ರಾತ್ರಿ ಸುರಿದ ಮಳೆಯಿಂದಾಗಿ ಮದನರಾವ್ ಪಾಟೀಲ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಶೆಡ್ ಕುಸಿದು ಬಿದ್ದು 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ.

ಶೆಡ್ ಕುಸಿದು ಬಿದ್ದು 8 ಸಾವಿರ ಕೋಳಿಗಳ ಸಾವು
ಬೆಂಗಳೂರು: ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆ ಆಗುವ ಸಾಧ್ಯತೆ ಇದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ರಾಜ್ಯದ ಹಲವು ಕಡೆ ಮಳೆಯಾಗುತ್ತಿದೆ. ಬೇಸಿಗೆ ಮೊದಲ ಮಳೆ ರಾಜ್ಯದ ಹಲವೆಡೆ ಭಾರಿ ಅವಾಂತರ ಸೃಷ್ಟಿಸಿದೆ. ಬೀದರ್ ಜಿಲ್ಲೆಯ ಹಲವೆಡೆ ಸುರಿದ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಭಾಲ್ಕಿ ತಾಲೂಕಿನ ಕೂಡ್ಲಿ ಗ್ರಾಮದಲ್ಲಿ ಮಳೆಗೆ 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಗಾಳಿ, ಮಳೆಗೆ ಶೆಡ್ ಕುಸಿದು ಬಿದ್ದು ಕೋಳಿಗಳ ಮಾರಣಹೋಮವಾಗಿದೆ.
ಮಾರ್ಚ್ 17ರ ರಾತ್ರಿ ಸುರಿದ ಮಳೆಯಿಂದಾಗಿ ಮದನರಾವ್ ಪಾಟೀಲ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಶೆಡ್ ಕುಸಿದು ಬಿದ್ದು 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ಮದನರಾವ್ ಕಂಗಾಲಾಗಿದ್ದಾರೆ. ಇನ್ನು ಭಾಲ್ಕಿ ತಾಲೂಕಿನಲ್ಲೇ ಅಪಾರ ಪ್ರಮಾಣದ ಬೆಳೆ ಹಾನಿ, ಮನೆಗಳು ಕುಸಿದಿವೆ. ಕೂಡ್ಲಿ, ನಾಗರಾಳ, ನಿಟ್ಟೂರು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಭಾರಿ ಗಾಳಿ, ಮಳೆಗೆ ಬೃಹತ್ ಗಾತ್ರದ ಮರಗಳು ನೆಲಕ್ಕುರುಳಿವೆ.
ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಟೊಮ್ಯಾಟೋ ಬೆಳೆ ನಾಶ
ಯಾದಗಿರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಅಪಾರ ಬೆಳೆ ನಾಶವಾಗಿದೆ. ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆಗೆ ದೊಡ್ಡಪ್ಪ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಟೊಮ್ಯಾಟೋ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನೇನು 20 ದಿನ ಕಳೆದ್ರೆ ಬೆಳೆ ಕೈಗೆ ಬರ್ತಾಯಿತ್ತು. ಆದ್ರೆ ಅಕಾಲಿಕ ಆಲಿಕಲ್ಲು ಸಹಿತ ಭಾರಿ ಮಳೆಗೆ ಬೆಳೆ ನಾಶವಾಗಿದೆ ಎಂದು ರೈತ ತಮ್ಮ ಅಳಲು ತೋಡಿಕೊಂಡಿದ್ದಾರೆ.