Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್ | Jeevavemba Jaaladolage column Kannada Environmental Science Writer Suma Sudhakiran discussed Ants Aphids and Terrace Gardening


Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್

ಜೀವವೆಂಬ ಜಾಲದೊಳಗೆ | Jeevavemba Jaaladaolage : ಮರವೊಂದರಿಂದ ಒಣ ಎಲೆಗಳು ಕೆಳಗೆ ಬೀಳುವುದು, ಬಿದ್ದ ತರಗೆಲೆಗಳು ಹಲ ಜೀವಿಗಳಿಗೆ ಆಹಾರವಾಗಿ, ಕೊಳೆತು ಅದೇ ಮರಕ್ಕೆ ಗೊಬ್ಬರವಾಗುವುದು, ಮನೆಯಲ್ಲಿದ್ದ ಜಿರಳೆ ಸಾಯುವುದು, ಅದನ್ನೇ ಕಾಯುತ್ತಿರುವಂತೆ ಮುತ್ತಿಕೊಳ್ಳುವ ಇರುವೆಗಳು ತಮ್ಮ ಗೂಡಿಗೆ ಹೊತ್ತೊಯ್ದು ಮರಿಗಳಿಗೆ ತಿನ್ನಿಸುವುದು, ಚೆಂದದಿಂದ ಹೂವುಗಳನ್ನರಳಿಸಿ ಕೀಟಗಳನ್ನಾಕರ್ಷಿಸಿ ಫಲಿತಗೊಳ್ಳುವ ಸಸ್ಯವೊಂದು ಸ್ವಲ್ಪ ಪ್ರತಿರೋಧ ಕಡಿಮೆಯಾದರೂ ಆಕ್ರಮಣಕಾರಿ ಕೀಟಗಳಿಗೆ ಬಲಿಯಾಗುವುದು… ಇಷ್ಟೇ ಏಕೆ ಬೇರೊಂದು ಜೀವಿಯ ನರಮಂಡಲವನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು ತನಗೆ ಬೇಕಾದಂತೆ ಕೆಲಸ ಮಾಡಿಸಿಕೊಳ್ಳುವ ಅನೇಕ ಜೀವಿಗಳೂ ಇವೆ. ಹೀಗೆ ಗಮನಿಸಿದಷ್ಟೂ ಕುತೂಹಲಕಾರಿಯಾದ ಜಗತ್ತು ಇದು. ಬದುಕುವುದಕ್ಕಾಗಿ ನಾನಾ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಜೀವಿಗಳಿಗೆ ಅನಿವಾರ್ಯ; ಬೇರೆ ಜೀವಿಗಳೊಡನೆ ಸಹಬಾಳ್ವೆಯೋ, ಆಕ್ರಮಣವೋ, ಪ್ರತಿರೋಧವೋ ಹೀಗೆ ಏನಾದರೊಂದು ಘಟನೆಗಳು ಕ್ಷಣಕ್ಷಣಕ್ಕೂ ಈ ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ. ಇನ್ನು ಕಾಡಿನಲ್ಲದೆಷ್ಟು ವೈವಿಧ್ಯಮಯ ಘಟನಾವಳಿಗಳು ನಡೆಯುತ್ತಿರುತ್ತವೆಯೋ ಆ ಪ್ರಕೃತಿಮಾತೆಯೇ ಹೇಳಬೇಕು. ಹೀಗೆ ಜೀವಜಗತ್ತನ್ನು ಆಸಕ್ತಿಯಿಂದ ಗಮನಿಸಿದಾಗ ಕಂಡ, ಕೇಳಿದ, ಓದಿದ ಸಂಗತಿಗಳ ಬಗ್ಗೆ ಸರಳವಾದ ವೈಜ್ಞಾನಿಕ ಮಾಹಿತಿಗಳೊಂದಿಗೆ ಹಂಚಿಕೊಳ್ಳುವುದು ಈ ಅಂಕಣದ ಉದ್ದೇಶ.
ಸುಮಾ ಸುಧಾಕಿರಣ, ಪರಿಸರ-ವಿಜ್ಞಾನ ಲೇಖಕಿ

