K. S. Nissar Ahmed Birth Anniversary : ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ ನನ್ನೆದುರಲ್ಲೇ ತನಿಖೆ ಮಾಡುವ ಕ್ಷಣ… | Kannada Poet KS Nissar Ahmed Birthday Special Write up by Poet P Chandrika


K. S. Nissar Ahmed Birth Anniversary : ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ ನನ್ನೆದುರಲ್ಲೇ ತನಿಖೆ ಮಾಡುವ ಕ್ಷಣ...

ಡಾ. ಕೆ. ಎಸ್. ನಿಸಾರ್ ಅಹಮ್ಮದ್ | Dr. K. S Nissar Ahmed : ಹಾಗೆ ನೋಡಿದರೆ ನಿಸಾರರದ್ದು- ಕೆಲ ಕವನಗಳು ಜನಪ್ರಿಯವಾದವು ಎನ್ನುವುದನ್ನು ಬಿಟ್ಟರೆ- ಜನಪ್ರಿಯ ಶೈಲಿಯೇನಲ್ಲ. ಆದರೆ ಕಾವ್ಯ ಎಂದರೆ ತಾಂತ್ರಿಕ ಸಂಗತಿ ಎಂದು ಒಪ್ಪದ ಇವರು, ಸಂವಹನ ಸಾಧ್ಯವಾಗಬೇಕಿರುವ ಅರಿವಿನಲ್ಲಿ ಕಾವ್ಯವನ್ನು ಅರಿತರು. ಸಮಕಾಲೀನ ಸಂದರ್ಭಕ್ಕೆ ಚುರುಕಾದ ಅವರ ವ್ಯಂಗ್ಯ ಮತ್ತು ವಿಡಂಬನೆಗಳನ್ನು ಮಾಡಿಯೂ ಯಾವುದೇ ಕ್ಲೀಷೆಗೆ ಒಳಗಾಗದೆ ಇರುವುದು ನಿಜಕ್ಕೂ ಸೋಜಿಗದ ಸಂಗತಿಯೆ. ಹಾಡುಗಳನ್ನು ದೂರವಿಟ್ಟ ನವ್ಯಕಾವ್ಯದ ಆಶಯಗಳನ್ನು ಇಟ್ಟುಕೊಂಡು ನವೋದಯದ ರಮ್ಯವಾದವನ್ನೂ ಅದರ ಜೊತೆಗೆ ಹದವಾಗಿ ಬೆರೆಸಿದರು. ಎರಡು ತುದಿಗಳನ್ನು ಸಂಗಮಿಸಿ, ಆ ಮೂಲಕ ಹೊಸ ರಚನೆಗೆ ತಮ್ಮನ್ನು ತಾವು ಸಿದ್ಧಗೊಳಿಸಿಕೊಂಡರು. ಹೀಗಾಗೇ ಓದುವ ಕವಿತೆಗಳ ಜೊತೆಗೆ ಹಾಡುವ ಕವಿತೆಗಳನ್ನೂ ಬರೆದರು. ಕವಿಯ ಮಾತುಗಳಿಗೆ ರಾಗದ ಒತ್ತೂ ಬಿದ್ದಾಗ ಭಾವದ ಅಲೆಗಳು ಇನ್ನಷ್ಟು ವಿಸ್ತಾರವಾಗುವುದನ್ನು ಮನಗಂಡ ಅವರು, ಇಂಥಾ ಅಪರೂಪದ ಪ್ರಯೋಗಕ್ಕೆ ತೆರೆದುಕೊಂಡರು.

ಪಿ. ಚಂದ್ರಿಕಾ, ಕವಿ, ಲೇಖಕಿ

*

ಮೂಲತಃ ಸಾಹಿತ್ಯದ ವಿದ್ಯಾರ್ಥಿ ಅಲ್ಲದ್ದರಿಂದ ಭಾಷೆಯ ನೇರ ಬಳಕೆ ಇವರಿಗೆ ಸಾಧ್ಯವಾಯಿತು. ಶಬ್ದಾಡಂಬರವಿಲ್ಲದ, ಅರ್ಥಕ್ಲಿಷ್ಟತೆ ಇಲ್ಲದ, ಅಲಂಕರಣದ ಹಂಗಿಲ್ಲದ ಸಾಹಿತ್ಯ ಸೃಷ್ಟಿಯಲ್ಲಿ ಇವರು ತೊಡಗಿಕೊಂಡಿದ್ದರಿಂದ ಕನ್ನಡ ಸಾಹಿತ್ಯ ದಿಗಂತ ಮತ್ತಷ್ಟು ವಿಸ್ತಾರವಾಯಿತು.

