Karnataka Rains: ಕರ್ನಾಟಕ ರಾಜ್ಯಾದ್ಯಂತ ಭಾರೀ ಮಳೆ; ಅಪಾರ ಪ್ರಮಾಣದ ಬೆಳೆ, ಆಸ್ತಿ ಹಾನಿ- ವಿವರ ಇಲ್ಲಿದೆ | Heavy Rainfall Karnataka Rains Farmers Problem Rain Updates details here


Karnataka Rains: ಕರ್ನಾಟಕ ರಾಜ್ಯಾದ್ಯಂತ ಭಾರೀ ಮಳೆ; ಅಪಾರ ಪ್ರಮಾಣದ ಬೆಳೆ, ಆಸ್ತಿ ಹಾನಿ- ವಿವರ ಇಲ್ಲಿದೆ

ಮಳೆಯಲ್ಲಿ ಓಡುತ್ತಿರುವ ವಿದ್ಯಾರ್ಥಿನಿ (ಸಂಗ್ರಹ ಚಿತ್ರ)

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಮಹಾ ಮಳೆ ಕಾರಣದಿಂದ ಜಿಲ್ಲೆಯಲ್ಲಿ 83 ಸಾವಿರ ಹೆಕ್ಟರ್ ನಲ್ಲಿದ್ದ ರಾಗಿ ಜೋಳ ನೆಲಗಡಲೆ ಭತ್ತ ಹಾನಿಯಾಗಿದೆ. 2600 ಹೆಕ್ಟರ್ ಪ್ರದೇಶದಲ್ಲಿದ್ದ ತರಕಾರಿ ಹೂ ಹಣ್ಣು ಬೆಳೆಗಳು ಹಾಳಾಗಿದೆ. ಜಿಲ್ಲೆಯಲ್ಲಿದ್ದ 24 ಸೇತುವೆಗಳು ಹಾನಿಯಾಗಿವೆ. 1 ಬೃಹತ್ ಕೆರೆ ಒಡೆದು ಹಾಳಾಗಿದೆ. ಸಣ್ಣ ನೀರಾವರಿ ಇಲಾಖೆಯ 80ರಷ್ಟು ಕೆರೆಗಳು ತುಂಬಿ ಕೋಡಿ ಹರಿದಿವೆ. ಜಿ.ಪಂ.ನ 1092 ಕೆರೆಗಳು ತುಂಬಿವೆ, ಜಿಲ್ಲೆಯ ನದಿ ನಾಳೆಗಳು ತುಂಬನಿ ಹರಿಯುತ್ತಿವೆ. ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಮಾಹಿತಿ ನೀಡಿದ್ದಾರೆ.

ಕಂದವಾರ ಕೆರೆಯ ನೀರು ಚಿಕ್ಕಬಳ್ಳಾಪುರಕ್ಕೆ ನುಗ್ಗಿದ ಹಿನ್ನೆಲೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಭೇಟಿ ನೀಡಿದ್ದಾರೆ. ನಗರದ ಶನಿಮಹಾತ್ಮ ದೇಗುಲದ ಬಳಿ ಬ್ರಿಡ್ಜ್ ಜಲಾವೃತ ಆಗಿದೆ. ಮುಂಜಾಗ್ರತೆ ಕ್ರಮಕ್ಕಾಗಿ ಬ್ರಿಡ್ಜ್ ಮೇಲೆ ವಾಹನ ಸಂಚಾರ ನಿಷೇಧ ಹೇರಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಗೆ 300 ಕೋಟಿಯಷ್ಟು ಹಾನಿ ಉಂಟಾಗಿದೆ. ಸುಮಾರು 300 ಕೋಟಿ ರೂಪಾಯಿಯಷ್ಟು ಹಾನಿ ಸಂಭವಿಸಿದೆ. ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಫುರ ಜಿಲ್ಲಾಧಿಕಾರಿ ಲತಾ ಆರ್ ಮಾಹಿತಿ ನೀಡಿದ್ದಾರೆ. 157 ಪಂಚಾಯಿತಿಗಳ ಪೈಕಿ 80 ಪಂಚಾಯಿತಿಗಳಲ್ಲಿ ಮಳೆ ಆಗಿದೆ. ಜಿಲ್ಲೆಯಾದ್ಯಂತ ಮಳೆಯಿಂದಾಗಿ 360 ಮನೆಗಳಿಗೆ ಹಾನಿ ಉಂಟಾಗಿದೆ. ಮಳೆಯಿಂದ 46 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಜಿಲ್ಲೆಯಾದ್ಯಂತ 31 ಕಾಳಜಿ ಕೇಂದ್ರಗಳನ್ನ ತೆರೆಯಲಾಗಿದೆ. ಈಗಾಗಲೇ ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ.ಆರ್ ಮಾಹಿತಿ ನೀಡಿದ್ದಾರೆ.

