R. Chandru | Upendra: ನಿರ್ದೇಶಕ ಆರ್. ಚಂದ್ರು ಮತ್ತು ನಟ ಉಪೇಂದ್ರ ಅವರ ಕಾಂಬಿನೇಷನ್ನಲ್ಲಿ ‘ಕಬ್ಜ’ ಚಿತ್ರ ಮೂಡಿಬರುತ್ತಿವೆ. ಹಿಂದಿ ಸಿನಿಪ್ರಿಯರ ವಲಯದಲ್ಲಿ ಈ ಚಿತ್ರದ ಕ್ರೇಜ್ ಜೋರಾಗಿದೆ.
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿಯಲ್ಲಿ ‘ಕಬ್ಜ’ (Kabzaa Movie) ಕೂಡ ಸ್ಥಾನ ಪಡೆದುಕೊಂಡಿದೆ. ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂದು ಸಿನಿಪ್ರಿಯರು ಕಾದಿದ್ದಾರೆ. ಚಿತ್ರದ ಬಿಡುಗಡೆಗೆ ಬೇಕಾದ ಸಕಲ ತಯಾರಿಯನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ. ನಿರ್ದೇಶಕ ಆರ್. ಚಂದ್ರು (R. Chandru) ಅವರು ಬಹಳ ಕಾಳಜಿ ವಹಿಸಿ ‘ಕಬ್ಜ’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲೇ ಹೇಳಿದಂತೆ ಇದು ಪ್ಯಾನ್ ಇಂಡಿಯಾ ಚಿತ್ರ. ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ‘ಕಬ್ಜ’ ಹಿಂದಿ ವರ್ಷನ್ಗೆ ಸಾಕಷ್ಟು ಬೇಡಿಕೆ ಇದೆ. ಈಗ ಕೇಳಿಬಂದಿರುವ ಲೇಟೆಸ್ಟ್ ನ್ಯೂಸ್ ಏನೆಂದರೆ, ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್ ಪಂಡಿತ್ (Anand Pandit) ಮುಂದೆ ಬಂದಿದ್ದಾರೆ. ‘ಕಬ್ಜ’ ಚಿತ್ರದ ಹಿಂದಿ ವಿತರಣೆ ಹಕ್ಕುಗಳು ಅವರ ಪಾಲಾಗಿವೆ.
ಬಾಲಿವುಡ್ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಆನಂದ್ ಪಂಡಿತ್ ಅವರಿಗೆ ಇದೆ. ಸ್ವತಃ ನಿರ್ಮಾಪಕರು ಆಗಿರುವ ಅವರು ಬಿ-ಟೌನ್ ವ್ಯವಹಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ‘ಕಬ್ಜ’ ಸಿನಿಮಾದ ಹಿಂದಿ ವಿತರಣೆ ಹಕ್ಕುಗಳನ್ನು ಅವರು ಪಡೆದುಕೊಂಡಿರುವುದರಿಂದ ಬಾಲಿವುಡ್ ಪ್ರೇಕ್ಷಕರ ವಲಯದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ರೆಟ್ರೋ ಕಾಲದ ಭೂಗತ ಲೋಕದ ಕಥೆಯನ್ನು ‘ಕಬ್ಜ’ ಸಿನಿಮಾ ಹೊಂದಿರಲಿದೆ. ಅದಕ್ಕೆ ಟೀಸರ್ನಲ್ಲಿಯೇ ಸಾಕ್ಷಿ ಸಿಕ್ಕಿದೆ. ಬಾಲಿವುಡ್ ಮಂದಿ ಕೂಡ ‘ಕಬ್ಜ’ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಡಿಸೆಂಬರ್ 1ರಂದು ಹೊಸ ಟೀಸರ್ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇನ್ನುಳಿದ ಭಾಷೆಗಳಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳು ಯಾರ ಪಾಲಾಗಲಿವೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ.
ನಿರ್ದೇಶಕ ಆರ್. ಚಂದ್ರು ಮತ್ತು ನಟ ಉಪೇಂದ್ರ ಅವರ ಕಾಂಬಿನೇಷನ್ನಲ್ಲಿ ‘ಕಬ್ಜ’ ಚಿತ್ರ ಮೂಡಿಬರುತ್ತಿವೆ. ಕಿಚ್ಚ ಸುದೀಪ್ ಕೂಡ ಈ ಸಿನಿಮಾದಲ್ಲಿ ನಟಿಸಿರುವುದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಈ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ರಿಲೀಸ್ ಡೇಟ್ ಅನೌನ್ಸ್ ಆಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ಮೊದಲ ಟೀಸರ್ ಬಿಡುಗಡೆ ಆದ ದಿನದಿಂದಲೂ ‘ಕಬ್ಜ’ ಸಿನಿಮಾ ಹವಾ ಮಾಡುತ್ತಿದೆ. ಅದ್ದೂರಿ ಮೇಕಿಂಗ್ನ ಝಲಕ್ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ. 29 ಮಿಲಿಯನ್ಗಿಂತಲೂ ಅಧಿಕ ಬಾರಿ ಈ ಟೀಸರ್ ವೀಕ್ಷಣೆ ಕಂಡಿದೆ. ‘ಕಬ್ಜ’ ಮೇಲೆ ಸಿನಿಪ್ರಿಯರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದು ಸಾಕ್ಷಿ.