ಮುಚ್ಚು ಅಂಗಡಿಯನ್ನು ನಿರಂತರ ಪಲ್ಲಟಕ್ಕೆ ಒಳಗಾಗುತ್ತಿರುವ ಬದುಕಿನ ಲಯಗಳಿಗೆ ಒಗ್ಗಿಕೊಳ್ಳುವುದಷ್ಟೇ ನಮ್ಮ ಪಾಲಿನ ಜವಾಬ್ದಾರಿ. ಅದರಲ್ಲೂ ನಗರ ಜೀವನದ ಬಗೆಗಳು ಊಹಾತ್ಮಕ ಸ್ಥಿತಿಗಳನ್ನು ದಾಟಿರುವುವು. ಬದುಕಿಗೆ ಎರವಾಗುವ ಸಂಗತಿಗಳು ಒಳಗೇ ಮುರಿದ ಪಿನ್ನಿನ ತುದಿಗೂ ಸಿಗದ ಚುಟುಕು ಮುಳ್ಳಿನ ಹಾಗೇ ನೋವನ್ನು ಕೊಡುತ್ತಲೇ ಇರುತ್ತದೆ. ನಂಬಿದ ಸತ್ಯಗಳೇ ಗಾಳಿಗೆ ತೂರಿದ ಮೇಲೆ ಬದುಕು ಎಷ್ಟೊಂದು ದುಸ್ತರ! ಎಲ್ಲರೂ ಬದುಕು ಕಟ್ಟಿಕೊಳ್ಳಲು ಅಂಗಡಿ ಹರವಿದವರೇ. ವಚನಕಾರರು ಕೂಡ ‘ಧರೆಯ ಮೇಲೊಂದು ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹದೇವ ಶೆಟ್ಟಿ’ ಅಂದಿದ್ದಾರೆ. ಕೊಳ್ಳುವವರು ಯಾವುದನ್ನು ಬಯಸುತ್ತಾರೋ ಅದು ಆ ಅಂಗಡಿಯಲ್ಲಿ ಇರಬೇಕು. ಇರುತ್ತದೆ. ಆದರೆ ಕವಿಗೆ ಕಾಡಿದ್ದು ಅಂಗಡಿಯಲ್ಲಿ ಇದುವರೆಗೂ ಏನಿರಬೇಕು ಅಂತ ಬಯಸುತ್ತಿದ್ದೆವೋ ಆ ಎಲ್ಲ ಸರಕುಗಳೂ ಇವೆ. ಆದರೆ ಅದನ್ನು ಕೊಳ್ಳುವವನಿಗೆ ಮಾತ್ರ ಅದು ಬೇಡಾಗಿದೆ. ಮೌಲ್ಯಗಳೂ ಹೀಗೆ ಅಪಮೌಲ್ಯಗೊಳ್ಳುತ್ತಿರುವ ಹೊತ್ತಿನಲ್ಲಿ, ‘ಕಾಲ ಬದಲಾಗಿದೆ ಇದೆಲ್ಲಾ ಯಾರಿಗೆ ಬೇಕು?’ ಎನ್ನುವ ಮಾತು ಸಾಮಾನ್ಯ. ಕಾಲ ಎಲ್ಲವನ್ನೂ ಬದಲಿಸುತ್ತದೆ ನಿಜ. ಆದರೆ ಜೀವನದ ಸೊಬಗು ತುಂಬಾ ಸಾಂದ್ರವೂ. ತೀವ್ರವೂ ಆಗಬೇಕಿರುವ ಜರೂರು ಮಾತ್ರ ಅಲ್ಲಗಳೆಯಲಾಗದು. ಕವಿ ಸೂಕ್ಷ್ಮ ಸಂವೇದಿ, ಜಗತ್ತಿಗೆ ಕಾಡದ್ದು ಅವನನ್ನು ಕಾಡುತ್ತದೆ. ಅವನ ಸಂವೇದನೆಗಳಿಗೆ ಜಗತ್ತು ಎಂದಾದರೂ ಸ್ಪಂದಿಸದೆ ಉಳಿಯದು ಆ