*

ಲೇಖಕಿ ಸುಮಾ ಸುಧಾಕಿರಣ್ (Suma Sudhakiran) ಮೂಲತಃ ಸಾಗರ ತಾಲ್ಲೂಕಿನ ಕಾನುಗೋಡು ಎಂಬ ಹಳ್ಳಿಯವರು. ಈಗ ಬೆಂಗಳೂರಿನಲ್ಲಿ ವಾಸ. ಪ್ರಕೃತಿ ಅಧ್ಯಯನ ಆಸಕ್ತಿಯ ವಿಷಯ. “ಮಲೆನಾಡಿನ ಮಳೆಗಾಲದ ಅತಿಥಿಗಳು” ಪ್ರಕಟಿತ ಪುಸ್ತಕ. ಕಥೆ, ಪ್ರವಾಸ ಲೇಖನಗಳು ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಅಂಕಣ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟ. ಇಂದಿನಿಂದ ಟಿವಿ9 ಕನ್ನಡ ಡಿಜಿಟಲ್​ ನಲ್ಲಿ ಶುರುವಾಗುವ ಇವರ ಅಂಕಣ ಪ್ರತೀ ಹದಿನೈದು ದಿನಕ್ಕೊಮ್ಮೆ (ಶುಕ್ರವಾರ) ಪ್ರಕಟವಾಗಲಿದೆ.

ಪ್ರತಿಕ್ರಿಯೆಗಳಿಗಾಗಿ : [email protected]

*

(ಜೀವಜಾಲ – 1)

ಈ ಕೊರೊನಾ ಕಾಲದಲ್ಲಿ ಹೊರಗೆಲ್ಲೂ ಹೋಗಲು ಸಾಧ್ಯವಾಗದೆ ಎಲ್ಲರೂ ಮನೆಯಲ್ಲೇ ಇರುವಂತಾದಾಗ ಒಂದಿಷ್ಟು ಹೊಸ ಹೊಸ ಹವ್ಯಾಸಗಳು ಪ್ರಾರಂಭವಾದವು. ಅದರಲ್ಲಿ, ತಾರಸಿಯಲ್ಲಿ ತರಕಾರಿ ಬೆಳೆಸುವುದು ಹೆಚ್ಚು ಆಪ್ತವಾಯಿತು. ಮೊದಲಿನಿಂದಲೂ ಬಾಲ್ಕನಿಯಲ್ಲಿ ಕೆಲವು ಉಪಯುಕ್ತ ಸಸ್ಯಗಳನ್ನು ಬೆಳೆಸುತ್ತಿದ್ದರೂ ಈ ಸಮಯದಲ್ಲಿ ಇನ್ನಷ್ಟು ತರಕಾರಿ ಗಿಡಗಳನ್ನು ಬೆಳೆಯಲು ಸಮಯಾವಕಾಶವಾಯಿತು. ಇದರಿಂದ ಅಡುಗೆಗೆ ಒಳ್ಳೆಯ ತಾಜಾ ತರಕಾರಿ ಸಿಕ್ಕುವುದು ಒಂದು ಲಾಭವಾದರೆ, ಆ ಗಿಡಗಳಿಗೆ ದಾಳಿಯಿಡುವ ತರಹೇವಾರೀ ಕೀಟಗಳು, ಅವುಗಳನ್ನು ತಿನ್ನಲು ಬರುವ ಭಕ್ಷಕಗಳು, ಹಕ್ಕಿಗಳು ಹೀಗೆ ಪ್ರಕೃತಿಯ ನಾಟಕರಂಗವನ್ನು ಹತ್ತಿರದಿಂದ ನೋಡುವ ಸದವಕಾಶ ಸಿಕ್ಕಿತು.

