ನಮ್ಮ ಕರ್ನಾಟಕಕ್ಕೆ ಮೋದಿಯವರ ಮುಖ ಯಾಕೆ ಬೇಕು? ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಎದುರಿಸಲಿ ಎಂದು ಡಿ.ಕೆ.ಶಿವಕುಮಾರ್ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಉಡುಪಿ: ರಾಜ್ಯದಲ್ಲಿ ನೆರೆ ಹಾನಿ ಬಂದು ಜನ ಕಷ್ಟದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಬರಲಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಯಾಕೆ ಬರುತ್ತಿದ್ದಾರೆ. ಅವರ ಮುಖ ನಮ್ಮ ಕರ್ನಾಟಕಕ್ಕೆ ಯಾಕೆ ಬೇಕು, ಇಲ್ಲಿ ಆಡಳಿತ ನಡೆಸಿದವರ ಮುಖ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ರಾಜ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ. ಉಡುಪಿಯಲ್ಲಿ ನಡೆದ ಕಾಂಗ್ರೆಸ್ನ ಬಸ್ ಯಾತ್ರೆಯಲ್ಲಿ (Congress Bus Yatra) ಮಾತನಾಡಿದ ಅವರು, ರಾಜ್ಯಕ್ಕೆ ಕಳಂಕ ಬಂದಾಗ ಆರೋಪಗಳು ಬಂದಾಗ ನಿವಾರಣೆ ಮಾಡಲು ಮೋದಿ ರಾಜ್ಯಕ್ಕೆ ಬರಲಿಲ್ಲ. 25 ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಮೋದಿಗೆ ಖಾತ್ರಿಯಾಗಿದೆ. ಇದನ್ನು ಏನಾದರೂ ಮ್ಯಾಚ್ ಅಪ್ ಮಾಡಲು ಆಗುತ್ತಾ ಎಂದು ನೋಡಲು ರಾಜ್ಯಕ್ಕೆ ಮೋದಿ ಬರುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಮೊದಲು ಅಮಿತ್ ಶಾ ಘೋಷಿಸಿದ್ದರು. ಈಗ ಬೊಮ್ಮಾಯಿ ಕೈ ಬಿಟ್ಟು ಮೋದಿ ಅವರ ಮುಖ ತೋರಿಸಲು ಹೊರಟಿದ್ದಾರೆ ಎಂದರು.
ತಾಜಾ ಸುದ್ದಿ