ನಂಬಿಕೆಯಿಂದಲೆ ಕವಿ ಬರೆಯುತ್ತಾನೆ.

ಅಂದು ಬೀದಿಗಿದ್ದಿದ್ದೇ ಒಂದೆರಡು ದುಕಾನು,

ಆಗೆಲ್ಲ ನೀನೇ ನವಾಬ ಸಕಲ ವಸ್ತು ಪ್ರದಾಯಿ ಕಾಮಧೇನು

ಆದರಿವತ್ತು ಅಡಿಗೊಂದು ಅತ್ಯಾಧುನಿಕ ಮಳಿಗೆ

ರವಾನಿಸುತ್ತಿದೆ ಬಯಸಿದ್ದನ್ನು ನೇರ ಹೊಸತಿಲ ಬಳಿಗೆ

‘ಮುಚ್ಚು ಅಂಗಡಿಯನ್ನು’ ಎನ್ನುವ ಈ ಪದ್ಯದಲ್ಲಿ ಇರುವ ಆಯಾಮಗಳನ್ನು ನೋಡಬೇಕು. ಇದು ಬರಿ ಮೌಲ್ಯಗಳ ಸಂಘರ್ಷ ಮಾತ್ರವಲ್ಲ, ಮನುಷ್ಯ ಸಂವಾದವೇ ಇಲ್ಲದ ಅತ್ಯಾಧುನಿಕ ಸೂಪರ್ ಮಾರ್ಕೇಟು, ಮನೆಯ ಬಾಗಿಲಿಗೆ ಡೆಲವರಿಕೊಡುವ ಮಾರು ಕಂಪನಿಗಳ ಮೇಲಾಟದ ಹೀಗೆ ಈ ಹೊತ್ತಿನ ಅನೇಕ ಸಂಗತಿಗಳಿಗೂ ತೆರೆದುಕೊಳ್ಳುತ್ತದೆ.

ಮಾರುಕಟ್ಟೆಯ ಸಂಸ್ಕೃತಿ ಆಯಾ ಕಾಲದ ತುರ್ತುಗಳನ್ನು ಮಾತ್ರ ಮಾರುತ್ತದೆ. ಡಿಮ್ಯಾಂಡ್ ಇಲ್ಲದಿರುವುದು ಹಾಗೇ ಪಕ್ಕಕ್ಕೆ ಸರಿದು ಮರೆಯಾಗುತ್ತದೆ. ವಾಸ್ತವದ ವಿವರಗಳ ಮೂಲಕ ಸ್ಪಷ್ಟ ಚಿತ್ರಣವನ್ನು ನೀಡುವ ನಿಸಾರರು ಊಹಾತ್ಮಕ ನಿಲುವಿಗೆ ಅಂತಿಕೊಳ್ಳುವುದಿಲ್ಲ. ಪ್ರಖರವಾದ ನಿಷ್ಠೂರವಾದ ಸಂಗತಿಗಳಿಗೆ ಒಲಿಯುತ್ತಾರೆ.
ಒಂದು ಕವಿತೆ ಹೀಗೆ ವಿಸ್ತಾರವಾಗುವುದೂ ಯಾವ ಕಾಲಕ್ಕೂ ಸರಿ ಎನ್ನಿಸುವುದು ಉದ್ದೇಶಿತ ಅರ್ಥದ ಗಡಿಗಳನ್ನು ದಾಟುವುದೂ ಅಪರೂಪವೇ. ಅಂಥಾ ಶಕ್ತ ಪ್ರತಿಮೆಗಳನ್ನು ಹಿಡಿಯಲು ಸಾಧ್ಯವಾದ ಅಪ್ಪಟ ಪ್ರತಿಭೆ ನಿಸಾರ್.