ತುಮಕೂರು: ಜೋಳ, ಭತ್ತ, ರಾಗಿ, ತೊಗರಿ, ಶೇಂಗಾ ಬೆಳೆ ಹಾನಿ
ತುಮಕೂರು ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಮಳೆ ನೀರು ರೈತರ ಹೊಲಗಳಿಗೆ ನುಗ್ಗಿ ಹರಿಯುತ್ತಿದೆ. ಮಳೆ ನೀರು ಕೆರೆ ಹಳ್ಳದಂತೆ ಹರಿಯುತ್ತಿದೆ. ಕಟಾವಿಗೆ ಬಂದಿದ್ದ ಜೋಳದ ಹೊಲದಲ್ಲಿ ನೀರು ತುಂಬಿ ಹರಿದಿದೆ. ಹೀಗಾಗಿ ಜೋಳ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ರೈತರದ್ದಾಗಿದೆ. ಜಿಲ್ಲಾದ್ಯಂತ ಒಟ್ಟು 14 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಜೋಳ, ಭತ್ತ, ರಾಗಿ, ತೊಗರಿ, ಶೇಂಗಾ ಬೆಳೆ ಹಾನಿ ಆಗಿದೆ. ರೈತರ ಹೊಲಗಳು ಕೆರೆಯಂತಾಗಿದೆ. ಮಳೆಗೆ ಜಿಲ್ಲಾದ್ಯಂತ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೇಶ್ ಪುರ ಗ್ರಾಮದ ಬಳಿ ಘಟನೆ ನಡೆದಿದೆ.

ಬಾಗಲಕೋಟೆ: ರಸ್ತೆಯ ಕೆಸರಿನಲ್ಲಿ ಕೆಎಸ್​ಆರ್​ಟಿಸಿ ಬಸ್ ಸಿಲುಕಿ ಪರದಾಟ
ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಕೆಸರಿನಲ್ಲಿ ಕೆಎಸ್​ಆರ್​ಟಿಸಿ ಬಸ್ ಸಿಲುಕಿ ಪರದಾಟ ಉಂಟಾಗಿದೆ. ಇಳಕಲ್​​ನ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಜಿಟಿಜಿಟಿ ಮಳೆಯಿಂದ ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಬಸ್ ಸಿಲುಕಿದೆ. ಕೆಸರಿನಲ್ಲಿ KSRTC ಬಸ್ ಸಿಲುಕಿ ಪ್ರಯಾಣಿಕರು ಪರದಾಡುವಂತಾಗಿದೆ.

ಹಾಸನ: 1,105 ಎಕರೆ ರಾಗಿ, 650 ಎಕರೆ ಜೋಳದ ಬೆಳೆ ನಾಶ
ಹಾಸನ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ಬೆಳೆ ನಾಶ ಆಗಿದೆ. 1,105 ಎಕರೆ ರಾಗಿ, 650 ಎಕರೆ ಜೋಳದ ಬೆಳೆ ನಾಶ ಉಂಟಾಗಿದೆ. ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ‌ ತಾಲೂಕಿನ ಎತ್ತಿನಕಟ್ಟೆ, ಕವಳಿಕೆರೆ, ಈಚನಹಳ್ಳಿ, ಮುದ್ಸನಹಳ್ಳಿ ಭಾಗದಲ್ಲಿ ಭಾರಿ ಮಳೆಯಿಂದ ಬೆಳೆ ನಾಶ ಉಂಟಾಗಿದೆ.

ಕೊಪ್ಪಳ: ತುಂಗಭದ್ರಾ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ
ಭಾರಿ ಮಳೆಯಿಂದ ತುಂಗಭದ್ರಾ ಡ್ಯಾಂ ಒಳ ಹರಿವು ಹೆಚ್ಚಳ ಆಗಿದೆ. ನದಿಗೆ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆ ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ ಕೊಡಲಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ಭಾಗದ ಜನರಿಗೆ ಮೈಕ್, ತಮಟೆ ಮೂಲಕ ಅಧಿಕಾರಿಗಳಿಂದ ಸಂದೇಶ ನೀಡಿದ್ದಾರೆ. ತಾಲೂಕು ಪಂಚಾಯಿತಿ ಅಧಿಕಾರಿಗಳಿಂದ ಸೂಚನೆ ನೀಡಲಾಗಿದೆ.