ಹೀಗೆ ಒಂದು ದಿನ ತರಕಾರಿ ಅಂಗಡಿಯಿಂದ ತಂದ ಚಪ್ಪರದ ಅವರೆಕಾಯಿಯಲ್ಲಿ ಚೆನ್ನಾಗಿ ಬಲಿತ ಬೀಜಗಳನ್ನು ಒಂದೆರಡು ಕುಂಡದಲ್ಲಿ ಊರಿದೆ. ಕೆಲ ದಿನಗಳಲ್ಲಿ ಅವು ಚಿಗುರಿ ಎಲೆಗಳನ್ನು ಅರಳಿಸಿಕೊಂಡು ಬೆಳೆಯತೊಡಗಿದವು. ಬಳ್ಳಿಯಾದ್ದರಿಂದ ಅಲ್ಲಿದ್ದ ಕಂಬಿಗೆ ಕೋಲು, ಹಗ್ಗ ಎಲ್ಲ ಕಟ್ಟಿ ಚಪ್ಪರದಂತೆ ಮಾಡಿ ಹಬ್ಬಿಸಿದ್ದಾಯಿತು. ಸೊಂಪಾಗಿ ಬೆಳೆದ ಗಿಡವನ್ನು ಪ್ರತೀ ದಿನ ನೋಡುವುದೇ ಸಂತೋಷ. ಆದರೆ ನಾಲ್ಕಾರು ತಿಂಗಳು ಕಳೆದರೂ ಹೂವನ್ನೇ ಬಿಡಲಿಲ್ಲ. ಕೊನೆಗೊಂದು ದಿನ ಸುಂದರವಾದ ಗುಲಾಬಿ ಬಣ್ಣದ ಹೂವುಗಳನ್ನು ಅರಳಿಸಿತು, ಇನ್ನೇನು ಕಾಯಿ ಬಿಟ್ಟು ನಾನು ಅದರ ಪಲ್ಯ ಸಾಂಬಾರು ಎಲ್ಲ ಮಾಡುವ ಕನಸು ಕಾಣುತ್ತಿದ್ದೆ. ಮಾರನೆಯ ದಿನ ನೋಡಿದರೆ ಹೂವಿನ ಅವಶೇಷವೂ ಇಲ್ಲದಂತೆ ಮಾಯ! ನಾಲ್ಕಾರು ದಿನ ಇದೇ ಕಥೆ ಮುಂದುವರೆಯಿತು. ಸ್ವಲ್ಪ ಅಡಗಿ ಕಳ್ಳರು ಯಾರೆಂದು ಗಮನಿಸಿದಾಗ ಸಿಕ್ಕಿಬಿದ್ದದ್ದು ಅಳಿಲು! ಹೂವನ್ನ ತನ್ನ ಪುಟ್ಟ ಕೈಗಳಿಂದ ಕೊಯ್ದು ತಿನ್ನುತ್ತಿತ್ತು. ಕೊನೆಗೆ ಗಿಡದ ತುಂಬ ಹೂವು ಬಿಡಲು ಪ್ರಾರಂಭವಾದಾಗ, ಅಳಿಲಿನ ಹೊಟ್ಟೆಯೂ ತುಂಬಿ ಇನ್ನೂ ಹೆಚ್ಚು ಹೂವುಗಳು ಉಳಿದವು. ಅವೇ ಕಾಯಾಕಿ ಬೆಳೆದ ನಂತರ ಕೊಯ್ದು ಪಲ್ಯ ಮಾಡಿಯೂ ಆಯಿತು.

