Jersy Box Office Collection: ‘ಕೆಜಿಎಫ್ ಚಾಪ್ಟರ್ 2’ 9ನೇ ದಿನ ಗಳಿಸಿದ ಅರ್ಧದಷ್ಟೂ ಕಲೆಕ್ಷನ್ ಮಾಡದ ಜೆರ್ಸಿ; ಇಲ್ಲಿದೆ ಲೆಕ್ಕಾಚಾರ | Jersy Box Office Collection day 1 is half less than KGF Chapter 2 day 9 collection says reports


Jersy Box Office Collection: ‘ಕೆಜಿಎಫ್ ಚಾಪ್ಟರ್ 2’ 9ನೇ ದಿನ ಗಳಿಸಿದ ಅರ್ಧದಷ್ಟೂ ಕಲೆಕ್ಷನ್ ಮಾಡದ ಜೆರ್ಸಿ; ಇಲ್ಲಿದೆ ಲೆಕ್ಕಾಚಾರ

ಶಾಹಿದ್ ಕಪೂರ್, ಯಶ್

‘ಕೆಜಿಎಫ್ ಚಾಪ್ಟರ್ 2’ (KGF Chapter 2) ಪ್ರಸ್ತುತ ಚಿತ್ರಮಂದಿರಗಳಲ್ಲಿ ಎರಡನೇ ವಾರ ಭರ್ಜರಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಷಿಕ ಉತ್ತರ ಭಾರತದ ರಾಜ್ಯಗಳಲ್ಲೂ ಜನರು ಯಶ್, ಸಂಜಯ್ ದತ್, ರವೀನಾ ಟಂಡನ್ ನಟನೆಯ ಚಿತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಪರಿಣಾಮವಾಗಿ ಚಿತ್ರದ ಕಲೆಕ್ಷನ್ ಸುಮಾರು 300 ಕೋಟಿ ರೂ ಆಸುಪಾಸಿನಲ್ಲಿ ಬಂದುನಿಂತಿದೆ. ಈ ವೀಕೆಂಡ್​ನಲ್ಲಿ 300 ಕೋಟಿ ಕ್ಲಬ್ ಸೇರುವ ನಿರೀಕ್ಷೆಗಳಿದೆ. ಈ ನಡುವೆ ಶುಕ್ರವಾರ (ಏ.22) ತೆರೆಕಂಡಿದ್ದ ‘ಜೆರ್ಸಿ’ (Jersy Movie) ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಅವತರಣಿಕೆಗೆ ಪೈಪೋಟಿ ನೀಡಬಹುದು ಎಂದು ಬಾಕ್ಸಾಫೀಸ್ ವಿಶ್ಲೇಶಕರು ಅಂದಾಜಿಸಿದ್ದರು. ಶಾಹಿದ್ ಕಪೂರ್ ನಟನೆಯ ಚಿತ್ರವು ಮೊದಲ ದಿನ ಸುಮಾರು 8 ಕೋಟಿ ರೂಗಳನ್ನಾದರೂ ಗಳಿಸಬಹುದು ಎಂಬ ಲೆಕ್ಕಾಚಾರಗಳನ್ನು ಬಾಕ್ಸಾಫೀಸ್ ಪಂಡಿತರು ನೀಡಿದ್ದರು. ಆದರೆ ಎಲ್ಲರ ಲೆಕ್ಕಾಚಾರ ತಿರುವುಮುರುವಾಗಿದೆ. ಜನರು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಆಸಕ್ತಿ ತೋರಿಸಿದ್ದು, ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸುತ್ತಿದ್ದಾರೆ. ಈ ನಡುವೆ ಜೆರ್ಸಿಯ ಕಲೆಕ್ಷನ್ ತೀವ್ರವಾಗಿ ಕುಸಿದಿದೆ.

