Karnataka Rains: ಕರ್ನಾಟಕದ ಹಲವೆಡೆ ನಿರಂತರ ಮಳೆ; ಯಾವ ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ? ವಿವರ ಇಲ್ಲಿದೆ | Karnataka Rains Heavy Rainfall Holiday announced for School Colleges in many districts of Karnataka


Karnataka Rains: ಕರ್ನಾಟಕದ ಹಲವೆಡೆ ನಿರಂತರ ಮಳೆ; ಯಾವ ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜು ರಜೆ? ವಿವರ ಇಲ್ಲಿದೆ

ಮಳೆಯಲ್ಲಿ ನೆನೆಯುತ್ತಾ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆ ಹಿನ್ನೆಲೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಾಳೆ (ನವೆಂಬರ್ 20) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ, ಕೋಲಾರ ಜಿಲ್ಲೆಯಲ್ಲಿ, ತುಮಕೂರು, ರಾಮನಗರ, ಮೈಸೂರು, ಧಾರವಾಡ ಹಾಗೂ ಹಾವೇರಿ ಜಿಲ್ಲೆಯಲ್ಲಿ ಮಳೆ ಹಿನ್ನೆಲೆ ನಾಳೆ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಚಿಕ್ಕಬಳ್ಳಾಪುರ, ತುಮಕೂರು, ಹಾವೇರಿ ಮುಂತಾದೆಡೆ ಅಪಾರ ಪ್ರಮಾಣದ ಬೆಳೆ ನಾಶ
ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಮಹಾ ಮಳೆ ಕಾರಣದಿಂದ ಜಿಲ್ಲೆಯಲ್ಲಿ 83 ಸಾವಿರ ಹೆಕ್ಟರ್ ನಲ್ಲಿದ್ದ ರಾಗಿ ಜೋಳ ನೆಲಗಡಲೆ ಭತ್ತ ಹಾನಿಯಾಗಿದೆ. 2600 ಹೆಕ್ಟರ್ ಪ್ರದೇಶದಲ್ಲಿದ್ದ ತರಕಾರಿ ಹೂ ಹಣ್ಣು ಬೆಳೆಗಳು ಹಾಳಾಗಿದೆ. ಜಿಲ್ಲೆಯಲ್ಲಿದ್ದ 24 ಸೇತುವೆಗಳು ಹಾನಿಯಾಗಿವೆ. 1 ಬೃಹತ್ ಕೆರೆ ಒಡೆದು ಹಾಳಾಗಿದೆ. ಸಣ್ಣ ನೀರಾವರಿ ಇಲಾಖೆಯ 80ರಷ್ಟು ಕೆರೆಗಳು ತುಂಬಿ ಕೋಡಿ ಹರಿದಿವೆ. ಜಿ.ಪಂ.ನ 1092 ಕೆರೆಗಳು ತುಂಬಿವೆ, ಜಿಲ್ಲೆಯ ನದಿ ನಾಳೆಗಳು ತುಂಬನಿ ಹರಿಯುತ್ತಿವೆ. ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಮಾಹಿತಿ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಮಳೆ ನೀರು ರೈತರ ಹೊಲಗಳಿಗೆ ನುಗ್ಗಿ ಹರಿಯುತ್ತಿದೆ. ಮಳೆ ನೀರು ಕೆರೆ ಹಳ್ಳದಂತೆ ಹರಿಯುತ್ತಿದೆ. ಕಟಾವಿಗೆ ಬಂದಿದ್ದ ಜೋಳದ ಹೊಲದಲ್ಲಿ ನೀರು ತುಂಬಿ ಹರಿದಿದೆ. ಹೀಗಾಗಿ ಜೋಳ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತರದ್ದಾಗಿದೆ. ಜಿಲ್ಲಾದ್ಯಂತ ಒಟ್ಟು 14 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಜೋಳ, ಭತ್ತ, ರಾಗಿ, ತೊಗರಿ, ಶೇಂಗಾ ಬೆಳೆ ಹಾನಿ ಆಗಿದೆ. ರೈತರ ಹೊಲಗಳು ಕೆರೆಯಂತಾಗಿದೆ. ಮಳೆಗೆ ಜಿಲ್ಲಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶ್ ಪುರ ಗ್ರಾಮದ ಬಳಿ ಘಟನೆ ನಡೆದಿದೆ.

ಹಾಸನ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ನಾಶ ಆಗಿದೆ. 1,105 ಎಕರೆ ರಾಗಿ, 650 ಎಕರೆ ಜೋಳದ ಬೆಳೆ ನಾಶ ಉಂಟಾಗಿದೆ. ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ‌ ತಾಲೂಕಿನ ಎತ್ತಿನಕಟ್ಟೆ, ಕವಳಿಕೆರೆ, ಈಚನಹಳ್ಳಿ, ಮುದ್ಸನಹಳ್ಳಿ ಭಾಗದಲ್ಲಿ ಭಾರಿ ಮಳೆಯಿಂದ ಬೆಳೆ ನಾಶ ಉಂಟಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕ ರಾಜ್ಯಾದ್ಯಂತ ಭಾರೀ ಮಳೆ; ಅಪಾರ ಪ್ರಮಾಣದ ಬೆಳೆ, ಆಸ್ತಿ ಹಾನಿ- ವಿವರ ಇಲ್ಲಿದೆ

ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ಮಳೆ ಅನಾಹುತದಿಂದ ಮೂವರ ಸಾವು, ಕಡಪ ಜಿಲ್ಲೆಯಲ್ಲಿ 30 ಜನ ನಾಪತ್ತೆ

TV9 Kannada


Leave a Reply

Your email address will not be published. Required fields are marked *