾಕಿತ್ತು. ಸವಾಲಿನ ಮೊತ್ತ ಬೆನ್ನು ಹತ್ತಿದ್ದ ಭಾರತ ಶೂನ್ಯಕ್ಕೆ 1 ವಿಕೆಟ್ ಕಳೆದುಕೊಂಡಿತ್ತು. ಒನ್ಡೌನ್ನಲ್ಲಿ ಬ್ಯಾಟಿಂಗ್ಗೆ ಇಳಿದ ಗಂಭೀರ್ ಲಂಕಾ ಬೌಲರ್ಗಳನ್ನು ಅಕ್ಷರಶಃ ಬೆವರಿಳಿಸಿ ಬಿಟ್ಟಿದ್ರು. 97 ರನ್ ಬಾರಿಸುವ ಮೂಲಕ ಭಾರತದ ಗೆಲುವಿಗೆ ಭದ್ರ ಅಡಿಪಾಯ ಹಾಕಿದ್ರು. ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದು ವಿಜಯಪತಾಕೆ ಹಾರಿಸಿತ್ತು.
ಭಾರತ ತಂಡದಲ್ಲಿ ಅವಕಾಶ ವಂಚಿತರಾದ ಮೇಲೆ ಗಂಭೀರ್ ಐಪಿಎಲ್ನಲ್ಲಿ ಯಶಸ್ವಿ ಆಟಗಾರನಾಗಿ ಮಿಂಚಿದ್ದರು. ಆನಂತರ ಐಪಿಎಲ್ಗೂ ನಿವೃತ್ತಿ ಘೋಷಣೆ ಮಾಡಿ 2019 ರಲ್ಲಿ ಬಿಜೆಪಿ ಸೇರ್ಪಡೆಯಾಯಾದ್ರು. ಆ ಮೂಲಕ ಜೀವನದ ಸೆಕೆಂಡ್ ಇನಿಂಗ್ಸ್ ಆರಂಭಿದ್ರು. ದೆಹಲಿಯ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ರು. ಕ್ರೀಸ್ನಲ್ಲಿ ಹೇಗೆ ಎದುರಾಳಿ ಬೌಲರ್ಗಳ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ರೋ ಅದೇ ರೀತಿ ರಾಜಕೀಯ ಎದುರಾಳಿಗಳ ಚೆಂಡನ್ನು ದಂಡಿಸುತ್ತಿದ್ದಾರೆ ಗಂಭೀರ್. ಭಯೋತ್ಪಾದಕರ ವಿರುದ್ಧ, ಉಗ್ರಗಾಮಿಗಳ ವಿರುದ್ಧ ಅಬ್ಬರಿಸುತ್ತಿದ್ದಾರೆ. ಅಪ್ಪಟ ದೇಶಭಕ್ತನಾಗಿರೋ ಗಂಭೀರ್ಗೆ ಇದೀಗ ಬೆದರಿಕೆಯೊಂದು ಬಂದಿದೆ.
ಮಾಜಿ ಕ್ರಿಕೆಟಿಗನಿಗೆ ಉಗ್ರರಿಂದ ಜೀವ ಬೆದರಿಕೆ
ದೆಹಲಿ ಪೊಲೀಸರಿಗೆ ದೂರು ನೀಡಿದ ಗಂಭೀರ್
ವಿ ಆರ್ ಗೋಯಿಂಗ್ ಟು ಕಿಲ್ ಯು ಅಂಡ್ ಯುವರ್ ಫ್ಯಾಮಿಲಿ…. ಅಂದ್ರೆ ನಾವು ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಮುಗಿಸುತ್ತೇವೆ …ಇಂತಹವೊಂದು ಮೇಲ್ ಗೌತಮ್ ಗಂಭೀರ್ ಅವರ ಅಫೀಷಿಯಲ್ ಮೇಲ್ ಐಡಿಗೆ ಬಂದು ಬಿದ್ದಿದೆ. ಅದೇನು ಯಾರೋ ಕಿಡಿಗೇಡಿಗಳು ಕಳುಹಿಸಿ ಸಂಚಲನ ಸೃಷ್ಟಿಸಿರೋ ಮೇಲ್ ಅಲ್ಲವೇ ಅಲ್ಲ. ‘ಐಸಿಸ್ ಕಾಶ್ಮೀರ’ ಎಂಬ ಹೆಸರಿನಿಂದ ಬಂದಿರೋದು. ಐಸಿಸ್ ಅಂದ್ರೆ ಸಾಕು, ಅದು ಯಾವ ಸಂಘಟನೆ? ಅದರ ಟಾರ್ಗೆಟ್ ಏನು? ಅನ್ನೋದು ಅರಿವಾಗಿ ಬಿಡುತ್ತೆ.
