
Image Credit source: Weather.com
Monsoon 2022: ಇಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು (Monsoon) ಮಳೆಯ ಅಬ್ಬರ ಶುರುವಾಗಿದೆ. ಇಂದಿನಿಂದ 4 ದಿನ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ (Bangalore Rains) ಇಂದು ಮಳೆ ಹೆಚ್ಚಾಗುವುದರಿಂದ ಹಳದಿ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ. ಮುಂಗಾರು ಆಗಮನದಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಂಭವವಿದೆ. ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲೂ ಧಾರಾಕಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂದು ರಾಜ್ಯಾದ್ಯಂತ ಮಳೆಯ ಜೊತೆಗೆ ಗುಡುಗು, ಸಿಡಿಲು ಮಿಂಚಿನ ಎಚ್ಚರಿಕೆಯನ್ನೂ ನೀಡಲಾಗಿದೆ. ಮುಂದಿನ 4 ದಿನಗಳವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ.
ಇಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳು, ಕೇರಳ, ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆ ಮುಂದುವರೆದಿದೆ.