ನಮ್ಮದು ಒಳಗೊಳ್ಳುವ ಸಂಸ್ಕೃತಿ ಸಿಡಿದು ನಿಲ್ಲುವ ಸಂಸ್ಕೃತಿಯಲ್ಲ. ದೇಶ ಭಾಷೆಗಳಲ್ಲಿ ಬರೆಯುತ್ತಿರುವ ಮುಸ್ಲಿಂ ಬರಹಗಾರರ ಬಹುದೊಡ್ಡ ಸವಾಲು ದೇಶ ಮತ್ತು ಪ್ರಾದೇಶಿಕತೆಯ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದು. ಭಾರತ ಬಹು ಸಂಸ್ಕೃತಿಯ ನಾಡು. ಎಲ್ಲವನ್ನು ಸಮನಾಗಿ ಒಪ್ಪಿಕೊಳ್ಳುತ್ತಾ ಭಿನ್ನ ಅಭಿಪ್ರಾಯಗಳ ನಡುವೆಯೂ ಜೀವನವನ್ನು ಚಂದ ಮಾಡಿಕೊಂಡ ನಮ್ಮ ಹಿರಿಯರು ಬದುಕಿದ್ದು, ಒಬ್ಬರಿಗೊಬ್ಬರು ಎನ್ನುವ ನಂಬುಗೆಯ ಮೇಲೆ. ದೇವಸ್ಥಾನ ಮಸೀದಿಗಳ ನಡುವೆ ಅಂಥಾ ದೊಡ್ದ ಕಂದಕವೇನೂ ಇರಲಿಲ್ಲ. ಎರಡೂ ಕಡೆ ಜನ ಸಮವಾಗಿ ಹರಕೆ ಹೊರುತ್ತಿದ್ದರು, ನಡೆದುಕೊಳ್ಳುತ್ತಿದ್ದರು. ಮಕ್ಕಳಿಗೆ ಹುಶಾರಿಲ್ಲದಿದ್ದರೆ ತಾಯತ ಕಟ್ಟಿಸಿಕೊಂಡು ಬರುವುದು ಮಾಮೂಲಿನ ವಾಡಿಕೆಯಾಗಿದ್ದಿತು. ಆದರೆ ಧರ್ಮವೇ ದೇಶವನ್ನು ಒಡೆದ ದಿನ ಇಲ್ಲಿಯ ಜನರ ನಡುವೆಯೂ ಅನುಮಾನದ ಎಳೆಗಳು ಸುಳಿದಾಡತೊಡಗಿದವು. ವೈವಿಧ್ಯಮಯ ಜೀವನಕ್ರಮ ಒಟ್ಟಾಗಿ ಬಾಳುವ ಆಶಯದ ನಡುವೆಯೂ ಹುದುಗಿರುವ ಸಂಶಯಗಳನ್ನು ಅನುಭವಿಸಿದ ನಿಸಾರ್ ತಮ್ಮ ಕವಿತೆಗಳಲ್ಲಿ ಅದನ್ನು ಒಂದು ಚಿಮ್ಮು ಹಲಗೆಯಾಗಿ ಕೂಡಾ ಬಳಸಿಕೊಳ್ಳುತ್ತಾರೆ. ಈ ಎಲ್ಲದರ ನಡುವೆ ತಾವು ತಾವೇ ಆಗಿ ಈ ನೆಲದಲ್ಲಿ

ತಲೆಯೆತ್ತುವುದು ಎಷ್ಟು ಕಷ್ಟ!