ಕೋಲಾರ: ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃತದೇಹ ಪತ್ತೆ
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಎ.ಕೊತ್ತೂರು ಎಂಬಲ್ಲಿ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಮೃತದೇಹ ಪತ್ತೆ ಆಗಿದೆ. 20 ಗಂಟೆಗಳ ಬಳಿಕ ಪತ್ತೆಯಾದ ಅಮರಾವತಮ್ಮ ಮೃತದೇಹ ಸಿಕ್ಕಿದೆ. ಎ.ಕೊತ್ತೂರು ಬಳಿ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶವ ಪತ್ತೆಹಚ್ಚಿದ್ದಾರೆ.

ಕೋಲಾರದಲ್ಲಿ ಭಾರಿ ಮಳೆಯಿಂದಾಗಿ ಕಚೇರಿಗಳು ಜಲಾವೃತ ಆಗಿವೆ. ಸರ್ಕಾರಿ ಅಧಿಕಾರಿಗಳ ಬಂಗಲೆ‌ಗಳು, ಕಚೇರಿಗಳು ಜಲಾವೃತ ಆಗಿವೆ. ಭಾರಿ ಮಳೆಯಿಂದ ಕೋಲಾರದ ಸಾರಿಗೆ ಕಚೇರಿ, ಎಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮನೆಗಳು ಜಲಾವೃತ ಆಗಿವೆ.

ಕೋಲಾರದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕೋಲಾರಮ್ಮ ಕೆರೆಯ ಕೋಡಿ ಪ್ರದೇಶದ ಸೇತುವೆ ಕುಸಿಯುವ ಭೀತಿ ಉಂಟಾಗಿದೆ. ಸೇತುವೆ ಪ್ರದೇಶದಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಜನರು ಹಾಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೋಲಾರದ ಕೋಲಾರಮ್ಮ ಕೆರೆಯಿಂದ ರಭಸವಾಗಿ ಹರಿಯುತ್ತಿರುವ ನೀರಿಗೆ ಸೇತುವೆ ಕಲ್ಲುಗಳು ಕೊಚ್ಚಿಹೋಗಿವೆ. ಒಂದು ಕಾಲದ ಹಳೇ ಮದ್ರಾಸ್ ರಸ್ತೆಯ ಪುರಾತನ ಸೇತುವೆ, ಕೋಲಾರದ ಗಾಂಧಿನಗರ ಬಳಿ ಇರುವ ಸೇತುವೆ ಕಲ್ಲುಗಳು ಕೊಚ್ಚಿಹೋಗಿವೆ.

ಹಾಸನ: 3 ಎಕರೆಯಲ್ಲಿ ಬೆಳೆದಿದ್ದ ರಾಗಿ ನಾಶ
ಭಾರಿ ಮಳೆಯಿಂದಾಗಿ 3 ಎಕರೆಯಲ್ಲಿ ಬೆಳೆದಿದ್ದ ರಾಗಿ ನಾಶ ಆಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರಾಮ ಎಂ.ಎಂ.ಹಳ್ಳಿಕೊಪ್ಪಲು ಎಂಬಲ್ಲಿ ರಾಗಿ ಬೆಳೆ ನಾಶ ಆಗಿದೆ. ರೈತ ದೊಡ್ಡೇಗೌಡ ಎಂಬುವವರ ರಾಗಿ ಸಂಪೂರ್ಣ ನಾಶ ಆಗಿದೆ. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಮನವಿ ನೀಡಿದ್ದಾರೆ.

ಹಾವೇರಿ: ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ
ಹಾವೇರಿ ಜಿಲ್ಲೆಯಲ್ಲಿ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿದೆ. ನಾಳೆ‌ ಜಿಲ್ಲೆಯ ಎಲ್ಲ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ನೀಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ. 2 ದಿನ ಮಳೆ‌ ಮುನ್ಸೂಚನೆ ಹಿನ್ನೆಲೆ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.

ಇದನ್ನೂ ಓದಿ: ಚಿಕ್ಕಾಬಳ್ಳಾಪುರದಲ್ಲೂ ಭಾರಿ ಮಳೆ; ಉಕ್ಕಿ ಹರಿಯುತ್ತಿದೆ ಚಿತ್ರಾವತಿ ನದಿ, ರಸ್ತೆಗಳ ಮೇಲೆ ಐದಡಿ ನೀರು!

ಇದನ್ನೂ ಓದಿ: ಆಂಧ್ರ ಪ್ರದೇಶದಲ್ಲಿ ಮಳೆ ಅನಾಹುತದಿಂದ ಮೂವರ ಸಾವು, ಕಡಪ ಜಿಲ್ಲೆಯಲ್ಲಿ 30 ಜನ ನಾಪತ್ತೆ

TV9 Kannada


Leave a Reply

Your email address will not be published. Required fields are marked *