ವಾರಕ್ಕೊಮ್ಮೆಯಾದರೂ ಒಂದು ಪದಾರ್ಥಕ್ಕೆ ಆಗುವಷ್ಟು ಕಾಯಿಬಿಡುವ ಬಳ್ಳಿಯ ಮೇಲೆ ಮನೆಯವರೆಲ್ಲರಿಗೂ ಅಭಿಮಾನ. ಹೀಗಿರುವಾಗಲೇ ಒಂದು ದಿನ ಬಳ್ಳಿಯ ಒಂದು ಚಿಗುರಿನ ತುದಿಯಲ್ಲಿ ಸ್ವಲ್ಪ ಕಪ್ಪಗಾಗಿರುವುದು ಕಾಣಿಸಿತು. ಸರಿಯಾಗಿ ನೋಡಿದಾಗ ಇನ್ನೂ ಹಲವಾರು ಕಡೆ ಬಳ್ಳಿ ಮೇಲೆ ಮಸಿ ಚೆಲ್ಲಿದಂತೆ ಕಪ್ಪು ಬಣ್ಣ ಕಾಣಿಸಿತು. ಹತ್ತಿರದಿಂದ ನೋಡಿದರೆ ಅದು ಜೀವಂತವಾಗಿರುವ ಕೀಟ! ಗಿಡಗಳಿಗೆ ಹೀಗೆ ಕೀಟಗಳು ಬರುವುದು ಹೊಸದಲ್ಲವಾದರೂ ನನ್ನ ಯಾವ ಗಿಡಗಳಿಗೂ ಇದುವರೆಗೂ ಈ ಬಣ್ಣದ ಕೀಟ ಮುತ್ತಿಗೆ ಹಾಕಿರಲಿಲ್ಲ. ಇನ್ನೂ ಸ್ವಲ್ಪ ಸರಿಯಾಗಿ ಗಮನಿಸಿದಾಗ, ಅಲ್ಲೆಲ್ಲ ಇರುವೆಗಳು ಓಡಾಡುತ್ತಿರುವುದೂ, ಲೇಡಿಬಗ್ ಎಂಬ ಕೀಟಗಳೂ ಓಡಾಡುತ್ತಿರುವುದು ಕಾಣಿಸಿ, ಕುತೂಹಲ ಕೆರಳಿತು.

Jeevavemba Jaaladolage column Kannada Environmental Science Writer Suma Sudhakiran discussed Ants Aphids and Terrace Gardening

ಅವರೆಹೂ

ಒಂದೆರಡು ದಿನ ಏನೂ ಮಾಡದೇ ಹಾಗೆ ಅವುಗಳನ್ನು ಗಮನಿಸುವ ಕೆಲಸವಾಯ್ತು. ಅವು ಪುಟ್ಟ ಕೀಟಗಳ ಜಾತಿಗೆ ಸೇರಿದ ಎಫಿಡ್ಸ್​ (Aphids) ಇವುಗಳಲ್ಲಿ ಹಲವಾರು ಪ್ರಜಾತಿಗಳಿವೆ. ಜಾತಿಗನುಗುಣವಾಗಿ ಬಣ್ಣದಲ್ಲೂ ವ್ಯತ್ಯಾಸವಿದೆ. ಈ ಚಪ್ಪರದವರೆ ಗಿಡವನ್ನು ಆಕ್ರಮಿಸಿದ್ದು ಕಪ್ಪುಬಣ್ಣದ ಎಫಿಡ್ಸ್. ಗಿಡಬಳ್ಳಿಗಳ ಚಿಗುರಿನ ಭಾಗದಲ್ಲಿ ಹೆಚ್ಚಾಗಿ ದಾಳಿಯಿಡುವ ಅವುಗಳು ಅಲ್ಲಿನ ಸಸ್ಯರಸವನ್ನು ತಮ್ಮ ಮೂತಿಯಲ್ಲಿರುವ ಚೂಪಾದ ಸೂಜಿಯಂತಹ ಕೊಳವೆಯಿಂದ ಹೀರುತ್ತವೆ. ಅದರಿಂದಾಗಿ ಆ ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ.