ನಿಮ್ಮ ಮಾತುಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆ ನಿಯತ್ತು ಹಕ್ಕು

ಕೊನೆಗೆ ಸಾಚಾತನವನ್ನೂ ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದರೂ

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನೆದುರಲ್ಲೇ ತನಿಖೆ ಮಾಡುವ ಕ್ಷಣವನ್ನು

ಹುಸಿ ನಗುತ್ತಾ ಎದುರಿಸುವುದಿದೆಯಲ್ಲಾ

ಅದು ಬಲು ಕಷ್ಟದ ಕೆಲಸ. (ನಿಮ್ಮೊಡನಿದ್ದು ನಿಮ್ಮಂಥಾಗದೆ)

ಈ ಪದ್ಯ ಸೂಕ್ಷ್ಮ ಮನಸ್ಸೊಂದಕ್ಕೆ ಆಗುವ ಕೋಮುವಾದದಿಂದಾಗುವ ಆಘಾತ ಅದನ್ನು ತಾಳಿಕೊಂಡು ಬೆಳೆಯಬಹುದಾದ ಸಾಧ್ಯತೆಗಳನ್ನು ಹೇಳುವ ಪದ್ಯ. ಇದೇ ನೆಲದಲ್ಲಿ ಹುಟ್ಟಿ ಈ ಮಣ್ಣಿನ ಸಂಸರ್ಗದಲ್ಲೇ ಬದುಕನ್ನು ಕಟ್ಟಿಕೊಂಡವರನ್ನು ಯಾವುದೋ ಧರ್ಮದ ಕಾರಣಕ್ಕೆ ದೂರ ಇಡುವ ಕೇಡುಗಳಿಗೆ ಎದುರಾಗಿ ನಿಸಾರ್ ನಿಲ್ಲಲೇ ಬೇಕಾಗುತ್ತದೆ. ಕವಿಯಾಗಿ ಅವರು ಜಗತ್ತನ್ನು ಸಮಚಿತ್ತದಿಂದ ನೋಡುತ್ತಾ ಎಲ್ಲವನ್ನೂ ದಾಖಲು ಮಾಡುತ್ತಾ ಬಂದಿದ್ದರೂ, ಈ ನೆಲದ ಕಾವ್ಯಕ್ಕೆ ಬಹುದೊಡ್ದ ಕೊಡುಗೆ ಕೊಟ್ಟಾಗಲೂ, ಮುಸಲ್ಮಾನರೆಲ್ಲಾ ಈ ನೆಲದವರೇ ಅಲ್ಲ ಎನ್ನುವ ಹಾಗೇ ನೋಡುವ ಕುತ್ಸಿತ ಮನಸ್ಸುಗಳಿಗೆ ಉತ್ತರ ಹೇಳುವ ತೊಳಲಾಟವನ್ನು ಕವಿ ಅನುಭವಿಸುತ್ತಾರೆ. ಅವರ ವ್ಯಕ್ತಿತ್ವದಲ್ಲೇ ಅರಗಿಸಿಕೊಳ್ಳುವ ಗುಣ ಹಾಸು ಹೊಕ್ಕಾದ್ದರಿಂದ ಎಲ್ಲ ವ್ಯಂಗ್ಯಗಳನ್ನು ದಾಟಿ, ನಿರಾಳವಾಗುತ್ತಾ, ಅನುಭವದ ಮೂಸೆಯಲ್ಲಿ ಎರಕ ಹೊಯ್ದ ಕವಿತೆಗಳನ್ನು ನಿರಾತಂಕವಾಗಿ ಬರೆಯುತ್ತಾರೆ. ಭಿನ್ನ ಧರ್ಮಗಳ ನಡುವೆ ಇರುವ ಸಂಘರ್ಷದ ಸ್ವರೂಪವನ್ನು ಬಿಚ್ಚಿಡುತ್ತಾ ಹೋಗುತ್ತಾರೆ.

(ಮುಂದಿನ ಭಾಗ ನಿರೀಕ್ಷಿಸಿ)

ಹಿಂದಿನ ಭಾಗ : K. S. Nissar Ahmed Birth Anniversary : ‘ಮಸೀದಿಗೆ ಹೋಗದ ನನಗೆ ರೇಜರ್ ಕೊಟ್ಟಂತೆ ದಡ್ದ ಮೌಲ್ವಿಗೆ ಕಿರಾತ ಗಡ್ದ ಕೊಟ್ಟೆ’

TV9 Kannada


Leave a Reply

Your email address will not be published.