ಗಂಭೀರ್ ಕ್ರಿಕೆಟ್ನಲ್ಲಿ ಹೇಗೆ ಅಬ್ಬರಿಸುತ್ತಾ ಎದುರಾಳಿಗಳ ಮೇಲೆ ದಾಳಿ ನಡೆಸುತ್ತಾ ಇದ್ರೋ, ಅದೇ ರೀತಿ ರಾಜಕೀಯದಲ್ಲಿಯೂ ಅಬ್ಬರಿಸುತ್ತಿದ್ದಾರೆ. ಇದೀಗ ಉಗ್ರರ ಕಣ್ಣು ಗಂಭೀರ್ ಮೇಲೆ ಬಿದ್ದಿರೋದಕ್ಕೆ ನವೆಂಬರ್ 23 ರಂದು ಬಂದ ಮೇಲ್ ಸಾಕ್ಷಿಯಾಗಿದೆ. ಐಸಿಸ್ ಕಾಶ್ಮೀರ ಹೆಸರಲ್ಲಿ ಬಂದಿರೋ ಈ ಮೇಲ್ ಅನ್ನು ಕಡೆಗಣಿಸುವಂತಿಲ್ಲ. ಅದರಲ್ಲಿಯೂ ಗಂಭೀರ್ ಸಂಸತ್ ಸದಸ್ಯ ಕೂಡ ಹೌದು. ಹೀಗಾಗಿ ಕೊಲೆ ಬೆದರಿಕೆಯ ಮೇಲ್ ಬಂದ ಬಗ್ಗೆ ದೆಹಲಿ ಪೊಲೀಸರಿಗೆ ಗಂಭೀರ್ ದೂರು ನೀಡಿದ್ದಾರೆ. ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ಗಂಭೀರ’ ಕೋಟೆ
ಗೌತಮ್ ಗಂಭೀರ್ಗೆ ಕೊಲೆ ಬೆದರಿಕೆ ಹಾಕಿರೋ ಪ್ರಕರಣ ಗಂಭೀರ ಪರಿಣಾಮದ್ದಾಗಿದೆ. ಹೀಗಾಗಿ ದೂರು ಬಂದ ತಕ್ಷಣವೇ ದೆಹಲಿ ಪೊಲೀಸರು ಗಂಭೀರ್ಗೆ ಹೆಚ್ಚಿನ ಭದ್ರತೆ ನೀಡಿದ್ದಾರೆ. ಗಂಭೀರ್ ಮನೆಯ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಮನೆಯ ಸುತ್ತ ಮುತ್ತ ಗನ್ ಮ್ಯಾನ್ಗಳನ್ನು ನೇಮಕ ಮಾಡಿದ್ದಾರೆ. ಮನೆಯ ಸಮೀಪ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲಿ ಓಡಾಡುವವರ ತಪಾಸಣೆ ನಡೆಸುತ್ತಿದ್ದಾರೆ. ಮನೆ ಮುಂದೆ ಪೊಲೀಸ್ ವಾಹನಗಳ ಸರ್ಪಗಾವಲು ಹಾಕಲಾಗಿದೆ.
ಒಬ್ಬ ಮಾಜಿ ಕ್ರಿಕೆಟ್ ಆಟಗಾರನಿಗೆ, ಸಂಸದನಿಗೆ ಈ ರೀತಿಯ ಜೀವ ಬೆದರಿಕೆ ಬಂದಿರೋದು ಗಂಭೀರ ವಿಷಯ. ದೂರ ದಾಖಲಾದ ತಕ್ಷಣವೇ ಸುದ್ದಿ ಕಾಡ್ಗಿಚ್ಚಿನಂತೆ ವ್ಯಾಪಿಸಿದೆ. ನಿರೀಕ್ಷೆಯಂತೆ ಪೊಲೀಸರು ಗಂಭೀರ್ ಮತ್ತು ಅವರ ಕುಟುಂಬಕ್ಕೆ ಬಿಗಿ ಭದ್ರತೆ ಒದಗಿಸಿದ್ದಾರೆ. ಮನೆಯ ಸುತ್ತಮುತ್ತ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.