ಕೇವಲ ಇಷ್ಟೇ ಆದರೆ ಇದರಲ್ಲೇನು ಮಹಾ ವಿಶೇಷವಿರಲಿಲ್ಲ. ಆದರೆ ಎಫಿಡ್​ಗಳಿಗೆ ಹೊಂದಿಕೊಂಡಂತೆ ತುಂಬ ಕುತೂಹಲಕರಿಯಾದ ಸಂಗತಿಯೊಂದಿದೆ. ಇರುವೆಗಳು ಮತ್ತು ಎಫಿಡ್ಸ್ ನಡುವಿನ ಸಹಜೀವನ. ಸಸ್ಯರಸವನ್ನು ಹೀರುವ ಎಫಿಡ್ಸ್​, ಸಿಹಿಯಾದ ಜೇನಿನಂತಹ ದ್ರವವನ್ನು ಸ್ರವಿಸುತ್ತವೆ. ಇರುವೆಗಳಿಗೆ ಈ ಸಕ್ಕರೆಪಾಕ ಆಹಾರ. ಬದಲಾಗಿ ಇರುವೆಗಳು ಎಫಿಡ್​ಗಳನ್ನು ಭಕ್ಷಕಗಳಿಂದ ರಕ್ಷಿಸುತ್ತವೆ. ಲೇಡಿಬಗ್​ನಂತಹ ಕೆಲ ಕೀಟಗಳು ಎಫಿಡ್​ಗಳನ್ನು ಭಕ್ಷಿಸುತ್ತವೆ. ಇರುವೆಗಳು ಅವುಗಳನ್ನು ಓಡಿಸಿ ಎಫಿಡ್​ಗಳನ್ನು ರಕ್ಷಿಸುತ್ತವೆ.

ಕಪ್ಪು ಎಫಿಡ್​ಗಳ ಜೀವನಚಕ್ರದಲ್ಲಿ ಎರಡು ವಿಧಗಳಿವೆ. ಲೈಂಗಿಕ ಸಂತಾನೋತ್ಪತ್ತಿ ಮತ್ತು ಅಲೈಂಗಿಕ ಸಂತಾನೋತ್ಪತ್ತಿ. ಗಂಡುಹೆಣ್ಣುಗಳೆರಡರ ಮಿಲನದಿಂದ ಮೊಟ್ಟೆ ಇಟ್ಟು ಮರಿಯಾಗುವುದು ಒಂದು ವಿಧ. ಇನ್ನೊಂದು ವಿಧದಲ್ಲಿ ಗಂಡಿನ ಅವಶ್ಯಕತೆಯೇ ಇಲ್ಲದೆ ಹೆಣ್ಣುಗಳು “ಪಾರ್ಥೆನೋಜೆನೆಸಿಸ್” ಮೂಲಕ ಮೊಟ್ಟೆಗಳನ್ನು ತಮ್ಮ ದೇಹದೊಳಗೇ ಬೆಳೆಸಿ, ಮರಿಗಳಿಗೆ ಜನ್ಮ ನೀಡುತ್ತವೆ. ಹೀಗೆ ನೇರವಾಗಿ ಮರಿಗಳಿಗೇ ಜನ್ಮನೀಡುವ ಏಕೈಕ ಕೀಟಗಳಿವು. ಇಲ್ಲಿ ಅವು ತಮ್ಮದೇ ತದ್ರೂಪಿಗಳಿಗೆ ಜನ್ಮ ನೀಡುತ್ತವೆಯಾದ್ದರಿಂದ ಎಲ್ಲ ಮರಿಗಳೂ ಹೆಣ್ಣೇ ಆಗಿರುತ್ತವೆ. ಒಂದು ಹೆಣ್ಣು ದಿನಕ್ಕೆ 30-40 ಮರಿಗಳಿಗೆ ಜನ್ಮ ನೀಡಬಲ್ಲದು! ಆದ್ದರಿಂದಲೇ ಗಿಡದಲ್ಲಿ ಅವುಗಳ ಸಂಖ್ಯೆ ಅತೀ ಎಂಬಷ್ಟು ಶೀಘ್ರವಾಗಿ ಹೆಚ್ಚುತ್ತದೆ.

