ಕಾಲ ಭೈರವ
ಮಾನವಕುಲಕ್ಕೆ ಅಗತ್ಯವಾದ ಜೀವನ ಪಾಠಗಳನ್ನು ನೀಡಲು ಶಿವನು ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅಂತಹ ಒಂದು ರೂಪವೆಂದರೆ ಕಾಲ ಭೈರವ. ಮಹಾದೇವನ ಈ ರೂಪವು ಅತ್ಯಂತ ಉಗ್ರ ಮತ್ತು ಆಕ್ರಮಣಕಾರಿ ರೂಪವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿಂದೂ ತಿಂಗಳ ಮಾರ್ಗಶೀರ್ಷ ಮತ್ತು ಕಾರ್ತಿಕ ಮಾಸದ ಕೃಷ್ಣ ಪಕ್ಷ, ಅಷ್ಟಮಿ ತಿಥಿಯಂದು ಕಾಲ ಭೈರವ ರೂಪ ಜನ್ಮತಾಳುತ್ತೆ ಎನ್ನಲಾಗಿದೆ. ಹಾಗಾದ್ರೆ ಬನ್ನಿ ಕಾಲ ಭೈರವನ ಜಯಂತಿ ಹಾಗೂ ಪೂಜೆಯ ಬಗ್ಗೆ ಇಲ್ಲಿ ತಿಳಿಯಿರಿ.
ಕಾಲ ಭೈರವನು ಕಾಲ ಅಂದರೆ ಸಮಯವನ್ನು ಸೂಚಿಸುವವನಾಗಿದ್ದಾನೆ. ಭವಿಷ್ಯವನ್ನು ತಿಳಿದಿರುವವನೇ ಕಾಲ ಭೈರವ. ಈತ ಸಮಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತಾನೆ. ಈ ವರ್ಷ ಕಾಲ ಭೈರವ ಜಯಂತಿಯನ್ನು ನವೆಂಬರ್ 27 ರಂದು ಆಚರಿಸಲಾಗುತ್ತದೆ.
ಕಾಲ ಭೈರವ ಜಯಂತಿ ತಿಥಿ
ಅಷ್ಟಮಿ ತಿಥಿಯು ನವೆಂಬರ್ 27 ರಂದು ಬೆಳಿಗ್ಗೆ 5:43 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 28 ರಂದು ಬೆಳಿಗ್ಗೆ 6:00 ಕ್ಕೆ ಕೊನೆಗೊಳ್ಳುತ್ತದೆ.
ಕಾಲ ಭೈರವ ಜಯಂತಿಯ ಮಹತ್ವ
ಕಾಲ ಭೈರವ ರೂಪಕ್ಕೆ ಸಂಬಂಧಿಸಿದ ದಂತಕಥೆಯು ಅತ್ಯಗತ್ಯ ಜೀವನ ಪಾಠವನ್ನು ನೀಡುತ್ತದೆ. ಒಮ್ಮೆ ಬ್ರಹ್ಮನು ಅಹಂಕಾರಿಯಾಗಿ ತಾನೇ ಬ್ರಹ್ಮಾಂಡದ ಸೃಷ್ಟಿಕರ್ತನೆಂದು ಹೆಮ್ಮೆಪಡುತ್ತಿರುತ್ತಾನೆ. ಆಗ ವಿಷ್ಣು ಹಾಗೂ ಬ್ರಹ್ಮನಲ್ಲಿ ಯಾರು ಪ್ರಬಲರು, ದೊಡ್ಡವರು ಎಂಬ ಪ್ರಶ್ನೆ ಏಳುತ್ತೆ. ಇವರಿಬ್ಬರ ದ್ವಂದ್ವತೆಯನ್ನು ನಿವಾರಿಸಲು ಶಿವನು ಬ್ರಹ್ಮಾಂಡವನ್ನು ಮೀರಿ ವಿಸ್ತರಿಸಿದ ಬೆಳಕಿನ ಬೃಹತ್ ಸ್ಥಂಭವಾಗಿ ಹೊರಹೊಮ್ಮುತ್ತಾನೆ. ಈ ಕಂಭದ ಅಂತ್ಯವನ್ನು ಯಾರು ಮೊದಲು ನೋಡುತ್ತಾರೋ ಅವರೇ ಅತ್ಯಂತ ಪ್ರಭಾವಶಾಲಿಯೆಂದು ಶಿವ ಹೇಳುತ್ತಾನೆ.