ಕಾಶ್ಮೀರದಲ್ಲಿ ನೆಲೆ ನಿಂತಿದ್ದಾರಾ ಐಸಿಸ್ ಉಗ್ರರು?
ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕೊಲ್ಲುತ್ತೇವೆ’ ಇಂತಹವೊಂದು ಮೇಲ್ ಗಂಭೀರ್ಗೆ ಬಂದಿರೋದು ಐಸಿಸ್ ಕಾಶ್ಮೀರ ಎಂಬ ಐಡಿಯಿಂದ. ಇಲ್ಲಿಯವರೆಗೂ ಐಸಿಸ್, ಐಸಿಸ್-ಕೆ ಬಗ್ಗೆ ಕೇಳಿದ್ದೀವಿ. ಆ ಉಗ್ರಗಾಮಿ ಸಂಘಟನೆಗಳಲ್ಲಿ ಕೆಲವು ಭಾರತೀಯರು ಸೇರಿಕೊಂಡಿದ್ದಾರೆ ಅನ್ನೋದು ಗೊತ್ತಿರೋ ವಿಚಾರ. ಅದ್ರೆ, ಇದೇನಿದು ಐಸಿಸ್ ಕಾಶ್ಮೀರ? ಹಾಗಾದ್ರೆ, ಐಸಿಸ್ ಪ್ರೇರಣೆಯಿಂದ ಕಾಶ್ಮೀರದಲ್ಲಿ ಮತ್ತೊಂದು ಭಯೋತ್ಪಾದಕ ಸಂಘಟನೆ ಹುಟ್ಟಿಕೊಳ್ತಾ? ಇದರಲ್ಲಿರೋ ಭಯೋತ್ಪಾದಕರು ಯಾರು? ಇಂತಹ ಹತ್ತಾರು ಪ್ರಶ್ನೆಗಳು ಎದುರಾಗಿವೆ.
ಉಗ್ರಗಾಮಿ ಸಂಘಟನೆಗಳಲ್ಲಿಯೇ ಅತ್ಯಂತ ಕ್ರೂರ ಸಂಘಟನೆ ಅಂದ್ರೆ ಅದು ಐಸಿಸ್. ಇಡೀ ವಿಶ್ವವನ್ನೇ ಇಸ್ಲಾಂ ರಾಷ್ಟ್ರವಾಗಿ ಮಾಡಬೇಕು ಅನ್ನೋದು ಅವರ ಗುರಿ. ತಮಗೆ ಆಗದವರನ್ನು ಒತ್ತೆಯಾಳಾಗಿ ಇಟ್ಟುಕೊಳ್ಳುವುದು, ಕತ್ತುಕೊಯ್ದು ಹತ್ಯೆ ಮಾಡುವುದು, ಅದನ್ನು ವಿಡಿಯೋ ಮಾಡಿ ಬಿತ್ತರಿಸುವುದು ಈ ಉಗ್ರಗಾಮಿ ಸಂಘಟನೆಗಳ ಕಾರ್ಯ. ಜೊತೆಗೆ ಬಾಂಬ್ ಸ್ಫೋಟಿಸಿ ಹೆಚ್ಚಿನ ಸಾವು ನೋವು ಆಗುವಂತೆ ಮಾಡುವುದು, ಜೀವ ಬೆದರಿಕೆ ಹಾಕುವುದು, ಅರಾಜಕತೆ ಸೃಷ್ಟಿಸುವುದು ಇವರ ಗುರಿ. ಈಗಾಗಲೇ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಈ ಸಂಘಟನೆ ಬೇರೆ ಬೇರೆ ಹೆಸರಿನಲ್ಲಿ ನೆಲೆ ನಿಂತಿದೆ. ಇದೀಗ ಇದೇ ಸಂಘಟನೆ ಇದೀಗ ಕಾಶ್ಮೀರದಲ್ಲಿಯೂ ಅಸ್ತಿತ್ವಕ್ಕೆ ಬಂತಾ ಅನ್ನೋ ಪ್ರಶ್ನೆ ಹುಟ್ಟಿಸಿದೆ.
ಗಂಭೀರ್ ಟಾರ್ಗೆಟ್ ಆಗಿದ್ದೇಕೆ?
