R Chandru | Upendra | Kichcha Sudeep: ಸದ್ಯ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಳ್ಳುತ್ತಿರೋದು ಹೊಸ ಟ್ರೆಂಡ್. ಇದು ‘ಕಬ್ಜ’ದಲ್ಲೂ ಮುಂದುವರೆಯುವ ಲಕ್ಷಣಗಳಿವೆ.
ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kichcha Sudeep) ಕಾಣಿಸಿಕೊಳ್ಳುತ್ತಿರುವ ‘ಕಬ್ಜ’ ಚಿತ್ರ (Kabzaa Movie) ಈಗಾಗಲೇ ಸಖತ್ ಸದ್ದು ಮಾಡುತ್ತಿದೆ. ಇದೀಗ ಚಿತ್ರದ ಬಗ್ಗೆ ಭರ್ಜರಿ ಅಪ್ಡೇಟ್ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು. ಸದ್ಯ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಬಾಲಿವುಡ್ ನಟಿಯರು ಕಾಣಿಸಿಕೊಳ್ಳುತ್ತಿರೋದು ಹೊಸ ಟ್ರೆಂಡ್. ಇದು ‘ಕಬ್ಜ’ದಲ್ಲೂ ಮುಂದುವರೆಯುವ ಲಕ್ಷಣಗಳಿವೆ. ಈಗಾಗಲೇ ಶ್ರಿಯಾ ಶರಣ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಆದರೆ ಮತ್ತೋರ್ವ ನಾಯಕಿಯ ಸುಳಿವು ನೀಡಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಆರ್.ಚಂದ್ರು ಮಾಹಿತಿ ನೀಡಿದ್ದಿಷ್ಟು. ‘‘ಕಬ್ಜ ಚಿತ್ರದಲ್ಲಿ ಮತ್ತೋರ್ವ ನಾಯಕಿ ಹಾಗೂ ಅವರ ಹಾಡಿನ ಭಾಗದ ಚಿತ್ರೀಕರಣ ಬಾಕಿ ಇದೆ. ಸುಮಾರು ಒಂದು-ಒಂದೂವರೆ ತಿಂಗಳು ಸೆಟ್ ಹಾಕಿ ಅದರ ಚಿತ್ರೀಕರಣ ನಡೆಸಲಾಗುತ್ತದೆ. ಹಾಡನ್ನು ಹಿಂದಿ ಪ್ರೊಡಕ್ಷನ್ ಹೌಸ್ಗಳ ಜತೆ ಚರ್ಚೆ ನಡೆಸಿ ಚಿತ್ರೀಕರಣ ನಡೆಸಬೇಕು. ಹಿಂದಿಗೆ ಸಲ್ಲುವಂತಹ ಹಾಡು ಅದಾಗಿರುವುದರಿಂದ ಅಂತಹ ನಿರ್ಮಾಣ ಸಂಸ್ಥೆಗಳ ಬಗ್ಗೆ ಚರ್ಚೆ ನಡೆಸಬೇಕು. ಹಾಗಾಗಿ ಆ ಭಾಗ ಒಂದು ಪೆಂಡಿಂಗ್ ಇದೆ’’ ಎಂದು ಮಾಹಿತಿ ನೀಡಿದ್ದಾರೆ ಆರ್.ಚಂದ್ರು.
ಹಾಡು ಹಿಂದಿಗೆ ಸಲ್ಲುವಂತೆ ಇರಲಿದೆ ಎಂದು ಮಾಹಿತಿ ನೀಡಿರುವ ನಿರ್ದೇಶಕರು ನಾಯಕಿ ಕೂಡ ಅದೇ ಚಿತ್ರರಂಗದವರು ಇರುವ ಸಾಧ್ಯತೆ ಇದೆ ಎನ್ನುವ ಪರೋಕ್ಷ ಸೂಚನೆ ನೀಡಿದ್ದಾರೆ. ಇದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಮೇ 27ರಿಂದ ‘ಕಬ್ಜ’ ಡಬ್ಬಿಂಗ್ ಆರಂಭಿಸಲಿದೆ. ಹಾಡು ಹಾಗೂ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಬಾಕಿ ಇದ್ದು, ಮುಂದಿನ ದಿನಗಳಲ್ಲಿ ಚಿಯತ್ರೀಕರಣ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ ಆರ್.ಚಂದ್ರು. ಡಬ್ಬಿಂಗ್ ನಂತರ ಟೀಸರ್ ರಿಲೀಸ್ ಹಾಗೂ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ನೀಡುವುದಾಗಿಯೂ ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