ಆಗ ವಿಷ್ಣು ಕಾಡುಹಂದಿಯ ರೂಪ ಧರಿಸಿ ಸ್ಥಂಭದ ಕೆಳಭಾಗದ ಅಂತ್ಯವನ್ನು ಹುಡುಕಲು ಸ್ಥಂಭದ ಕೆಳಭಾಗದತ್ತ ಸಾಗುತ್ತಾನೆ. ಆದರೆ ವಿಷ್ಣು ಇದರಲ್ಲಿ ವಿಫಲನಾಗುತ್ತಾನೆ. ಮತ್ತೊಂದೆಡೆ ಬ್ರಹ್ಮ ಹಂಸದ ರೂಪ ಧರಿಸಿ ಹೊಳೆಯುವ ಸ್ಥಂಭದ ಮೇಲ್ಭಾಗದ ಅಂತ್ಯವನ್ನು ಹುಡುಕಲು ಹೊರಡುತ್ತಾನೆ. ಆದ್ರೆ ಬ್ರಹ್ಮನೂ ಇದರಲ್ಲಿ ವಿಫಲರಾಗುತ್ತಾನೆ. ಬ್ರಹ್ಮನು ಒಂದು ಹೂವನ್ನು ಹಿಡಿದುಕೊಂಡು ನೀರಿನಿಂದ ಮೇಲಕ್ಕೆ ಬಂದು ನಾನು ಸ್ಥಂಭದ ಅಂತ್ಯವನ್ನು ನೋಡಿದ್ದೇನೆ. ನಾನೇ ಶ್ರೇಷ್ಟನೆಂದು ಹೇಳುತ್ತಾನೆ. ಬ್ರಹ್ಮನ ಸುಳ್ಳು ನುಡಿಗಳನ್ನು ಕೇಳಿದ ಶಿವನು ಕೋಪಗೊಂಡು ತನ್ನ ಮೂರನೇ ಕಣ್ಣಿನಿಂದ ಭೈರವನನ್ನು ಸೃಷ್ಟಿಸುತ್ತಾನೆ. ಆ ಉಗ್ರ ರೂಪದ ಭೈರವ ಬ್ರಹ್ಮನ 5ನೇ ತಲೆಯನ್ನು ಕತ್ತರಿಸಿ ಬ್ರಹ್ಮನ ಅಹಂಕಾರವನ್ನು ನಾಶ ಮಾಡುತ್ತಾನೆ.
ಯಾವುದೇ ಭಕ್ತನು ತನ್ನನ್ನು ಪೂಜಿಸುವುದಿಲ್ಲ ಎಂದು ಶಿವ ಬ್ರಹ್ಮನಿಗೆ ಶಾಪವನ್ನು ನೀಡುತ್ತಾನೆ. ಕಾಲ ಭೈರವನು ಗಾಢ ಕಪ್ಪು ಬಣ್ಣವನ್ನು ಹೊಂದಿರುತ್ತಾನೆ. ಉಗ್ರವಾದ ಮುಖ, ಮೂರು ಕಣ್ಣುಗಳು, ತಲೆ ಬುರುಡೆ ಮತ್ತು ಹಾವಿನ ಹಾರವನ್ನು ಧರಿಸಿರುತ್ತಾನೆ. ಒಂದು ಕೈಯಲ್ಲಿ ತ್ರಿಶೂಲ ಇನ್ನೊಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದಿರುತ್ತಾನೆ. ಕಪ್ಪು ಬಣ್ಣದ ನಾಯಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.
ಕಾಲಭೈರವ ಜಯಂತಿಯಂದು ಭಕ್ತರು ರಾತ್ರಿಯಿಡೀ ಜಾಗರಣೆ ಮಾಡಿ ಪೂಜೆ ಸಲ್ಲಿಸುತ್ತಾರೆ ಮತ್ತು ಆರತಿ ಮಾಡುತ್ತಾರೆ. ಅವರು ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ ಮತ್ತು ಸತ್ತ ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸುತ್ತಾರೆ.