Karnataka Weather Today: ಚಿಕ್ಕಮಗಳೂರಿನ ಕಳಸ, ಶೃಂಗೇರಿ, ಕೊಪ್ಪ, ಶಿವಮೊಗ್ಗದ ಸಾಗರ, ತೀರ್ಥಹಳ್ಳಿ, ಹೊಸನಗರ, ಹುಂಚದಕಟ್ಟೆ ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ. ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಮುಂಗಾರು ಮಳೆ (Monsoon) ಬಿರುಸುಗೊಂಡಿದೆ. ಕೊಡಗು, ಹಾಸನ, ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ, ಇಂದು (ಆ. 9) ಕರಾವಳಿಯಲ್ಲಿ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮಲೆನಾಡಿನಲ್ಲಿ ಇಂದು ಮಳೆ (Rainfall) ಮುಂದುವರೆಯಲಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ವಿಶೇಷವಾಗಿ ತುಂಗಾ ಮತ್ತು ಭದ್ರಾ ನದಿಗಳ ಸಮೀಪವಿರುವ ಗ್ರಾಮಗಳಲ್ಲಿ ಭಾರೀ ಮಳೆಯ ನಂತರ ಹಲವಾರು ನದಿಗಳು ಉಕ್ಕಿ ಹರಿಯುತ್ತಿವೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟೆಯಿಂದ ತುಂಗಭದ್ರಾ ನದಿಗೆ ಕನಿಷ್ಠ 1 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. 1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟೆಯಲ್ಲಿ ಈಗಾಗಲೇ ನೀರಿನ ಮಟ್ಟ 1,631 ಅಡಿ ತಲುಪಿದೆ. ಸಮತೋಲನ ಕಾಯ್ದುಕೊಳ್ಳಲು 1 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ತುಂಗಭದ್ರಾ ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ.