ಮಳೆಯಿಂದಾಗಿ ಜಲಾವೃತ ಪ್ರದೇಶ
ಬೆಂಗಳೂರು: ಕರ್ನಾಟಕ ರಾಜ್ಯದ ವಿವಿಧೆಡೆ ಇಂದು (ನವೆಂಬರ್ 17) ಕೂಡ ಮಳೆ ಆಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ತೀವ್ರ ಮಳೆಯಿಂದಾಗಿ ಹಲವೆಡೆ ಸಮಸ್ಯೆ ಉಂಟಾಗಿದೆ. ಜನಜೀವನ, ಸಂಚಾರ, ಚರಂಡಿ ವ್ಯವಸ್ಥೆ ಜೊತೆಗೆ ಹಳ್ಳಿಗಳಲ್ಲಿ ಕೃಷಿ ಕಾರ್ಯಗಳಿಗೆ, ರೈತಾಪಿ ವರ್ಗಕ್ಕೆ ಮಳೆಯಿಂದ ಅಪಾರ ಸಮಸ್ಯೆ ಎದುರಾಗಿದೆ. ಇಂದು ಕೂಡ ಮಳೆ ಬಿಟ್ಟಿಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ಸಂಜೆ ಬಳಿಕ ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಮಳೆ ಅಬ್ಬರ ಜೋರಾಗಿದೆ. ಭಾರಿ ಮಳೆಗೆ ಕೆ.ಆರ್. ಪೇಟೆಯ ಬಸ್ ನಿಲ್ದಾಣ ಜಲಾವೃತ ಆಗಿದೆ. ಕೆರೆಯಂತಾದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಪಟ್ಟಣದಲ್ಲಿ ಅಂಗಡಿಗಳಿಗೂ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮೈಸೂರು ನಗರದಲ್ಲಿ ಮಳೆಯಿಂದ ಅಂಗಡಿ ಮಳಿಗೆ ಕುಸಿತಗೊಂಡಿದೆ. ಅಶೋಕ್ ರಸ್ತೆಯ ಸಿಸಿಬಿ ಕಚೇರಿ ಸಮೀಪ ಘಟನೆ ನಡೆದಿದೆ. ಮಳೆಯಿಂದಾಗಿ ಶಿಥಿಲಾವಸ್ಥೆ ತಲುಪಿದ್ದ ಅಂಗಡಿ ಮಳಿಗೆ ಕುಸಿತಗೊಂಡಿದೆ. ‘
ಇತ್ತ ಕೋಲಾರ ಜಿಲ್ಲೆಯಾದ್ಯಂತ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಜಿಲ್ಲಾ ಹವಾಮಾನ ಘಟಕ ಮಳೆ ಮುನ್ಸೂಚನೆ ನೀಡಿದೆ. ಇಂದಿನಿಂದ ನವೆಂಬರ್ 21 ರ ವರೆಗೆ ಭಾರಿ ಮಳೆ ಸಾಧ್ಯತೆ ಎಂದು ಹೇಳಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡ ಸಂಜೆ ಬಳಿಕ ದಿನನಿತ್ಯ ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣವು ಕಂಡುಬರುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಭಾರಿ ಮಳೆ ಆಗಿದೆ. ಮಳೆ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸವಾರರ ಪರದಾಟ ಕಂಡುಬಂದಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಾಳೆ ಕೂಡ ಭಾರಿ ಮಳೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Tamil Nadu Rain: ತಮಿಳುನಾಡಿನಲ್ಲಿ ಮಳೆಯ ಅಬ್ಬರ; ಚೆನ್ನೈ ಸೇರಿ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಇದನ್ನೂ ಓದಿ: ‘ಮುಂಗಾರು ಮಳೆ 2’ ನಟಿ ನೇಹಾ ಶೆಟ್ಟಿ ಆಕರ್ಷಕ ಫೋಟೋಶೂಟ್