Karnataka Weather Today: ಇಂದಿನಿಂದ 4 ದಿನ ಕರ್ನಾಟಕದಲ್ಲಿ ಮಳೆ; ನಾಳೆ ಒಡಿಶಾಗೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ | Karnataka Weather Today: Cyclone Jawad Hits Odisha, Andhra Pradesh on Saturday Karnataka Rain


Karnataka Weather Today: ಇಂದಿನಿಂದ 4 ದಿನ ಕರ್ನಾಟಕದಲ್ಲಿ ಮಳೆ; ನಾಳೆ ಒಡಿಶಾಗೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ

ಮಳೆ

Bengaluru Rain: ಇನ್ನೇನು ಮಳೆಗಾಲ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಆರ್ಭಟಿಸಲು ಶುರು ಮಾಡಿದ ಮಳೆರಾಯನಿಂದ ರೈತರು ಕಂಗಾಲಾಗಿದ್ದರು. ಭಾರೀ ಮಳೆಯಿಂದ ರೈತರು ಬೆಳೆದ ಬೆಳೆಗಳು ಕೊಳೆತು ಹೋಗುತ್ತಿವೆ. ಕಟಾವಿಗೆ ಬಂದ ಫಸಲನ್ನು ಒಣಗಿಸಲು ಸಾಧ್ಯವಾಗದೆ ಭತ್ತ, ಅಡಿಕೆ, ಕಾಫಿ ಮುಂತಾದ ಬೆಳೆಗಾರರು ಕಂಗಾಲಾಗಿದ್ದಾರೆ. ಇದರ ನಡುವೆ ಇದೀಗ ಚಂಡಮಾರುತದ ಆತಂಕವೂ ಎದುರಾಗಿದ್ದು, ನಾಳೆ (ಶನಿವಾರ) ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಜವಾದ್ ಚಂಡಮಾರುತ (Cyclone Jawad) ಆರ್ಭಟಿಸಲಿದೆ. ಇದರ ಪರಿಣಾಮವಾಗಿ ಕರ್ನಾಟಕದಾದ್ಯಂತ ಡಿ. 6ರವರೆಗೂ ವರುಣನ ಆರ್ಭಟವಿರಲಿದೆ.

ಇಂದು ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಕಲಬುರ್ಗಿ, ವಿಜಯಪುರ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ. ಇಂದಿನಿಂದ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನು, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಜವಾದ್ ಚಂಡಮಾರುತದ ಭೀತಿ ಆವರಿಸಿದೆ. ಜವಾದ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜವಾದ್ ಚಂಡಮಾರುತದಿಂದಾಗಿ, ಪಶ್ಚಿಮ ಬಂಗಾಳದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆಗಳಲ್ಲಿ ಡಿಸೆಂಬರ್ 4ರಂದು ಭಾರೀ ಮಳೆಯಾಗಬಹುದು. ಹಾಗೇ, ಇಂದು ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ನಾಳೆ ನಿಜಕ್ಕೂ ಭಾರತಕ್ಕೆ ಚಂಡಮಾರುತ ಅಪ್ಪಳಿಸಿದರೆ ಇದು 2021ರ ಐದನೇ ಚಂಡಮಾರುತವಾಗಲಿದೆ. ಈ ಚಂಡಮಾರುತಕ್ಕೆ ಈಗಾಗಲೇ ಜವಾದ್ ಎಂದು ಹೆಸರಿಡಲಾಗಿದೆ. ಸೌದಿ ಅರೇಬಿಯಾದ ಪ್ರಕಾರ ಜವಾದ್ ಎಂದರೆ ಅರೇಬಿಕ್ ಭಾಷೆಯಲ್ಲಿ ಉದಾರ ಅಥವಾ ಕರುಣಾಮಯಿ ಎಂದರ್ಥ. ಇಂದು ಚಂಡಮಾರುತ ಸಹಿತ ಮಳೆಯಾಗುವುದರಿಂದ ಆಂಧ್ರಪ್ರದೇಶಕ್ಕೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಕೂಡ ಭಾನುವಾರದಿಂದ ಮಳೆ ಹೆಚ್ಚಾಗಲಿದ್ದು, ಸೋಮವಾರ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಭಾರತದಲ್ಲಿ ನಾಳೆಯಿಂದ ಜವಾದ್ ಚಂಡಮಾರುತ ಅಪ್ಪಳಿಸುವುದರಿಂದ ಇಂದು ಉನ್ನತ ಅಧಿಕಾರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಆಂಧ್ರಪ್ರದೇಶ, ಒಡಿಶಾದ ಪ್ರವಾಹ ಹಾಗೂ ಚಂಡಮಾರುತದ ಬಗ್ಗೆ ಅಧಿಕಾರಿಗಳಿಂದ ಪ್ರಧಾನಮಂತ್ರಿ ಮೋದಿ ಮಾಹಿತಿ ಪಡೆದಿದ್ದು, ಇಂದು ನಡೆಯುವ ಸಭೆಯಲ್ಲಿ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಒಡಿಶಾದ 14 ಜಿಲ್ಲೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲು ಸರ್ಕಾರ ಸೂಚಿಸಿದೆ.

TV9 Kannada


Leave a Reply

Your email address will not be published. Required fields are marked *