#JDSvsCongress ಮೊದ್ಲು ರಾಜಕೀಯ ನಾಯಕರ ಕಿತ್ತಾಟ.. ಈಗ ಯಾರ ಎಂಟ್ರಿ ಗೊತ್ತಾ?


ರಾಜಕೀಯ ಶಕ್ತಿ ಕೇಂದ್ರವಾಗಿರುವ ರಾಮನಗರ ಜಿಲ್ಲೆ ಈಗ ಘಟಾನುಘಟಿ ನಾಯಕರ ಕಿತ್ತಾಟದ ಕೇಂದ್ರವಾಗಿದೆ. ಜೊತೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಪ್ರತಿಷ್ಠೆಯ ಕಣವಾಗಿ ಮಾರ್ಪಾಡುಗೊಂಡಿದೆ. ಇದು ಕೇವಲ ಪಕ್ಷಗಳ ಪ್ರಮುಖ ನಾಯಕರ ಮಧ್ಯದ ಪೈಪೋಟಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಕಾರ್ಯಕರ್ತರು, ಮುಖಂಡರು ಅಖಾಡಕ್ಕಿಳಿದು ಸಮರ ಸಾರುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಮನಗರ ಜಿಲ್ಲೆ ರಾಜಕೀಯ ರಣಾಂಗಣವಾಗಿ ಮಾರ್ಪಾಡಾಗ್ತಿದೆ. ಮೂರು ಪಕ್ಷಗಳ ನಾಯಕರ ಪ್ರತಿಷ್ಠೆಯಲ್ಲಿ ಪೊಲಿಟಿಕಲ್ ಮೇಲಾಟಗಳಿಗೆ ಸಾಕ್ಷಿಯಾಗುತ್ತಿದೆ. ಇಷ್ಟು ದಿನ ಕೇವಲ ನಾಯಕರ ಮಧ್ಯದಲ್ಲಿ ಇದ್ದ ಈ ಮಾತಿನ ಮಲ್ಲಯುದ್ಧ ಇದೀಗ ಕಾರ್ಯಕರ್ತರ ಮಧ್ಯೆಯೂ ಕಿಚ್ಚನ್ನ ಹಚ್ಚಿದೆ. ತಮ್ಮ ನಾಯಕರ ಪರ ಬ್ಯಾಟ್ ಬೀಸುವುದು ಮಾತ್ರವಲ್ಲದೇ, ವಿರೋಧ ಪಕ್ಷದ ನಾಯಕರಂತೆ ಜಾಲತಾಣಗಳಲ್ಲಿ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಮೂರು ಪಕ್ಷಗಳ ಮುಖಂಡರು, ವಾಟ್ಸ್‌ಅಫ್ ಗ್ರೂಪ್‌ನಲ್ಲಿ ಪರಸ್ಪರ ಕಿತ್ತಾಟ ನಡೆಸುತ್ತಿದ್ದು, ನಮ್ಮ ನಾಯಕರೇ ಗ್ರೇಟ್ ಎನ್ನುತ್ತಿದ್ದಾರೆ.

ಕಾರ್ಯಕರ್ತರ ವಾರ್.. ಯಾರ ಸಾಥ್?

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ನಡುವೆ ಬಹಿರಂಗ ವಾಕ್ಸಮರ ನಡೆಯುತ್ತಿದೆ. ರಾಮನಗರದಲ್ಲಿ ಹೈಟೆಕ್ ಚಿತಗಾರ ನಿರ್ಮಾಣಗೊಳ್ಳುತ್ತಿದ್ದು, ಈ ಚಿತಾಗಾರಕ್ಕೆ ಸಂಸದ ಡಿ.ಕೆ. ಸುರೇಶ್ ಭೇಟಿ ನೀಡಿದ್ರು. ಹೀಗಾಗಿ ಕನಕಪುರದ ನಾಯಕರು ಚಿತಗಾರ ಬಿಟ್ಟು ಇನ್ನೆನ್ನು ಮಾಡಿಲ್ಲ. ಜನರನ್ನು ಚಿತಾಗಾರಗಳಿಗೆ ಕಳುಹಿಸ್ತಿದ್ದಾರೆ ಅಂತಾ ಡಿ.ಕೆ ಸುರೇಶ್ ವಿರುದ್ಧ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು. ಇದೀಗ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ದಳ-ಕೈ ಕಾರ್ಯಕರ್ತರ ಮಧ್ಯ ಕಿತ್ತಾಟ ಆರಂಭವಾಗಿದೆ. ಮೂಳೆ ಇಲ್ಲದ ನಾಲಿಗೆ ಸರಿಯಿಲ್ಲ ಅಂತಾ ಕೈ ಕಾರ್ಯಕರ್ತರು ಪೋಸ್ಟ್‌ ಹಾಕಿದ್ರೆ, ಇದಕ್ಕೆ ನಿಮ್ಮ ಸಾಹೇಬ್ರುಗೆ ಚಿತಗಾರ ಬಿಟ್ಟು ಬೇರೆ ಕಾಣಲ್ಲ ಎಂದ ದಳ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್-ದಳ ಕಿತ್ತಾಟದ ಮಧ್ಯೆ ಬಿಜೆಪಿ ಕಾರ್ಯಕರ್ತರು ಎಂಟ್ರಿ ಕೊಟ್ಟಿದ್ದು, ಜೋಡೆತ್ತು ಬ್ರದರ್ಸ್ ಕಡೆಯವ್ರು ಕಿತ್ತಾಡುತ್ತಿದ್ದಾರೆ ಅಂತಾ ಉರಿಯೋ ಬೆಂಕಿಗೆ ಪೆಟ್ರೋಲ್ ಸುರಿಯೋ ಕೆಲಸ ಮಾಡಿದ್ದಾರೆ.

ಒಂದೆಡೆ ಡಿ.ಕೆ. ಸಹೋದರರು, ಮತ್ತೊಂದೆಡೆ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬ, ಇನ್ನೊಂದೆಡೆ ಬಿಜೆಪಿಯ ಸಿ.ಪಿ.ಯೋಗೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಇವರ ಮಧ್ಯೆ ಪರಸ್ಪರ ವಾಕ್ ಸಮರ ನಡೆಯೋದು ಹೊಸದೇನು ಅಲ್ಲ. ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಆಗಾಗ ಮಾತಿನ ಸಮರ ನಡೆಯುತ್ತಿವೆ. ಆದ್ರೀಗ, ಚಿತಾಗಾರ ವಿಚಾರಕ್ಕೆ ಕಾಂಗ್ರೆಸ್, ಬಿಜೆಪಿ, ದಳ ಕಾರ್ಯಕರ್ತರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಾರ್ ಶುರುವಾಗಿದೆ. ಇದು ಚುನಾವಣೆ ಹತ್ತಿರವಿರೋ ಟೈಮಲ್ಲಿ ಕಾರ್ಯಕರ್ತರ ಮಧ್ಯೆ ಬೆಂಕಿ ಹೊತ್ತಿದೆ. ಆದ್ರೆ ಈ ಕಿತ್ತಾಟ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾದ್ರೆ ಓಕೆ. ಆದ್ರೆ, ಬೀದಿ ಜಗಳಕ್ಕೆ ಕಾರಣವಾಗ್ಬಾರ್ದು ಜೋಕೆ.

ವಿಶೇಷ ವರದಿ: ಮೋಹನಕುಮಾರ, ರಾಮನಗರ

News First Live Kannada


Leave a Reply

Your email address will not be published.