ಭಯೋತ್ಪಾದಕರಿಗೆ ಗಂಭೀರ್ ಟಾರ್ಗೆಟ್ ಆಗಿದ್ದು ಯಾಕೆ ಅಂತ ನೋಡುವುದಾದ್ರೆ, ಗಂಭೀರ್ ಉಗ್ರರಿಗೆ ಖಡಕ್ ಎಚ್ಚರಿಕೆ ನೀಡುತ್ತಿದ್ರು. ಭಯೋತ್ಪಾದಕರ ಕೃತ್ಯಗಳನ್ನು ಖಂಡಿಸುತ್ತಿದ್ರು. ಪಾಕಿಸ್ತಾನಕ್ಕೆ ತಿರುಗೇಟು ನೀಡುತ್ತಿದ್ರು. ದೇಶವಿರೋಧಿಗಳಿಗೆ ಸದಾ ಎಚ್ಚರಿಕೆ ರವಾನಿಸುತ್ತಿದ್ರು.
ಇದೇ ಕಾರಣಕ್ಕೆ ಗಂಭೀರ್ ಅವರನ್ನು ಭಯೋತ್ಪಾದಕರು ಟಾರ್ಗೆಟ್ ಮಾಡಿರೋ ಸಾಧ್ಯತೆ ಇದೆ. ಗಂಭೀರ್ಗೆ ಕ್ರಿಕೆಟ್ ಅಂಗಳದಲ್ಲಿಯೂ ವಿರೋಧಿಗಳು ಇದ್ರು. ಅದರಲ್ಲಿಯೂ ಅಂಕಣದಲ್ಲಿಯೇ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಾಹಿದ್ ಅಫ್ರಿದಿ, ಕಮ್ರಾನ್ ಅಕ್ಮಲ್ ಜೊತೆಗಿನ ವಾಗ್ವಾದ ಕ್ರಿಕೆಟ್ ಜಗತ್ತು ಮರೆಯಲಾಗದ್ದು. ಇನ್ನು, ರಾಜಕೀಯಕ್ಕೆ ಎಂಟ್ರಿಯಾದ ಮೇಲೆ ತಮ್ಮ ಖಡಕ್ ಮಾತಿನಿಂದಲೇ ಎದುರಾಳಿಯನ್ನು ತಿವಿಯುತ್ತಿದ್ದಾರೆ ಗೌತಮ್ ಗಂಭೀರ್. ಹಾಗೇ ಭಯೋತ್ಪಾದನೆ, ಪಾಕಿಸ್ತಾನ ವಿಚಾರ ಬಂದಾಗ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಬಹುಶಃ ಗಂಭೀರ್ ಅವರ ಅಂತಹ ನುಡಿಗಳೇ ಉಗ್ರರ ಟಾರ್ಗೆಟ್ಗೆ ಕಾರಣವಾಗಿರೋ ಸಾಧ್ಯತೆ ಇದೆ.
ಇಮ್ರಾನ್ ಖಾನ್ಗೆ ಅಣ್ಣ ಎಂದ ಸಿಧುಗೆ ತಿರುಗೇಟು
ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ ಎಂದಿದ್ದ ಗಂಭೀರ್
ಇತ್ತೀಚೆಗೆ ಮಾಜಿ ಕ್ರಿಕೆಟಿಗ, ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ರು. ಹಾಗೇ ಪ್ರಾರ್ಥನೆ ಸಲ್ಲಿಸಿ ವಾಪಸ್ ಬಂದಿರಲಿಲ್ಲ. ಅಲ್ಲಿಯ ಮಾಧ್ಯಮಗಳ ಜೊತೆ ಮಾತಾಡಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ಹಿರಿಯಣ್ಣ ಇದ್ದಂತೆ ಎಂದಿದ್ದರು. ನನಗೆ ಇಲ್ಲಿ ಬಹಳ ಗೌರವ ಸಿಕ್ಕಿದೆ. ಇಮ್ರಾನ್ ಖಾನ್ ನನಗೆ ಬಹಳ ಪ್ರೀತಿ ನೀಡಿದ್ದಾರೆ ಎಂದು ಹೇಳಿದ್ರು. ಈ ಬಗ್ಗೆ ಕ್ರುದ್ಧರಾಗಿದ್ದ ಗಂಭೀರ್ ಸಿಧು ವಿರುದ್ಧ ಹರಿ ಹಾಯ್ದಿದ್ದರು. ನಿಮ್ಮ ಮಕ್ಕಳನ್ನು ಗಡಿಗೆ ಕಳುಹಿಸಿ, ಸೈನಿಕರ ಕಷ್ಟ ಏನು ಅಂತಾ ಅರ್ಥವಾಗುತ್ತೆ. ಭಯೋತ್ಪಾದಕ ದೇಶದ ಪ್ರಧಾನಿಯನ್ನು ಹಿರಿಯಣ್ಣ ಅಂದಿರೋದು ನಾಚಿಕೆಗೇಡಿನ ವಿಚಾರ ಅಂತ ಕಿಡಿಕಾರಿದ್ರು….ಹೀಗೆ, ದೇಶದ ವಿಚಾರ ಏನೇ ಬರಲಿ, ಗಂಭೀರ್ ಗಂಭೀರವಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ರು.
ಇಮ್ರಾನ್ ಖಾನ್ ಅನ್ನು ಸಿಧು ತಮ್ಮ ದೊಡ್ಡಣ್ಣ ಅಂತ ಹೇಳಿಕೊಳ್ಳುತ್ತಾರೆ. ಕಳೆದ ಒಂದು ತಿಂಗಳಲ್ಲಿ ಕಾಶ್ಮೀರದಲ್ಲಿ ಸೈನಿಕರು, ನಾಗರೀಕರೂ ಸೇರಿ 40 ಮಂದಿ ಹತ್ಯೆಯಾಗಿದೆ. ಆದರೆ, ಅವರು ಅದರ ಬಗ್ಗೆ ಮಾತನಾಡುವುದಿಲ್ಲ. ಕ್ಯಾಪ್ಟನ್ ಅಮರಿಂದರ್ ಸಿಂಗ್ ದೇಶವನ್ನು ರಕ್ಷಿಸಲು ಬಯಸಿದಾಗ ಮತ್ತು ದೇಶದ ಬಗ್ಗೆ ಮಾತನಾಡಿದಾಗ ಸಿಧು ಸಹಕಾರ ನೀಡಲಿಲ್ಲ. ಇದಕ್ಕಿಂತಲೂ ನಾಚಿಕೆಯ ಸಂಗತಿ ಇದೆಯೇ? ನಿಮ್ಮ ಮಕ್ಕಳನ್ನು ದೇಶದ ಗಡಿ ಕಾಯಲು ಕಳುಹಿಸಿ, ಆವಾಗ ಪರಿಸ್ಥಿತಿ ಅರ್ಥವಾಗುತ್ತದೆ-ಗೌತಮ್ ಗಂಭೀರ್, ಬಿಜೆಪಿ ಸಂಸದ
ಅದು, ಕ್ರಿಕೆಟ್ ವಿಚಾರ ಆಗಿರಬಹುದು. ಇಲ್ಲವೇ ರಾಜಕೀಯ ವಿಚಾರ ಆಗಿರಬಹುದು. ಪಾಕಿಸ್ತಾನ ವಿಚಾರದಲ್ಲಿ ಗಂಭೀರ್ ಖಡಕ್ ಪ್ರತಿಕ್ರಿಯೆ ನೀಡುತ್ತಿದ್ದರು. ಪಾಕಿಸ್ತಾನ ಭಯೋತ್ಪಾದಕರನ್ನು ಸಾಕುತ್ತಿದೆ, ಸಲಹುತ್ತಿದೆ ಅನ್ನೋದನ್ನು ನೇರವಾಗಿಯೇ ಹೇಳುತ್ತಿದ್ದರು. ಇದೇ ಕಾರಣಕ್ಕೆ ಭಯೋತ್ಪಾದಕರು ಗಂಭೀರ್ ಟಾರ್ಗೆಟ್ ಮಾಡಿಕೊಂಡಿರೋ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.
2011ರ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್ಗೆ ಕೊಲೆ ಬೆದರಿಕೆ ಬಂದಿರೋದು ಆಘಾತಕಾರಿ ವಿಷಯ. ಈ ಬಗ್ಗೆ ತನಿಖೆಯಾಗಬೇಕು, ಭಯೋತ್ಪಾದಕರ ಹುಟ್ಟಡಗಿಸುವ ಕೆಲಸ ಆಗಬೇಕು ಅನ್ನೋದೆ ನಮ್ಮ ಆಶಯ.