ಶಾಹಿದ್ ಕಪೂರ್ ಹಾಗೂ ಮೃಣಾಲ್ ಠಾಕೂರ್ ನಟಿಸಿರುವ ‘ಜೆರ್ಸಿ’ ತೆಲುಗು ಚಿತ್ರದ ರಿಮೇಕ್. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಾಮಾನ್ಯವಾಗಿ ಈಗ ದಕ್ಷಿಣದ ಚಿತ್ರಗಳಿಗೆ ಉತ್ತರದಲ್ಲಿ ಉತ್ತಮ ಮಾರುಕಟ್ಟೆ ಇದೆ. ಹೀಗಾಗಿ ನಾನಿ ನಟನೆಯ ಮೂಲ ಚಿತ್ರವಾದ ‘ಜೆರ್ಸಿ’ಯನ್ನು ಜನರು ಈ ಹಿಂದೆಯೇ ವೀಕ್ಷಿಸಿರಬಹುದು. ಜತೆಗೆ ‘ಕೆಜಿಎಫ್ 2’ ಕ್ರೇಜ್ ಎಲ್ಲೆಡೆ ಜೋರಾಗಿದೆ. ಹಾಗೆಯೇ ಹಿಂದಿಯ ‘ಜೆರ್ಸಿ’ ಜನರಿಗೆ ವಾವ್ ಎನ್ನಿಸಿಲ್ಲ. ಈ ಎಲ್ಲಾ ಕಾರಣದಿಂದ ಮೊದಲ ದಿನದ ಕಲೆಕ್ಷನ್ ಡೌನ್ ಆಗಿದೆ ಎಂದಿದ್ದಾರೆ ಬಾಕ್ಸಾಫೀಸ್ ವಿಶ್ಲೇಷಕರು.

‘ಕೆಜಿಎಫ್ ಚಾಪ್ಟರ್ 2’ 9ನೇ ದಿನದ ಗಳಿಕೆಯ ಅರ್ಧದಷ್ಟನ್ನೂ ಮೊದಲ ದಿನ ಗಳಿಸದ ‘ಜೆರ್ಸಿ’:

‘ಜೆರ್ಸಿ’ ಯಶ್ ನಟನೆಯ ಚಿತ್ರಕ್ಕೆ ಪೈಪೋಟಿ ನೀಡುವುದು ಅಸಾಧ್ಯವೆಂದು ತಿಳಿದಿದ್ದರೂ, ಬಾಕ್ಸಾಫೀಸ್​ನಲ್ಲಿ ಸಾಧಾರಣವಾಗಿಯಾದರೂ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ಚಿತ್ರ ‘ಕೆಜಿಎಫ್ 2’ 9ನೇ ದಿನದ ಕಲೆಕ್ಷನ್​ನ ಅರ್ಧಕ್ಕಿಂತಲೂ ಕಡಿಮೆ ಮೊತ್ತವನ್ನು ಮೊದಲ ದಿನ ಸಂಗ್ರಹಿಸಿದೆ. ಬಾಕ್ಸಾಫೀಸ್ ವಿಶ್ಲೇಶಕ ಸುಮಿತ್ ಕಡೇಲ್ ಲೆಕ್ಕಾಚಾರದ ಪ್ರಕಾರ ‘ಜೆರ್ಸಿ’ ಮೊದಲ ದಿನ ಸುಮಾರು 4 ಕೋಟಿ ರೂ ಮೊತ್ತವನ್ನು ಗಳಿಸಿದೆ.

ಈ ನಡುವೆ ‘ಕೆಜಿಎಫ್ ಚಾಪ್ಟರ್ 2’ ತನ್ನ 9ನೇ ದಿನ (ಶುಕ್ರವಾರ) ತನ್ನ ಹಿಂದಿ ಅವತರಣಿಕೆಯಲ್ಲಿ 11.56 ಕೋಟಿ ರೂಗಳನ್ನು ಬಾಚಿಕೊಂಡಿದೆ. ಈ ಮೂಲಕ ಹಿಂದಿಯಲ್ಲಿ 280.19 ಕೋಟಿ ರೂ ಗಳಿಸಿದಂತಾಗಿದೆ. ಶನಿವಾರ ಹಾಗೂ ಭಾನುವಾರದ ಲೆಕ್ಕಾಚಾರ ಸೇರಿದರೆ 300 ಕೋಟಿ ಕ್ಲಬ್ ಸೇರಲಿದೆ ಎಂದು ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಜನರ ಆಯ್ಕೆಯ ಬಗ್ಗೆಯೂ ಬರೆದಿರುವ ಅವರು, ‘ಜೆರ್ಸಿ’ಗಿಂತ ‘ಕೆಜಿಎಫ್ 2’ ಚಿತ್ರವನ್ನೇ ಪ್ರೇಕ್ಷಕರು ಆಯ್ದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ತರಣ್ ಆದರ್ಶ್ ಟ್ವೀಟ್ ಇಲ್ಲಿದೆ:

ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕೆಜಿಎಫ್ ಚಾಪ್ಟರ್ 2’ ಇದುವರೆಗೆ 776 ಕೋಟಿ ರೂಗಳನ್ನು ಗಳಿಸಿದೆ. ಈ ವೀಕೆಂಡ್​ನಲ್ಲಿ 800 ಕೋಟಿ ಕ್ಲಬ್ ಸೇರುವ ನಿರೀಕ್ಷೆಗಳಿವೆ.

TV9 Kannada


Leave a Reply

Your email address will not be published.