Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ | Karnataka Rain Red Alert for Coastal Malnad Districts Rain to Continue in Bengaluru


Karnataka Rain: ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದುವರಿದ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಬೆಂಗಳೂರಿನಲ್ಲಿ ಸತತ ಮಳೆ ಸುರಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿಡುವುಕೊಡದೆ ಸುರಿಯುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸತತ 10 ದಿನಗಳಿಂದ ಮಳೆ ಬೀಳುತ್ತಲೇ ಇದ್ದು, ಸೂರ್ಯನ ದರ್ಶನವೇ ಅಪರೂಪ ಎನಿಸಿದೆ. ನಗರದ ಶಾಂತಿನಗರ, ಮೆಜೆಸ್ಟಿಕ್, ನಾಗರಬಾವಿ ಮತ್ತು ಜಯನಗರ ಬಡಾವಣೆಗಳಲ್ಲಿ ಗುರುವಾರ ಜೋರು ಮಳೆಯೇ ಸುರಿಯಿತು. ಮಳೆಗೆ ಬೇಸತ್ತಿರುವ ಜನರು ರಸ್ತೆಗೆ ಬರಲು ಹಿಂಜರಿಯುತ್ತಿದ್ದಾರೆ. ರಸ್ತೆಗಳಲ್ಲಿ ವಾಹನ ಸಂಚಾರವೂ ಕಡಿಮೆಯಿದೆ. ರಾಜ್ಯದ ಇತರ ನಗರಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇನ್ನೂ ಒಂದು ವಾರ ಮುಂದುವರಿಯುವ ಸಾಧ್ಯತೆಯಿದೆ. ನವೆಂಬರ್ 23ರವರೆಗೆ ಭಾರಿ ಮಳೆ ನಿರೀಕ್ಷಿತ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಭೀತಿ ಎದುರಾಗಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಳೆ ಸಾಧ್ಯತೆ ಕುರಿತು ‘ಟಿವಿ9 ಕನ್ನಡ ಡಿಜಿಟಲ್​’ಗೆ ಪ್ರತಿಕ್ರಿಯಿಸಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ತಜ್ಞ ಡಾ.ಆರ್​.ಎಚ್.ಪಾಟೀಲ್, ಉತ್ತರ ಕರ್ನಾಟಕದಲ್ಲಿ ಇನ್ನೂ 2 ದಿನ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದಿದ್ದಾರೆ. ಮುಂದಿನ 48 ಗಂಟೆ ಧಾರಾಕಾರ ಮಳೆಯಾಗಲಿದೆ. ನ.24ರವರೆಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ವಾಯುಭಾರ ಕುಸಿತ ಪರಿಣಾಮ ಮೋಡಗಳು ದಕ್ಷಿಣದಿಂದ ಈಗ ಉತ್ತರ ಕರ್ನಾಟಕದತ್ತ ಚಲಿಸಿವೆ. ನಮ್ಮ ರಾಜ್ಯದ ದಕ್ಷಿಣ ಭಾಗದಂತೆ ಈಗ ಉತ್ತರ ಭಾಗದಲ್ಲಿಯೂ ನ.19 ಮತ್ತು 20ರಂದು ಸಾಕಷ್ಟು ಮಳೆಯಾಗಲಿದೆ. ಮಳೆಯಿಂದಾಗಿ ಹಿಂಗಾರು ಬೆಳೆಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹಿಂಗಾರು ಬೆಳೆಯಲ್ಲಿ‌ ನೀರು ನಿಲ್ಲದಂತೆ ರೈತರು ಮುಂಜಾಗ್ರತೆ ವಹಿಸಬೇಕು. ಗದ್ದೆಗಳಲ್ಲಿ ಬಸಿಗಾಲುವೆ ಮಾಡಿಕೊಳ್ಳಬೇಕು. ಮಳೆ ಪರಿಸ್ಥಿತಿ ಗಮನಿಸಿಕೊಂಡೇ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ದೇವರ ಹುಬ್ಬಳ್ಳಿ ಸುತ್ತಮುತ್ತ 459 ಹೆಕ್ಟೇರ್‌ ಪ್ರದೇಶದಲ್ಲಿದ್ದ ಅಪಾರ ಬೆಳೆಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆಗಳು ಬಿತ್ತನೆಯಾಗಿದ್ದವು.

ಮನೆಗೆ ಹೋಗಲು ಪರದಾಟ
ಬೆಂಗಳೂರಿನಲ್ಲಿ ಶಾಲೆ-ಕಾಲೇಜುಗಳಿಗೆ ಹೋಗಿದ್ದ ವಿದ್ಯಾರ್ಥಿಗಳು ತುಂತುರು ಮಳೆ ಹಿನ್ನೆಲೆಯಲ್ಲಿ ಮನೆಗಳಿಗೆ ಹಿಂದಿರುಗಲು ಪರದಾಡುವಂತಾಯಿತು. ಬಸ್‌ಗಳನ್ನು ಸ್ಟಾಪ್​ನಿಂದ ದೂರ ನಿಲ್ಲಿಸುತ್ತಿರುವುದು ವಿದ್ಯಾರ್ಥಿಗಳ ತೊಂದರೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೋಲಾರದಲ್ಲಿಯೂ ಮಳೆ ಬೆಂಬಿಡದೆ ಸುರಿಯುತ್ತಿದೆ. ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜೋರು ಮಳೆಯಾಗುತ್ತಿದೆ. ಮಳೆ ನಡುವೆಯೂ ಕೋಲಾರ ಬಂದ್ ಯಶಸ್ವಿಯಾಗಿದೆ.

ವರದಿ ಬಂದ ಬಳಿಕ ಪರಿಹಾರ: ಸಿಎಂ ಭರವಸೆ
ಬೆಳೆ ಹಾನಿ ಬಗ್ಗೆ ವರದಿ ಬಂದ ಬಳಿಕ ಪರಿಹಾರ ಘೋಷಿಸುವುದಾಗಿ ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಮಳೆಯಿಂದ ಬೆಳೆ ಹಾನಿ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಪರಿಹಾರವನ್ನು ಘೋಷಿಸಲಾಗುವುದು. ನಿನ್ನೆ ಅಧಿಕಾರಿಗಳ ಜೊತೆ ಬೆಳೆ ಹಾನಿ ಬಗ್ಗೆ ಸಭೆ ಮಾಡಿ, ಹಾನಿ ಕುರಿತು ಸಮೀಕ್ಷಾ ವರದಿ ಸಲ್ಲಿಸಲು ಸೂಚಿಸಿದ್ದೇನೆ ಎಂದರು.

ಇದನ್ನೂ ಓದಿ: Chennai Rains: ತಮಿಳುನಾಡಿನಲ್ಲಿ ನ.21ರವರೆಗೂ ಭಯಂಕರ ಮಳೆ ಸಾಧ್ಯತೆ; ಪರಿಸ್ಥಿತಿ ನಿಭಾಯಿಸಲು ವಾರ್​ ರೂಂ ನಿರ್ಮಾಣ
ಇದನ್ನೂ ಓದಿ: ಕರಾವಳಿಯಲ್ಲಿ 3 ದಿನ ಭಾರೀ ಮಳೆ; ಬೆಂಗಳೂರಿನಲ್ಲಿ ಹಳದಿ ಅಲರ್ಟ್ ಘೋಷಣೆTV9 Kannada


Leave a Reply

Your email address will not be published. Required fields are marked *