Kangana Ranaut: ‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ’: ಕರ್ತವ್ಯ ಪಥ ಉದ್ಘಾಟನೆ ಬಳಿಕ ನಟಿ ಕಂಗನಾ ಹೇಳಿಕೆ | Kangana Ranaut says she is Netawadi not Gandhiwadi after the inauguration of Kartavya Path


Kartavya Path: ‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಾಗಾಗಿ ನಾನು ಮಾತನಾಡುವ ರೀತಿಯಿಂದಾಗಿ ಕೆಲವರಿಗೆ ತೊಂದರೆ ಆಗಿದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

Kangana Ranaut: ‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ’: ಕರ್ತವ್ಯ ಪಥ ಉದ್ಘಾಟನೆ ಬಳಿಕ ನಟಿ ಕಂಗನಾ ಹೇಳಿಕೆ

ಕಂಗನಾ ರಣಾವತ್

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆ.8) ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ನಟಿ ಕಂಗನಾ ರಣಾವತ್​ (Kangana Ranaut) ಕೂಡ ಹಾಜರಿ ಹಾಕಿದರು. ಕರ್ತವ್ಯ ಪಥ (Kartavya Path) ಉದ್ಘಾಟನೆ ಬಳಿಕ ಅವರು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ’ ಎಂದು ಕಂಗನಾ ಹೇಳಿಕೆ ನೀಡಿದ್ದಾರೆ. ‘ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್​ ಚಂದ್ರ ಬೋಸ್​ (Subhash Chandra Bose) ಹಾಗೂ ವೀರ ಸಾವರ್ಕರ್​ ಅವರನ್ನು ಕಡೆಗಣಿಸಲಾಗಿದೆ. ಕೇವಲ ಉಪವಾಸ ಸತ್ಯಾಗ್ರಹ ಹಾಗೂ ದಂಡಿ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ’ ಎಂದು ಕಂಗನಾ ಹೇಳಿದ್ದಾರೆ.

ತಮ್ಮ ನೇರ ನಡೆ-ನುಡಿಯ ಕಾರಣಕ್ಕೆ ಕಂಗನಾ ರಣಾವತ್​ ಅವರು ಆಗಾಗ ಟೀಕೆಗೆ ಒಳಗಾಗುತ್ತಾರೆ. ಸಿನಿಮಾಗಿಂತಲೂ ಹೆಚ್ಚಾಗಿ ಅವರು ಬೇರೆ ಕಾರಣದಿಂದಲೇ ಸುದ್ದಿ ಆಗುತ್ತಾರೆ. ಇದರಿಂದ ಕಂಗನಾ ಅನೇಕ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಾರೆ. ರಾಜಕೀಯದ ಹಲವು ವಿಷಯಗಳಲ್ಲಿ ಅವರು ಮೂಗು ತೂರಿಸುತ್ತಾರೆ.

‘ನಾನು ಗಾಂಧಿವಾದಿ ಅಲ್ಲ, ನೇತಾವಾದಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಹಾಗಾಗಿ ನಾನು ಮಾತನಾಡುವ ರೀತಿಯಿಂದಾಗಿ ಕೆಲವರಿಗೆ ತೊಂದರೆ ಆಗಿದೆ. ಎಲ್ಲರಿಗೂ ಅವರದ್ದೇ ಆದಂತಹ ಆಲೋಚನಾ ರೀತಿ ಇರುತ್ತದೆ. ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದರು. 2ನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿ ಭಾರತವನ್ನು ಹೀನಾಯ ಸ್ಥಿತಿಯಿಂದ ಹೊರತರಲು ನೇತಾಜಿ ಪ್ರಪಂಚಾದ್ಯಂತ ಅಭಿಯಾನ ಮಾಡಿದರು. ಅವರು ತಮ್ಮದೇ ಸೈನ್ಯ ಕಟ್ಟಿದ್ದರು. ಅವರಿಗೆ ಸ್ವಾತಂತ್ರ್ಯದ ಹಸಿವು ಇತ್ತು. ಅಧಿಕಾರದ ಹಸಿವು ಇರಲಿಲ್ಲ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಕರ್ತ್ಯವ ಪಥದ ಉದ್ಘಾಟನೆ ಬಗ್ಗೆಯೂ ಕಂಗನಾ ಮಾತನಾಡಿದ್ದಾರೆ. ‘ಇದು ಕರ್ತವ್ಯದ ಪಥ. ಅನೇಕ ತಲೆಮಾರುಗಳಿಗೆ ಇದು ಮಾದರಿ ಆಗಲಿದೆ. ರಾಜಪಥ ಎಂದಿದ್ದರೆ ಅದು ಮಾದರಿ ಆಗುವುದಿಲ್ಲ. ಕರ್ತವ್ಯ ಪಥ ಎಂಬುದು ಜನರಿಗೆ ಮಾರ್ಗದರ್ಶನ ನೀಡುತ್ತದೆ’ ಎಂಬುದು ಕಂಗನಾ ಅಭಿಪ್ರಾಯ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಕಂಗನಾ ರಣಾವತ್​ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಗೆಲುವು ಸಿಕ್ಕಿಲ್ಲ. ಮಾಡಿದ ಎಲ್ಲ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿವೆ. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಧಾಕಡ್​’ ಸಿನಿಮಾ ತೀರಾ ಹೀನಾಯವಾಗಿ ಸೋತಿತು. ಅದಕ್ಕೂ ಮುನ್ನ ನಟಿಸಿದ್ದ ‘ಪಂಗ’, ‘ತಲೈವಿ’, ‘ಜಡ್ಜ್​ಮೆಂಟಲ್​ ಹೈ ಕ್ಯಾ’ ಸಿನಿಮಾಗಳು ಕೂಡ ಲಾಭ ಕಾಣದೆ ಸೋಲು ಅನುಭವಿಸಿದವು. ಈಗ ‘ಎಮರ್ಜೆನ್ಸಿ’ ಚಿತ್ರದ ಕೆಲಸಗಳಲ್ಲಿ ಕಂಗನಾ ಬ್ಯುಸಿ ಆಗಿದ್ದಾರೆ.

TV9 Kannada


Leave a Reply

Your email address will not be published.