ಮಳೆ
Bengaluru Rain: ಕರ್ನಾಟಕದ ಕರಾವಳಿ, ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆ ಹೆಚ್ಚಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನೀಡಿದೆ. ಹಾಗೇ, ಕಳೆದ ವಾರದಿಂದ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದಾರೆ ಮತ್ತು 15ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ.
ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಸತತ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯ 11 ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿದೆ. ಜಲಾಶಯದ ಎರಡು ಗೇಟ್‌ಗಳಿಂದ 900 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿ, ವಾಯುಭಾರ ಕುಸಿತದಿಂದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಮುಂದುವರೆಯಲಿದೆ. ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪರಿಣಾಮ ಚೆನ್ನೈ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮಳೆ ಮತ್ತು ಪ್ರವಾಹ ಉಂಟಾಗಿದೆ. ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸಿದೆ. ಕರಾವಳಿಯಲ್ಲಿ ಇಂದು ಗಂಟೆಗೆ 40ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Rainfall Forecast: Widespread light to moderate rains with isolated heavy rains likely over Malnad, NIK, and SIK districts and widespread very light to moderate rains likely over Coastal Karnataka districts.
Thunderstorm with lightning likely at isolated places over the State. pic.twitter.com/idwbSyhCsl— KSNDMC (@KarnatakaSNDMC) November 15, 2021
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕ ಮತ್ತು ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಒಡಿಶಾ ಮತ್ತು ಮಧ್ಯ ಮಹಾರಾಷ್ಟ್ರದಲ್ಲಿ ಗುಡುಗು ಸಹಿತ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಗಂಗಾನದಿ ಪಶ್ಚಿಮ ಬಂಗಾಳ, ಕೊಂಕಣ ಮತ್ತು ಗೋವಾ, ಮರಾಠವಾಡ, ಛತ್ತೀಸ್‌ಗಢ ಮತ್ತು ತೆಲಂಗಾಣದಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ವಾಯುಭಾರ ಕುಸಿತದ ಪ್ರಭಾವದಿಂದ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಶುಕ್ರವಾರದವರೆಗೆ ಭಾರೀ ಮಳೆ ಸುರಿಯಲಿದೆ.
ಇದನ್ನೂ ಓದಿ: Karnataka Rain: ಇಂದಿನಿಂದ 3 ದಿನ ಮಲೆನಾಡು, ಕರಾವಳಿ, ಬೆಂಗಳೂರಿನಲ್ಲಿ ಮಳೆ; ಚಳಿಗಾಳಿಯೂ ಹೆಚ್ಚಳ
Karnataka Weather Today: ಶಿವಮೊಗ್ಗ, ಬೆಂಗಳೂರು, ಕೊಡಗು ಸೇರಿ 9 ಜಿಲ್ಲೆಗಳಲ್ಲಿ ಮಳೆಯಿಂದ ಹಳದಿ ಅಲರ್ಟ್ ಘೋಷಣೆ