ಒಂದು ರೆಂಬೆಯಲ್ಲಿ ಇವುಗಳ ಸಾಂದ್ರತೆ ಹೆಚ್ಚಾದರೆ ಅದರಲ್ಲಿ ಕೆಲವಕ್ಕೆ ರೆಕ್ಕೆ ಮೂಡುತ್ತದೆ. ಹೀಗೆ ರೆಕ್ಕೆ ಹೊಂದಿದ ಎಫಿಡ್ಸ್ ಬೇರೊಂದು ಕೊಂಬೆಗೋ, ಗಿಡಕ್ಕೋ ಹಾರಿ ಹೋಗಿ ತನ್ನ ಸಂತತಿ ಬೆಳೆಸುತ್ತವೆ. ಹೀಗೆ ಅವು ಬೇರೆಡೆಗೆ ಹೊರಟುಹೋದರೆ ತನ್ನ ಆಹಾರಕ್ಕೆ ಕೊರತೆಯಾಗಬಹುದೆಂಬ ದೂರಾಲೋಚನೆಯಿಂದ ಇರುವೆಗಳು ಆ ಎಫಿಡ್ಸ್​ ರೆಕ್ಕೆಗಳನ್ನು ಕತ್ತರಿಸುತ್ತವೆ ಅಥವಾ ರೆಕ್ಕೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ ಎನ್ನುವುದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ಇರುವೆಗಳು ಕೂಡ ಎಫಿಡ್ಸ್ ಮೊಟ್ಟೆಗಳನ್ನು ಹೊತ್ತೊಯ್ದು ತಮಗೆ ಬೇಕಾದೆಡೆಯಲ್ಲಿ ಬೆಳೆಸಿಕೊಳ್ಳುತ್ತವೆಯಂತೆ! ಬಹುಶಃ ನಾವು ಮಾನವರು ಆಹಾರಕ್ಕಾಗಿ ವ್ಯವಸಾಯ, ಸಿಹಿಗಾಗಿ ಜೇನು ಸಾಕಾಣಿಕೆ, ಹಾಲಿಗಾಗಿ ಹೈನುಗಾರಿಕೆ ಮೊದಲಾದವುಗಳನ್ನು ಪ್ರಾರಂಭಿಸುವುದಕ್ಕೂ ಸಹಸ್ರಾರು ವರ್ಷಗಳ ಮೊದಲೇ ಇರುವೆಗಳು ಇದೆಲ್ಲವನ್ನೂ ಮಾಡುತ್ತಿದ್ದವು. ಕೆಲವು ಜಾತಿಯ ಇರುವೆಗಳು ತಮ್ಮ ಗೂಡುಗಳಲ್ಲಿ ಆಹಾರಕ್ಕಾಗಿ ಫಂಗಸ್ ಬೆಳೆಸುತ್ತವೆ. ಇನ್ನೂ ಕೆಲವು ಜಾತಿಯ ಇರುವೆಗಳು ಎಫಿಡ್ಸ್​ ಸಾಕಿಕೊಂಡು ಜೇನನ್ನು ಪಡೆಯುತ್ತವೆ!

Jeevavemba Jaaladolage column Kannada Environmental Science Writer Suma Sudhakiran discussed Ants Aphids and Terrace Gardening

ಎಫಿಡ್ಸ್ ದಾಳಿಗೆ ತುತ್ತಾದ ಅವರೆ

ಈ ಎಫಿಡ್ಸ್​ ಇದ್ದಲ್ಲಿ ಕೆಂಪು ಕಪ್ಪು ಬಣ್ಣದ್ದೋ ಅಥವಾ ಕಪ್ಪು ಅಥವಾ ಹಸಿರು ಕಪ್ಪು ಬಣ್ಣದ್ದೋ ಲೇಡಿಬಗ್ ಇರುವುದು ಸಾಮಾನ್ಯ. ಲೇಡಿಬಗ್​ಗಳಿಗೆ ಇವು ಅತ್ಯಂತ ಪ್ರೀತಿಯ ಆಹಾರ. ಎಫಿಡ್​ಗಳ ಮೊಟ್ಟೆ, ಮರಿಗಳನ್ನೆಲ್ಲ ತಿಂದು ಹಾಕುತ್ತವೆ. ಹಾಗಾಗಿ ಈ ಲೇಡಿಬಗ್​ಗಳನ್ನು ಜೀವಂತ ಕೀಟನಾಶಕಗಳನ್ನಾಗಿ ಉಪಯೋಗಿಸುವವರಿದ್ದಾರೆ.

