ಕರ್ನಾಟಕದಲ್ಲಿ ಸತತ ಮಳೆ ಮುಂದುವರಿದಿದೆ
ಬೆಂಗಳೂರು: ಭಾರಿ ಮಳೆಯಿಂದಾಗಿ ದೇವನಹಳ್ಳಿ ಸುತ್ತಮುತ್ತಲ ಪ್ರತಿಷ್ಠಿತ ವಿಲ್ಲಾಗಳು ಜಲಾವೃತಗೊಂಡಿವೆ. ವಿಲ್ಲಾ, ಫ್ಲ್ಯಾಟ್ಗಳಿಗೆ ತೆರಳಲು ಸಾಧ್ಯವಾಗದೆ ನಿವಾಸಿಗಳ ಪರದಾಡುತ್ತಿದ್ದಾರೆ. ಹಿರಾನಂದನಿ ವಿಲ್ಲಾ, ಫ್ಲ್ಯಾಟ್ಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಒತ್ತುವರಿ ನೀರು ಕಟ್ಟಡಕ್ಕೆ ನುಗ್ಗಿ ಅವಾಂತರವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. 15 ಅಡಿಗಳಿದ್ದ ರಾಜಕಾಲುವೆಯನ್ನು ಮುಚ್ಚಿ 8 ಅಡಿಗಳ ಚರಂಡಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಾಲುವೆ ಮುಚ್ಚಿದ ಹಿನ್ನೆಲೆ ಇದೀಗ ನೀರು ನಿಂತು ಜನರು ಪರದಾಡುವಂತಾಗಿದೆ.
ಅಂಡರ್ಪಾಸ್ ನೀರಿನಲ್ಲಿ ನಿಂತ ಬಸ್
ಹಾವೇರಿ ಜಿಲ್ಲೆ ರಾಣೆಬೆನ್ನೂರು ಬಳಿಯಿರುವ ದೇವರಗುಡ್ಡ ರೈಲ್ವೆ ಅಂಡರ್ಪಾಸ್ನಲ್ಲಿ ನಿಂತಿದ್ದ ನೀರಿನಲ್ಲಿ ಬಸ್ ಸಿಲುಕಿ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಸ್ನಲ್ಲಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಏಣಿ ಮೂಲಕ ಪ್ರಯಾಣಿಕರು, ಡ್ರೈವರ್, ಕಂಡಕ್ಟರ್ರನ್ನು ರಕ್ಷಿಸಿದರು. ಈ ಬಸ್ ರಾಣೆಬೆನ್ನೂರಿನಿಂದ ಕನವಳ್ಳಿಗೆ ಹೊರಟಿತ್ತು. ರಾಣೆಬೆನ್ನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ. ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಿರುವುದರಿಂದ ಪ್ರತಿಬಾರಿ ಮಳೆ ಬಂದಾಗಲೂ ಅಂಡರ್ಬ್ರಿಡ್ಜ್ನಲ್ಲಿ ನೀರು ತುಂಬಿಕೊಂಡು ಜನರು ಸಂಕಷ್ಟ ಎದುರಿಸುತ್ತಾರೆ.
ಶಿಥಿಲ ಕಟ್ಟಡ ಬಳಸದಂತೆ ಸೂಚನೆ
ಬೆಂಗಳೂರು: ರಾಜ್ಯಾದ್ಯಂತ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶಿಥಿಲಗೊಂಡ ಕಟ್ಟಡಗಳನ್ನು ಬಳಸಬಾರದು ಎಂದು ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಬಿಇಒಗಳಿಗೆ ಸುತ್ತೋಲೆ ಮೂಲಕ ಸೂಚಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣ ಅನುದಾನ ಅಥವಾ ಇತರ ಅನುದಾನಗಳಡಿ ಕಟ್ಟಡಗಳ ದುರಸ್ತಿ ಮಾಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
ಇದನ್ನೂ ಓದಿ: ಮಳೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿ, ನಿರಾಶ್ರಿತರನ್ನು ಆರೈಕೆ ಮಾಡಿ: ಎಸ್ಡಿಆರ್ಎಫ್ ಸಭೆಯಲ್ಲಿ ಸೂಚನೆ