Chargesheet: ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.

ಆ್ಯಸಿಡ್ ದಾಳಿ ಆರೋಪಿ ನಾಗೇಶ್
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದಲ್ಲಿ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ (Acid Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಮೂರು ತಿಂಗಳ ನಂತರ 13ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದ್ದಾರೆ. ಪ್ರಾಥಮಿಕ ಚಾರ್ಜ್ಶೀಟ್ ಒಟ್ಟು 770 ಪುಟಗಳಿವೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.
ಘಟನೆಯ ಪ್ರತ್ಯಕ್ಷದರ್ಶಿಗಳು ಐಪಿಸಿ 164ರ ಅಡಿಯಲ್ಲಿ ವಿಚಾರಣಾ ನ್ಯಾಯಾಧೀಶರ ಹೊರತಾದ ಪ್ರತ್ಯೇಕ, ಸ್ವತಂತ್ರ ನ್ಯಾಯಾಧೀಶರ ಎದುರು ಸ್ವಯಂ ಪ್ರೇರಣೆಯಿಂದ ಸಾಕ್ಷಿಗಳು ತಮ್ಮ ಹೇಳಿಕೆ ದಾಖಲಿಸುತ್ತಾರೆ. ಈ ಕಲಂ ಅಡಿಯಲ್ಲಿ ಸಾಕ್ಷಿ ನುಡಿಯುವ ಪ್ರಕ್ರಿಯೆ ಗೌಪ್ಯವಾಗಿರುತ್ತದೆ. ಮಾತ್ರವಲ್ಲ ವಿಡಿಯೊ ಚಿತ್ರೀಕರಣದ ಮೂಲಕವೂ ದಾಖಲಾಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಐಪಿಸಿ 164 ಅಡಿಯಲ್ಲಿ ದಾಖಲಿಸುವ ಸಾಕ್ಷಿಗೆ ತನ್ನದೇ ಆದ ಮಹತ್ವವಿದೆ.
ಯುವತಿಯ ಮೇಲೆ ಆ್ಯಸಿಡ್ ಹಾಕಿದ ನಾಗೇಶ್ ನಂತರ ಗಾಬರಿಯಿಂದ ಓಡಿಹೋದ. ಇಡೀ ಘಟನೆಯನ್ನು ಇವರು ನೋಡಿದ್ದಾರೆ ಎನ್ನುವ ಕಾರಣಕ್ಕೆ ಐಪಿಸಿ 164ರ ಅನ್ವಯ ಸಾಕ್ಷಿ ದಾಖಲಿಸಲು ಪೊಲೀಸರು ವಿನಂತಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯದ (Forensic Science Laboratory – FSL) ತಜ್ಞರು ನೀಡಿರುವ ವರದಿಯನ್ನೂ ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.