ಕೆಲವು ಜಾತಿಯ ಕೊಣಜಗಳು ಈ ಎಫಿಡ್ಸ್​ ದೇಹದೊಳಗೆ ತಮ್ಮ ಓವಿಪೋಸಿಟರ್ ಎಂಬ ಚೂಪಾದ ಸೂಜಿಯಂತಹ ಅಂಗದ ಮೂಲಕ ಮೊಟ್ಟೆಗಳನ್ನು ಚುಚ್ಚಿಬಿಡುತ್ತವೆ. ಎಫಿಡ್ಸ್ ದೇಹದೊಳಗೆ ಆ ಕೊಣಜದ ಮೊಟ್ಟೆಗಳು ಒಡೆದು, ಮರಿಯಾಗಿ ಅದರ ದೇಹದ ಕೋಶವನ್ನೇ ತಿಂದು ಬೆಳೆದು, ಎಫಿಡ್​ಗಳ ಬೆನ್ನು ಸೀಳಿಕೊಂಡು ಹೊರಬರುತ್ತವೆ.

ಇದಲ್ಲದೆ ಇನ್ನೂ ಅನೇಕ ಕೀಟಗಳಿಗೆ ಎಫಿಡ್ಸ್ ಆಹಾರವಾಗಿದ್ದು ಅವು ಇವುಗಳನ್ನು ತಿನ್ನಲೆಂದು ದಾಳಿಯಿಡುವುದು ಸಾಮಾನ್ಯ. ಆದರೆ ತಮ್ಮ ಆಹಾರದ ಮೂಲವನ್ನು ಇರುವೆಗಳು ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತವೆಯೆ? ಉಗ್ರವಾಗಿ ಹೋರಾಡಿ ರಕ್ಷಿಸಿಕೊಳ್ಳುತ್ತವೆ!

ಇವುಗಳ  ಆಟ, ಹೋರಾಟಗಳಿಂದ ಗಿಡ ಸೊರಗಿ, ಹೂವುಗಳನ್ನು ಬಿಡುವ ಶಕ್ತಿಯೇ ಕುಂದಿಹೋಗುತ್ತದೆ, ಹೂವಿಲ್ಲದ ಮೇಲೆ ಕಾಯಿ ಎಲ್ಲಿ? ಹೀಗೆ ಒಂದಿಷ್ಟು ದಿನ ಇವುಗಳನ್ನೆಲ್ಲ ಗಮನಿಸುವ ಭರದಲ್ಲಿ ಒಂದು ಬಳ್ಳಿ ಸೊರಗಿ ಸತ್ತೇ ಹೋಯಿತು. ಕೊನೆಗೆ ಇನ್ನೊಂದು ಬಳ್ಳಿಗೆ ಬೇವಿನ ಎಣ್ಣೆ, ನೀರಿನ ಮಿಶ್ರಣವನ್ನು ನಾಲ್ಕು ದಿನ ಸಿಂಪಡಿಸಿದ ಮೇಲೆ ಗಿಡ ಮೊದಲಿನಂತಾಯ್ತು. ಈಗ ವಾರಕ್ಕೊಮ್ಮೆಯಾದರೂ ಈ ಮಿಶ್ರಣ ಸಿಂಪಡಿಸದೇ ಇದ್ದರೆ ಆ ಕೀಟಗಳು ತಮ್ಮದೇ ಗಿಡವೆಂಬಂತೆ ಆಕ್ರಮಿಸಿಕೊಳ್ಳುತ್ತವೆ.

ನಾನು ಮತ್ತೆರಡು ಬೀಜಗಳನ್ನು ಊರಿದ್ದೇನೆ, ಅವು ಬೆಳೆದ ಮೇಲೆ ಈ ಬಳ್ಳಿಯನ್ನು ಎಫಿಡ್ಸ್​ಗೆ ದಾನ ಮಾಡುವಾ ಅಂತಿದ್ದೇನೆ.

(ಮುಂದಿನ ಜೀವಜಾಲ – 28.1.2022)

TV9 Kannada


Leave a Reply

Your email address will not be published. Required fields are marked *